ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ತೆರವಾಗಿರುವ ಕುಲಪತಿ ಹುದ್ದೆಗೆ ಕುಲಪತಿ ಸಂಶೋಧನಾ ಸಮಿತಿ ಸರ್ಕಾರಕ್ಕೆ ಅಂತಿಮ ವರದಿ ನೀಡಿ ಎರಡು ವಾರ ಕಳೆದಿವೆ. ತೆರವಾಗಿರುವ ಕ್ಷೇತ್ರಗಳಿಗೆ ವಿಧಾನಸಭೆ ಉಪ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ನೇಮಕಕ್ಕೆ ನೀತಿ ಸಂಹಿತೆ ತೊಡಕಾಗುತ್ತದೆ ಎಂದು ಸರ್ಕಾರ ಹಿಂದೇಟು ಹಾಕುತ್ತಿದೆ.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಪ್ರೊ| ಸಬಿಹಾ ಭೂಮಿಗೌಡ ಅವರ ನಿವೃತ್ತಿಯಿಂದಾಗಿ ಜೂ.19ರಿಂದ ಕುಲಪತಿಸ್ಥಾನ ತೆರವಾಗಿದೆ. ತೆರವಾಗಿರುವ ಕುಲಪತಿ ಸ್ಥಾನಕ್ಕೆ ಸಮಾಜ ವಿಜ್ಞಾನ ವಿಭಾಗದ ಡೀನ್ ಓಂಕಾರ ಕಾಕಡೆ ಅವರನ್ನು ಜೂ.20ರಂದು ಹಂಗಾಮಿ ಕುಲಪತಿಯಾಗಿ ರಾಜ್ಯಪಾಲರು ನೇಮಿಸಿದ್ದಾರೆ.
ಪೂರ್ಣಾವಧಿ ಕುಲಪತಿ ನೇಮಕಕ್ಕಾಗಿ ಸರ್ಕಾರ ತುಮಕೂರು ವಿವಿ ಕುಲಪತಿ ಸಿದ್ದೇಗೌಡ ಅಧ್ಯಕ್ಷತೆಯಲ್ಲಿ ಕುಲಪತಿ ಶೋಧನಾ ಸಮಿತಿ ರಚಿಸಿತ್ತು. ಶೋಧನಾ ಸಮಿತಿ ಸೆ.4ರಂದು ಚರ್ಚಿಸಿ ಅಂತಿವಾಗಿ ಸೆ.17ರಂದು ಸಭೆ ನಡೆಸಿ ಮೂವರಹೆಸರುಗಳನ್ನು ಉನ್ನತ ಶಿಕ್ಷಣ ಇಲಾಖೆ ಸಚಿವಾಲಯಕ್ಕೆ ಕಳಿಸಿದೆ. ಉನ್ನತ ಶಿಕ್ಷಣ ಖಾತೆ ಹೊಂದಿರುವ ಡಿಸಿಎಂ ಅಶ್ವತ್ಥನಾರಾಯಣ ಅವರು ಕ್ವಾರಂಟೈನ್ ಆಗಿದ್ದರು.ಕಾರಣ ವಿವಿ ಕುಲಪತಿ ಹುದ್ದೆಗೆ ಸಮಿತಿ ಮಾಡಿರುವ ಅಂತಿಮ ಮೂವರ ಹೆಸರಿನ ಶಿಫಾರಸು ಕಡತ ಮುಖ್ಯಮಂತ್ರಿ ಕಚೇರಿಗೆ ರವಾನಿಸುವಲ್ಲಿ ವಿಳಂಬವಾಗಿದೆ ಎನ್ನಲಾಗಿದೆ.
ಇದೀಗ ಉನ್ನತ ಶಿಕ್ಷಣ ಇಲಾಖೆ ಕಚೇರಿಯಿಂದ ಸಿಎಂ ಕಚೇರಿಗೆ ಮಹಿಳಾ ವಿವಿ ಕುಲಪತಿ ನೇಮಕ ಶಿಫಾರಸು ಕಡತ ರವಾನೆ ಆಗಿದೆ. ಆದರೆ ಸರ್ಕಾರ ಈ ಕಡತವನ್ನು ರಾಜ್ಯಪಾಲರ ಸಹಿಗಾಗಿ ಕಳಿಸಲು ನೀತಿ ಸಂಹಿತೆ ಎದುರಾಗಿದೆ.
