ದೇವನಹಳ್ಳಿ: ಜಿಲ್ಲೆಯಲ್ಲಿ ಬಿಸಿಲಿನ ಆರ್ಭಟ ನಿಧಾನಕ್ಕೆ ಶುರುವಾಗುತ್ತಿದ್ದಂತೆ ಜನಸಾಮಾನ್ಯರು ತತ್ತರಗೊಂಡು ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದು, ಇದರಿಂದಾಗಿ ತಂಪುಪಾನೀಯ ದರ ಸಮರಕ್ಕೆ ಈಗಾಗಲೇ ಜನರ ಕೈಸುಟ್ಟುಕೊಳ್ಳುವಂತಾಗಿದೆ.
ಜಿಲ್ಲೆಯಲ್ಲಿ ಈ ಬಾರಿಯೂ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಸೂರ್ಯ ಜನರ ನೆತ್ತಿ ಸುಡುವುದರ ಜೊತೆಗೆ ಮೈ ಬೆವರನ್ನು ಇಳಿಸುತ್ತಿದ್ದಾನೆ. ಇದರಿಂದ ಜನರು ಸುಸ್ತಾಗಿ ದಾಹ ನೀಗಿಸಿಕೊಳ್ಳಲು ತಂಪು ಪಾನೀಯ, ಕಬ್ಬಿನ ಹಾಲು, ಎಳೆನೀರು, ಮಜ್ಜಿಗೆ, ನಿಂಬೆಹಣ್ಣಿನ ರಸದ ಮೊರೆ ಹೋಗಿದ್ದಾರೆ.
ಹೊರಗೆ ಬರಲು ಹಿಂದೇಟು: ಬಯಲು ಸೀಮೆಯ ಜಿಲ್ಲೆಗಳಲ್ಲಿ ಸದ್ಯಕ್ಕೆ ಧಗಧಗನೆ ಬಿಸಿಲೇರಿ ಜನರ ನೆತ್ತಿ ಸುಡುತ್ತಿದ್ದು, ಮಕ್ಕಳು, ಮಹಿಳೆಯರು, ವಯೋವೃದ್ಧರು ಬಿಸಿಲಿನ ಪರಿಣಾಮ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಸತತ ಮೂರು ವರ್ಷಗಳಿಂದ ಜಿಲ್ಲಾದ್ಯಂತ ಉತ್ತಮ ಮಳೆಯಾಗಿದ್ದು ಕೆರೆ, ಕುಂಟೆಗಳಲ್ಲಿ ನೀರು ತುಂಬಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಜಿಲ್ಲೆ ಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇಲ್ಲದೆ ಇದ್ದರೂ, ಬಿಸಿಲಿನ ಆರ್ಭಟ ಮಾತ್ರ ಜನರನ್ನು ಕಂಗೆಡಿಸಿದೆ.
ಬಿಸಿಲಿನ ಅನುಭವಕ್ಕೆ ಬೆಚ್ಚಿಬೀಳುತ್ತಿರುವ ನಾಗರಿಕರು: ಬೇಸಿಗೆ ಪ್ರಾರಂಭದಲ್ಲೇ ಉರಿಬಿಸಿಲಿನ ಅನುಭವಕ್ಕೆ ಬೆಚ್ಚಿ ಬೀಳುತ್ತಿರುವ ನಾಗರಿಕರು ಮಾರ್ಚ್, ಏಪ್ರಿಲ್, ಮೇ ತಿಂಗಳು ಹೇಗಪ್ಪಾ ಕಳೆಯುವುದು ಎಂಬ ಚಿಂತೆಯಲ್ಲಿದ್ದು, ಜನತೆ ಛತ್ರಿ ಹಿಡಿದು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾಗರಿಕರು ಬಿಸಿಲಿನ ತಾಪಕ್ಕೆ ಧಣಿವಾರಿಸಲು ಎಳೆನೀರು ಕುಡಿದು ದೇಹವನ್ನು ತಂಪಾಗಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ಇನ್ನೂ ಕೆಲವರು ತಂಪುಪಾನೀಯ ಹಾಗೂ ಕಬ್ಬಿನ ರಸಕ್ಕೆ ಮೊರೆ ಹೋಗು ತ್ತಿದ್ದಾರೆ. ಬೆಳಗ್ಗೆ 7.30ರ ವೇಳೆಯಲ್ಲಿರುವ ಎಳೆ ಬಿಸಿಲು ಜನರ ಮೈಸುಡಲು ಪ್ರಾರಂಭಿಸುತ್ತದೆ. ಸಂಜೆ 5 ಗಂಟೆವರೆಗೂ ಬಿಸಿಲಿನ ಝಳ ಇರುವುದರಿಂದ ಮೈ, ಚರ್ಮದ ಜೊತೆ ಬಾಯಿ ಒಣಗುವ ಅನುಭವವಾಗುತ್ತದೆ.
