Advertisement

ಚೆಲ್ಲಿದರು ಕಾಫಿಯಾ…

02:45 PM Oct 06, 2018 | Team Udayavani |

ಬೆಂಗಳೂರಿನ ಬಹುತೇಕ ಕಚೇರಿಗಳಂತೆ ಅದೂ ಒಂದು ಕಚೇರಿ. ಆ ಕಚೇರಿಯಲ್ಲೊಂದು ಕಾಫಿ ಮಶೀನು. 24
ಗಂಟೆಯೂ ಅಲ್ಲಿ ಕಾಫಿ ಲಭ್ಯ. ಕಾಫಿಯದೇ ಸುಗಂಧವನ್ನು ಹಿಡಿದಿಟ್ಟಿರುವ ಆ ಕೋಣೆಯಲ್ಲಿ ಕಾಫಿ ರುಚಿಗೆ ಮರುಳಾಗಿರುವ ವ್ಯಕ್ತಿಯೊಬ್ಬ ನಿಂತಿದ್ದಾನೆ. ಪುಟ್ಟ ಪೇಪರ್‌ ಲೋಟದಲ್ಲಿ ಹಬೆಯಾಡುತ್ತಿರುವ ಕಾಫಿ ತುಂಬಿಸಿಕೊಂಡು ಟೇಬಲ್‌ ಮೇಲೆ ಒಂದರೆ ಕ್ಷಣ ಇಟ್ಟವನು ಮತ್ತೆ ಲೋಟಕ್ಕೆ ಕೈ ಹಾಕುವಷ್ಟರಲ್ಲಿ ಪ್ರಮಾದ ನಡೆದುಹೋಗಿತ್ತು. ಕೈ ತಪ್ಪಿ ಕಾಫಿ ಚೆಲ್ಲಿತು.

Advertisement

ಪುಣ್ಯಕ್ಕೆ ಕೆಳಗೆ ಕಾಗದದ ಮೇಲೆ ಚೆಲ್ಲಿತು. ಟೇಬಲ್‌ ಕ್ಲಾತ್‌ ಉಳಿಸಲು ಹೋಗಿ ಕಾಗದ ಬಲಿಯಾಗಿತ್ತು! ಬೇರೆ ಯಾರೋ ಆಗಿದ್ದರೆ ಆ ಕಾಗದವನ್ನು ಗಲೀಜೆಂದು ನೀಟಾಗಿ ಮುದ್ದೆ ಮಾಡಿ ಕಸ ಬುಟ್ಟಿಗೆ ಎಸೆದುಬಿಡುತ್ತಿದ್ದರು. ಆದರೆ, ವಿಶ್ವನಾಥ್‌ ನಾಯ್ಕ ಹಾಗೆ ಮಾಡಲಿಲ್ಲ. ಅವರಿಗೆ ಆ ಕಾಗದ ಮೇಲೆ ಬೇರೇನೋ ಕಂಡಿತ್ತು. ಆ ಕ್ಷಣದಲ್ಲಿಯೇ ಬೆರಳಿನಲ್ಲೇ ಕಾಫಿಯನ್ನು ಹರಡಿ ಒಂದು ಚಿತ್ರವನ್ನು ಸೃಷ್ಟಿಸಿಬಿಟ್ಟರವರು. ಒಂದು ನಿಮಿಷಕ್ಕೆ ಬೆರಳೇ ಕುಂಚವಾಗಿತ್ತು! ಪ್ರಿಂಟೌಟ್‌ ತೆಗೆದ ಹಾಗಿದ್ದ ಆ ಕಾಫಿ ಚಿತ್ರವನ್ನು ವಿಶ್ವನಾಥ್‌, ತಾವೇ ಕೈಯಾರೆ ಮಾಡಿ ದ್ದೆಂದು ಹೇಳಿದಾಗ ಕಛೇರಿಯಲ್ಲಿ ಯಾರೂ ನಂಬಲಿಲ್ಲವಂತೆ. ಕಲೆ, ಕಲಾವಿದನೊಬ್ಬನನ್ನು ತನ್ನ ತೆಕ್ಕೆಗೆ ಬರಸೆಳೆದುಕೊಂಡಿದ್ದು ಹೀಗೆ.

