Advertisement
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ, ಕೀಟಶಾಸ್ತ್ರಜ್ಞ ಡಾ| ರೇವಣ್ಣ ರೇವಣ್ಣನವರ್ ಅವರು ಅಲ್ಲಿ ಕಪ್ಪು ತಲೆ ಹುಳ ಬಾಧೆಗೊಳಗಾಗಿರುವ ಮರಗಳನ್ನು ಪರಿಶೀಲಿಸಿದರು. ಈ ಬಗ್ಗೆ ಮಾಹಿತಿ ನೀಡಿದ ಅವರು, ನಾವು 10 ಕ್ಕೂ ಹೆಚ್ಚು ಮರಗಳ ಗರಿಗಳನ್ನು ನೋಡಿದ್ದೇವೆ. ಯಾವುದರಲ್ಲೂ ಹುಳಗಳು ಪತ್ತೆಯಾಗಿಲ್ಲ. 4-5 ಹೊಸ ಗರಿಗಳು ಕೂಡ ಬಂದಿವೆ. ತೆಂಗಿನ ಮರಗಳು ಚೇತರಿಕೆ ಕಾಣುತ್ತಿವೆ. ಈ ಹಂತದಲ್ಲಿ ಮಳೆ ಕಡಿಮೆಯಾದಾಗ ಗೊಬ್ಬರ ಹಾಕಿದರೆ ಉತ್ತಮ ನಿರ್ವಹಣೆ ಮಾಡಿದರೆ ಒಳ್ಳೆಯ ಫಸಲು ಪಡೆಯಬಹುದು. ಇನ್ನು ಬಹುಶಃ ಆ ಕಪ್ಪು ತಲೆ ಹುಳಗಳು ಇಲ್ಲಿ ಅದಕ್ಕೆ ಬೇಕಾದ ಆಹಾರ ಸಿಗದಿರುವ ಕಾರಣ ಬೇರೆಡೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯೂ ಇರುತ್ತದೆ ಎಂದವರು ತಿಳಿಸಿದರು.
ಕನ್ನಡಕುದ್ರು – ಮೂವತ್ತುಮುಡಿ ಪರಿಸರದಲ್ಲಿ ಸುಮಾರು 5 ಸಾವಿರಕ್ಕೂ ಮಿಕ್ಕಿ ತೆಂಗಿನ ಮರಗಳಿಗೆ ಈ ಕಪ್ಪು ತಲೆ ಹುಳ ಬಾಧೆ ಆವರಿಸಿದ್ದು, ಅದನ್ನು ನಿಯಂತ್ರಿಸುವ ಸಲುವಾಗಿ ಪರೋಪಕಾರಿ ಜೀವಿ (ಗೋನಿಯೋಜಿಸ್ ನೇಫಾಂಟಿಡಿಸ್)ಗಳನ್ನು ಬಿಡಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಯೋಚಿಸಿದ್ದರು. ಈ ಬಗ್ಗೆ ಶಿವಮೊಗ್ಗದ ಜೈವಿಕ ಕೇಂದ್ರ ಎಲೆ ವಿಶ್ಲೇಷಣಾ ಪ್ರಯೋಗಾಲಯವನ್ನು ಸಹ ಸಂಪರ್ಕಿಸಿದ್ದರು. ಆದರೆ ಈಗ ಮರಗಳಲ್ಲಿ ಆ ಹುಳಗಳು ಕಂಡು ಬಾರದಿರುವ ಕಾರಣ ಸದ್ಯಕ್ಕೆ ಈ ಪ್ರಸ್ತಾವವನ್ನು ತಡೆಹಿಡಿಯಲಾಗಿದೆ. ಈ ಹುಳಗಳು ಲಾವ್ರಾ ಅಥವಾ ಪ್ಯೂಪಲ್ ಹಂತದಲ್ಲಿದ್ದರೆ ಪರೋಪಕಾರಿ ಜೀವಿಗಳನ್ನು ಬಿಟ್ಟು ನಿಯಂತ್ರಿಸಬಹುದು. ಆದರೆ ಈಗ ಕಷ್ಟ. ಸ್ವಲ್ಪ ದಿನಗಳ ಬಳಿಕ ಮತ್ತೆ ಪರಿಶೀಲಿಸಿ, ಆ ಬಳಿಕ ಈ ಬಗ್ಗೆ ತೀರ್ಮಾನಿಸಲಾಗುವುದು ಎಂದು ಡಾ| ರೇವಣ್ಣ ರೇವಣ್ಣನವರ್ ಹೇಳಿದರು. ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ನಿಧೀಶ್ ಕೆ.ಜೆ. ಉಪಸ್ಥಿತರಿದ್ದರು.
Related Articles
ಕನ್ನಡುಕುದ್ರು, ಮೂವತ್ತುಮುಡಿ ಪರಿಸರದಲ್ಲಿ ತೆಂಗಿನಮರಗಳಿಗೆ ಗರಿ ತಿನ್ನುವ ಕಪ್ಪು ತಲೆಯ ಹುಳದ ಬಾಧೆ ಇರುವ ಬಗ್ಗೆ, ಆ ಪರಿಸರದ ತೆಂಗಿನ ಮರಗಳು ಸಾಯುವ ಸ್ಥಿತಿಗೆ ತಲುಪಿರುವ ಕುರಿತಂತೆ “ಉದಯವಾಣಿ’ಯು ಮಾ. 25 ರಂದು ವರದಿ ಪ್ರಕಟಿಸಿ, ಗಮನಸೆಳೆದಿತ್ತು. ಆ ಬಳಿಕ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳು ನಿರಂತರವಾಗಿ ಭೇಟಿ ನೀಡಿ, ಪರಿಶೀಲಿಸಿ, ರೈತರಿಗೆ ಕೆಲವೊಂದು ಅಗತ್ಯ ನಿರ್ದೇಶನಗಳನ್ನು ನೀಡುತ್ತಿದ್ದಾರೆ.
Advertisement