ತಂಪುಪಾನೀಯಗಳ ದರ : ಮಾರುಕಟ್ಟೆಯಲ್ಲಿ ಒಂದು ಎಳನೀರಿನ ಬೆಲೆ 30 ರೂ.ವರೆಗೆ ಮಾರಾಟ ಆಗುತ್ತಿದೆ. ಮಜ್ಜಿಗೆ ಮತ್ತು ನಿಂಬೆಹಣ್ಣಿನ ರಸ ಒಂದು ಲೋಟಕ್ಕೆ 10 ರೂ. ಹಾಗೂ ಕಬ್ಬಿನ ಹಾಲಿಗೆ 20 ರೂ., ಮೂಸಂಬಿ ಮತ್ತು ಪೈನಾಫಲ್ ಜ್ಯೂಸ್‌ಗೆ 40ರೂ., ಆಫಲ್ 50 ರೂ., ಸಫೋಟಾ 45 ರೂ., ಡ್ರೈಪ್ರೂಟ್ಸ್ ಜ್ಯೂಸ್ 65 ರೂಪಾಯಿಗೆ ಮಾರಾಟ ಆಗುತ್ತದೆ.
ಮಜ್ಜಿಗೆಗೆ ಸಾಕಷ್ಟು ಬೇಡಿಕೆ : ಬೇಕರಿ, ಹೋಟೆಲ್‌ಗಳಲ್ಲಿ ತಂಪು ಪಾನೀಯಗಳ ಮಾರಾಟ ಗಣನೀಯವಾಗಿ ಕಾಣುತ್ತದೆ. ಮಜ್ಜಿಗೆಗೆ ಸಾಕಷ್ಟು ಬೇಡಿಕೆ ಕಂಡು ಬರುತ್ತಿದೆ. ಬಿಸಿಲಿನ ತಾಪ ಹೆಚ್ಚಾದಂತೆ ರೋಗ-ರುಜಿನುಗಳು ಮನೆ ಮಾಡುತ್ತವೆ. ರಸ್ತೆ ಬದಿಯಲ್ಲಿ ಮಜ್ಜಿಗೆ ಹಾಗೂ ಹೆಸರು ಬೇಳೆ, ಕೋಸಂಬರಿ ಮಾರಾಟದ ಅಂಗಡಿಗಳು ತಲೆ ಎತ್ತುತ್ತಿವೆ. ಕತ್ತರಿಸಿಟ್ಟ ಹಣ್ಣುಗಳು ಯತೇತ್ಛವಾಗಿ ದೊರೆಯುತ್ತಿದೆ. ಬಿಸಿಲ ಝಳಕ್ಕೆ ಮಧ್ಯಾಹ್ನದ ವೇಳೆ ರಸ್ತೆಗೆ ಇಳಿಯಲು ಜನರು ಹಿಂದೇಟು ಹಾಕುತ್ತಿದ್ದಾರೆ.
ಬೇಸಿಗೆ ಸಂದರ್ಭದಲ್ಲಿ ಎಳೆನೀರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಎಳನೀರು ವ್ಯಾಪಾರ ಮಾಡಲಾಗುತ್ತಿದೆ. ಆಸ್ಪತ್ರೆಯಿಂದ ಬರುವ ರೋಗಿಗೆ, ಗರ್ಭಿಣಿಗಳಿಗೆ, ವಯೋವೃದ್ಧರಿಗೆ , 25 ರೂ. ಬೆಲೆಯಲ್ಲಿ ಎಳನೀರನ್ನು ನೀಡುತ್ತಿದ್ದೇವೆ. ತಾಲೂಕಿನ ಮತ್ತು ಜಿಲ್ಲೆಯ ಅಕ್ಕಪಕ್ಕದ ತೋಟಗಳಿಂದ ಖರೀದಿಸಿ ತರಲಾಗುತ್ತಿದ್ದು, ಜನರ ಬಾಯಾರಿಕೆ ನೀಗಿಸಲು ಎಳನೀರಿನಿಂದ ಮಾತ್ರ ಸಾಧ್ಯ.
– ಶಿವಕುಮಾರ್, ಎಳನೀರು ವ್ಯಾಪಾರಿ
ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಮಧ್ಯಾಹ್ನದ ವೇಳೆಯಂತೂ ಮರದ ನೆರಳನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಬರೀ ತಲೆಯಲ್ಲಿ ಹೊರಗಡೆ ಹೋದರೆ, ಬಿಸಿಲಿನ ತಾಪಕ್ಕೆ ತಲೆನೋವಿನ ಬಾಧೆ ಹೆಚ್ಚಾಗುತ್ತದೆ. ಎಳನೀರು ಕುಡಿಯುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ.
– ರಾಮಕೃಷ್ಣ, ನಾಗರಿಕ
-ಎಸ್.ಮಹೇಶ್