ಕಾಫಿಯಲ್ಲಿ ಹೆಣ್ಣಿನ ಸೌಗಂಧ
ಇಲ್ಲಿಯವರೆಗೂ ಕಾಫಿಯನ್ನು ಬಳಸಿಕೊಂಡು ಹಲವಾರು ಚಿತ್ರಗಳನ್ನು ಬರೆದಿದ್ದಾರೆ. ಇಂಟರ್‌ನೆಟ್‌ ನಲ್ಲಿ ಇವರ ಚಿತ್ರಗಳನ್ನು ನೋಡಿ ಇಷ್ಟಪಟ್ಟವರು ಈ ಚಿತ್ರಗಳನ್ನು ಕೊಂಡುಕೊಂಡಿದ್ದಾರೆ. ತೋಚಿದ್ದನ್ನು ಗೀಚಿದ ಕಾಗದವನ್ನೇ ಫ್ರೆàಮ್‌ ಹಾಕಿಸಿ ಕೊಂಡೊಯ್ದವರೂ ಇದ್ದಾರೆ! ಫೇಸ್‌ಬುಕ್‌ನಲ್ಲಿ ವಿಶ್ವನಾಥ್‌ರಿಗೆ ಸಾವಿರಾರು ಅಭಿಮಾನಿಗಳ ದಂಡೇ ಇದೆ. ಯಾವಾಗ ಹೊಸತನ್ನು ಅಪ್‌ಲೋಡ್‌ ಮಾಡುತ್ತಾರೆಂದು ಅವರೆಲ್ಲ ಕಾದು ಕುಳಿತಿರುತ್ತಾರೆ.

ಕಾಫಿ ಲೋಟದ ಕಾಲು ಭಾಗವಷ್ಟೇ ಇವರ ಚಿತ್ರಕ್ಕೆ ಸಾಕಾಗುತ್ತದೆ. ವಿಶ್ವನಾಥ್‌ ಬಿಡಿಸಿರುವ ಕಾಫಿ ಕಲೆಯನ್ನು ನೋಡುತ್ತಿದ್ದರೆ ಅದರಲ್ಲಿ ಹೆಣ್ಮಕ್ಕಳದೇ ಚಿತ್ರಗಳಿರುವುದು ತಿಳಿಯುತ್ತದೆ. ಅದಕ್ಕೆ ಕಾರಣವೇನೆಂದು ಕೇಳಿದಾಗ ಕಲಾವಿದರಿಗೆ ಹೆಣ್ಣೇ ಸ್ಫೂರ್ತಿ ಎಂದು ಕಣ್ಣು ಮಿಟುಕಿಸುತ್ತಾರೆ. ಅವರು ಗಮನಿಸಿದಂತೆ ಹೆಣ್ಣಿನ ಚಿತ್ರವನ್ನು ಒಂದು ಒಂದು  ಗೆರೆಯ ಮೂಲಕ ವ್ಯಕ್ತಪಡಿಸಬಹುದು, ಅದು ಸುಂದರವಾಗಿಯೂ ಇರುತ್ತದೆ. ಅಷ್ಟರಿಂದಲೇ ಒನಪು, ಒಯ್ನಾರ ಮಾತ್ರವಲ್ಲದೆ ಹೆಣ್ಣಿನ ಅಂತರಾಳವನ್ನೂ ಹಿಡಿದಿಡಬಹುದಂತೆ. ಆದರೆ, ಪುರುಷರ ಚಿತ್ರವಾದರೆ ಹೆಚ್ಚಿನ ಗೆರೆಗಳು ಬೇಕಂತೆ.

ಕಾರ್ಪೊರೇಷನ್‌ ಶಾಲೆ ಟು ಅನಿಮೇಷನ್‌
ವಿಶ್ವನಾಥ್‌ ಅವರ ವೈಶಿಷ್ಟéವನ್ನು ಹೇಳಬೇಕು.ಅವರು ಕಾಫಿ ಆರ್ಟ್‌ ಒಂದೇ ಅಲ್ಲ, ಕೈಗೆ ಸಿಕ್ಕ ಎಲ್ಲಾ ವಸ್ತುಗಳಿಂದ ಕಲೆಯನ್ನು ಸೃಜಿಸಬಲ್ಲರು, ಸೀಮೆ ಸುಣ್ಣ, ತೆಂಗಿನ ಕಾಯಿ, ಬಾಳೆಹಣ್ಣು ಹೀಗೆ ಎಲ್ಲ ವನ್ನೂ ಕಲಾಕೃತಿಯನ್ನಾಗಿಸಬಲ್ಲರು. ದಶಕಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ವಿಶ್ವನಾಥ್‌ ಅವರ ಹುಟ್ಟೂರು ಶಿರಾ ತಾಲೂಕಿನ ಎಮ್ಮೇರಹಳ್ಳಿ ತಾಂಡಾ.