ಸರ್ಕಾರದ ಜಿಜ್ಞಾಸೆ ಏನು?: ರಾಜ್ಯದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆರ್. ಆರ್.ನಗರ, ಶಿರಾ ವಿಧಾನಸಭೆ ಕ್ಷೇತ್ರಗಳಲ್ಲಿಈಗಾಗಲೇ ಉಪ ಚುನಾವಣೆ ಘೋಷಣೆ ಆಗಿದೆ. ಅಲ್ಲದೇ ಪದವೀಧರರ ಕ್ಷೇತ್ರಕ್ಕೂ ಚುನಾವಣೆಘೋಷಣೆಯಾಗಿದೆ. ಅಕ್ಕಮಹಾದೇವಿ ಮಹಿಳಾ ವಿವಿ ರಾಜ್ಯ ವ್ಯಾಪ್ತಿ ಹೊಂದಿದೆ. ಒಂದೊಮ್ಮೆ ಕುಲಪತಿ ನೇಮಕ ಮಾಡಿದಲ್ಲಿ ಕುಲಪತಿಯಾಗಿ ನೇಮಕಗೊಂಡವರ ಜಾತಿಯವರ ಮೇಲೆಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ನೀತಿ ಸಂಹಿತೆ ಅನ್ವಯ ಆಗಬಹುದೇ ಎಂದು ಸರ್ಕಾರ ಜಿಜ್ಞಾಸೆಯಲ್ಲಿ ತೊಡಗಿದೆ.
ಕುಲಪತಿ ಸ್ಥಾನ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದ್ದಾಗಿದ್ದು ರಾಜಕೀಯಕ್ಕೆ ಇದು ಅನ್ವಯ ಆಗದು. ಅಂತಿಮವಾಗಿ ರಾಜ್ಯಪಾಲರ ಕಚೇರಿಯಿಂದ ನೇಮಕಾತಿ ಆದೇಶ ಹೊರಡುವ ಕಾರಣ ನೀತಿ ಸಂಹಿತೆ ಅನ್ವಯಿಸದು ಎಂಬ ವಾದವೂ ಕೇಳ ಬಂದಿದೆ. ಒಂದೊಮ್ಮೆ ಚುನಾವಣಾ ಆಯೋಗಈ ಕುರಿತು ಸ್ಪಷ್ಟೀಕರಿಸಿದಲ್ಲಿ ಒಂದೆರಡು ದಿನಗಳಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆಕುಲಪತಿ ನೇಮಕವಾಗಲಿದೆ. ನೀತಿ ಸಂಹಿತೆ ಅನ್ವಯಿಸುತ್ತದೆ ಎಂದಾದರೆ ನವೆಂಬರ್ ತಿಂಗಳವರೆಗೆ ಕುಲಪತಿ ನೇಮಕ ಮುಂದೂಡಿಕೆ ಆಗುವ ಸಾಧ್ಯತೆ ಇದೆ.
ಯಾರ್ಯಾರ ಹೆಸರು ಶಿಫಾರಸು? : ಮೂಲಗಳ ಪ್ರಕಾರ ಬಳ್ಳಾರಿಯ ವಿಜಯನಗರ ವಿವಿ ರಿಜಿಸ್ಟ್ರಾರ್ ತುಳಸಿಮಾಲಾ (ಒಬಿಸಿ), ಬೆಂಗಳೂರು ವಿವಿ ಗೋಮತಿದೇವಿ (ಪಪಂ) ಹಾಗೂ ಮಂಗಳೂರು ವಿವಿ ವಿಶ್ರಾಂತ ಕುಲಪತಿ ಎಂ.ಐ. ಸವದತ್ತಿ ಅವರ ಪುತ್ರಿ ಕಲಬುರ್ಗಿ ಕೇಂದ್ರೀಯ ವಿವಿ ಅರ್ಥಶಾಸ್ತ್ರ ವಿಭಾಗದ ಪುಷ್ಪಾ ಸವದತ್ತಿ (ಲಿಂಗಾಯತ) ಹೆಸರು ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ಖಚಿತ ಪಡಿಸಿವೆ.
– ಜಿ.ಎಸ್.ಕಮತರ