ಬೆಂಗಳೂರು: ಬೆಂಗಳೂರು ಮಹಾನಗರ ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತು ಬಿಜೆಪಿ ವತಿಯಿಂದ ಬುಧವಾರ ರಾಜ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗಿದೆ.
ವಿಧಾನ ಪರಿಷತ್ ಚುನಾವಣಾ ಪ್ರಚಾರ ಕಾರ್ಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಅವರವರ ಪಕ್ಷ ಕೈಗೊಂಡಿದ್ದ ಜನಪರ ಕೆಲಸ, ಸಾಧನೆಗಳನ್ನು ಹೇಳಿ ಮತ ಯಾಚಿಸುವುದು ಸಹಜ. ಆದರೆ, ಬೆಂಗಳೂರು ಮಹಾನಗರ ವಿಧಾನ ಪರಿಷತ್‍ಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಶ್ರೀ ಯೂಸುಫ್ ಶರೀಫ್ ಬಾಬು (ಕೆ.ಜಿ.ಎಫ್.ಬಾಬು) ಅವರು ತಮ್ಮ ಚುನಾವಣಾ ಪ್ರಚಾರದ ಭಾಷಣದುದ್ದಕ್ಕೂ ಮತದಾರರಿಗೆ ಹಲವು ರೀತಿಯ ಆಮಿಷವನ್ನು ತೋರಿಸುತ್ತಿದ್ದಾರೆ. ಧನಬಲದ ಮುಖಾಂತರ ದಿನವೂ ಲಕ್ಷ, ಲಕ್ಷ ರೂಪಾಯಿ ಖರ್ಚು ಮಾಡುತ್ತಾ ಮತದಾರರನ್ನು ಹಣದಿಂದ ಸೆಳೆಯಲು ಮುಂದಾಗಿದ್ದಾರೆ ಎಂದು ದೂರಿನಲ್ಲಿ ಗಮನ ಸೆಳೆಯಲಾಗಿದೆ.
ರೂ. 5,000, ರೂ.10 ಸಾವಿರ, 50 ಸಾವಿರ, ಒಂದು ಲಕ್ಷ ಜೀವಿವಿಮೆ ಲೆಕ್ಕದಲ್ಲಿ ತಲಾ ರೂ. 5 ಲಕ್ಷ -ಹೀಗೆ ರೂ. 500 ಕೋಟಿಗೂ ಅಧಿಕ ಹಣವನ್ನು ನನ್ನನ್ನು ಗೆಲ್ಲಿಸಿದರೆ ನಿಮಗೆ ಕೊಡುತ್ತೇನೆ ಎಂದು ಮತದಾರಿಗೆ ಬಹಿರಂಗವಾಗಿ ಹೇಳುತ್ತಿದ್ದಾರೆ. ಇದನ್ನೇ ಮಾಧ್ಯಮದವರ ಮುಂದೆಯೂ ಹೇಳಿದ ವಿಡಿಯೋ ಕ್ಲಿಪಿಂಗ್ ಕೂಡ ಇದೆ. ಅದರ ವಿಡಿಯೋ ಲಿಂಕ್ ಕೊಡಲಾಗಿದೆ ಎಂದು ವಿವರ ಕೊಡಲಾಗಿದೆ.
ಈ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ನೇರವಾಗಿ ಉಲ್ಲಂಘಿಸಿದ್ದು ಕಾಣುತ್ತಿದೆ. ಅವರು ತಮ್ಮದೇ ಆದ ಚುನಾವಣಾ ಪ್ರಣಾಳಿಕೆಯನ್ನು ಮುದ್ರಿಸಿ ಮತದಾರರಿಗೆ ಹಂಚುತ್ತಿದ್ದಾರೆ. ಸರಕಾರಿ ಕಾರ್ಯ ಯೋಜನೆಯ ಮಾದರಿ ಇವರು ತಮ್ಮ ಸ್ವಂತ ಪ್ರಣಾಳಿಕೆ ಮಾಡಿ ಹಂಚುತ್ತಿರುವುದು ಹಾಗೂ ಇದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಂತೆ ಕಾಣುತ್ತಿರುವುದು ಅತ್ಯಂತ ವಿಷಾದನೀಯ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಹಣಬಲವೇ ಬಂಡವಾಳವಾಗಿರುವ ಕೆ.ಜಿ.ಎಫ್.ಬಾಬು ಅವರ ರಾಜಕೀಯ ಬಂಡವಾಳ ಏನು ಎಂಬುದು ಪ್ರಶ್ನಾರ್ಹ. ಮೇಲಿನ ಎಲ್ಲ ವಿವರಕ್ಕೆ ಕೆ.ಜಿ.ಎಫ್.ಬಾಬು ಅವರೇ ಮಾತನಾಡಿದ್ದರ ಬಗ್ಗೆ, ಅವರ ಚುನಾವಣಾ ಪ್ರಣಾಳಿಕೆಯನ್ನು ಸಹ ಈ ದೂರಿನ ಜೊತೆ ಲಗತ್ತಿಸಲಾಗಿದೆ. ಚುನಾವಣಾ ನೀತಿ ಸಂಹಿತೆಯನ್ನು ಇದಕ್ಕಿಂತ ಹೆಚ್ಚು ಉಲ್ಲಂಘನೆ ಮಾಡಲಿಕ್ಕೆ ಸಾಧ್ಯವಿಲ್ಲ ಎನ್ನುವಷ್ಟು ಉಲ್ಲಂಘನೆಯಾಗಿದ್ದಕ್ಕೆ ಪ್ರತ್ಯಕ್ಷ ಸಾಕ್ಷಿಗಳಿವೆ. ಈ ಮೇಲಿನ ಅಂಶಗಳನ್ನು ಅವಲೋಕಿಸಿ, ಕಾಂಗ್ರೆಸ್ ಅಭ್ಯರ್ಥಿಯಾದ ಕೆ.ಜಿ.ಎಫ್.ಬಾಬು ಅವರ ಅಭ್ಯರ್ಥಿತನವನ್ನು ಸ್ಪರ್ಧೆಯಿಂದಲೇ ಅನರ್ಹಗೊಳಿಸಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್. ರವಿಕುಮಾರ್, ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಮತ್ತು ಮುಖಂಡರಾದ ವಿಜಯ್ ಪ್ರಸಾದ್, ಶ್ರೀನಾಥ್ ಅವರು ದೂರು ಸಲ್ಲಿಸುವ ವೇಳೆ ಹಾಜರಿದ್ದರು.