Advertisement

ಓದಿದ್ದು ಬೆಂಗಳೂರಿನ ಕಾರ್ಪೊರೇಷನ್‌ ಶಾಲೆಯಲ್ಲಿ. ಅಂದಹಾಗೆ, ವಿಶ್ವನಾಥ್‌ ಚಿತ್ರಕಲೆಯನ್ನು ಶಾಸ್ತ್ರೀಯವಾಗಿ ಕಲಿತವರಲ್ಲ. ವಿದ್ಯಾರ್ಥಿ ಜೀವನದಲ್ಲಿ ಚಿತ್ರಕಲೆಯ ವಿದ್ಯಾರ್ಥಿಗಳ ವಿರುದ್ಧ ಸ್ಪರ್ಧೆಗಳಲ್ಲಿ ಮೆಡಲ್‌ ಗೆಲ್ಲುತ್ತಿದ್ದುದನ್ನು ವಿನಮ್ರತೆಯಿಂದ ನೆನೆಸಿಕೊಳ್ಳುತ್ತಾರವರು. ಯಾರ ಬಳಿಯೂ ಚಿತ್ರಕಲೆ ಕಲಿಯದ ಹುಡುಗ, ಚಿತ್ರಕಲಾ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ ಪ್ರಶಸ್ತಿ ಪಡೆಯುತ್ತಿದ್ದಾಗ ಅನೇಕರು ಹುಬ್ಬೇರಿಸಿದ್ದರಂತೆ. ಅದನ್ನೇ ಸವಾಲಾಗಿ ಸ್ವೀಕರಿಸಿದ ವಿಶ್ವನಾಥ್‌, ಕಾಲೇಜು ಶಿಕ್ಷಣ ಮುಗಿಸಿ ಮುಂದೆ ಅನಿಮೇಷನ್‌ ಸಂಸ್ಥೆ ಯೊಂದ ರಲ್ಲಿ ಕೆಲಸಕ್ಕೆ ಸೇರಿದಾಗ ಚಿತ್ರಕಲೆ ಯನ್ನು ಶಾಸ್ತ್ರೀಯ ವಾಗಿ ಅಭ್ಯಸಿಸಿದರು. ಆಯಿಲ್‌ ಪೇಂಟಿಂಗ್‌, ಪೆನ್ಸಿಲ್‌ ಸ್ಕೆಚ್‌, ಚಾರ್‌ಕೋಲ್‌ ಪೇಂಟಿಂಗ್‌ ಮುಂತಾದ ಚಿತ್ರಕಲಾ ಪ್ರಕಾರಗಳಲ್ಲಿ ಅವರೀಗ ಸಿದ್ಧ ಹಸ್ತರು. ವಾರಾಂತ್ಯದ ದಿನಗಳಲ್ಲಿ ಮಕ್ಕಳಿಗೆ ಚಿತ್ರಕಲೆ ಹೇಳಿಕೊಡುತ್ತಾರೆ. ಚಿತ್ರಕಲೆಯ ಬಗ್ಗೆ ಝೀರೊ ತಿಳಿದುಕೊಂಡಿರುವವರಿಗೂ ಆ ಹಂತದಿಂದಲೇ ಚಿತ್ರಕಲೆ ಹೇಳಿಕೊಡುವುದು ಅವರ ವಿಶೇಷತೆ.

ಮೂರು ದಿನದ ಚಿತ್ರಕಲಾ ಪ್ರದರ್ಶನ
ವಿಶ್ವನಾಥ್‌ ಅವರ ಚಿತ್ರಕಲಾ ಪ್ರದರ್ಶನ ನೋಡಲಿಚ್ಚಿಸುವವರು ವೆಂಕಟಪ್ಪ ಗ್ಯಾಲರಿಗೆ ಭೇಟಿ ನೀಡಬಹುದು. ವಿಶ್ವನಾಥ್‌ ಜೊತೆಗೆ ಅಮಿತ್‌ ಶರ್ಮಾ ಮತ್ತು ರೋಲಿ ಸಾಗರ್‌ ಅವರ ಕಲಾಚಿತ್ರಗಳನ್ನೂ ಪ್ರದರ್ಶನದಲ್ಲಿ ನೋಡಬಹುದು. 
ಎಲ್ಲಿ?: ವೆಂಕಟಪ್ಪ ಆರ್ಟ್‌ ಗ್ಯಾಲರಿ, ಕಸ್ತೂರ್‌ಬಾ ರಸ್ತೆ ಯಾವಾಗ?: ಅ. 8-  11

ಹವನ 

Advertisement

Udayavani is now on Telegram. Click here to join our channel and stay updated with the latest news.

Next