Advertisement

ಕೋಕೋ: ಬೆಲೆ ಏರಬೇಕಾಗಿದ್ದ  ವೇಳೆ ಇಳಿಯುತ್ತಿದೆ!

03:19 PM Mar 25, 2017 | |

ವಿಟ್ಲ : ಪ್ರತಿ ವರ್ಷವೂ ಮಾರ್ಚ್‌, ಎಪ್ರಿಲ್‌ ಮತ್ತು ಮೇ ತಿಂಗಳು ಕೋಕೋ ಬೆಲೆ ಏರುವ ಹೊತ್ತು. ಆದರೆ ಈ ವರ್ಷ ಮಾರ್ಚ್‌ ತಿಂಗಳಲ್ಲೇ ಬೆಲೆ ಕುಸಿಯುತ್ತಿದೆ. ಇದು ಅನಿರೀಕ್ಷಿತ. ಇದರಿಂದಾಗಿ ಬೆಳೆಗಾರರು ಆತಂಕದಲ್ಲಿದ್ದಾರೆ. 

Advertisement

ಬೇಸಗೆಯಲ್ಲಿ ಕೋಕೋ ಬೆಳೆ ಹೆಚ್ಚು. ಬೆಲೆಯೂ ಹೆಚ್ಚು. ಈ ಅವಧಿಯಲ್ಲಿ ಕೋಕೋವನ್ನು ಒಡೆದಾಗ ನೀರಿನಂಶ ಕಡಿಮೆ ಇರುತ್ತದೆ ಮತ್ತು ಬೀಜ ಒಣಗಿಸುವುದಕ್ಕೆ ಬಿಸಿಲು ಸಹಜವಾಗಿ ಇರುತ್ತದೆ. ಆದುದರಿಂದ ಖರ್ಚು ಕಡಿಮೆ. ಬೆಲೆ ನೇರವಾಗಿ ಬೆಳೆಗಾರನಿಗೇ ತಲುಪುತ್ತದೆ. ಲಾಭ ದೊರೆಯುತ್ತದೆ. ಆದರೆ ಮಳೆ ಆರಂಭವಾದಾಗ ನೀರಿನ ಅಂಶ ಹೆಚ್ಚಾಗುತ್ತದೆ. ಬೀಜ ಒಣಗಿಸುವುದಕ್ಕೆ ಡ್ರೈಯರ್‌ ಬೇಕು. ಖರ್ಚು ಜಾಸ್ತಿ. ರೈತರಿಗೆ ಸಿಗುವ ಲಾಭ ಇಳಿಮುಖವಾಗುತ್ತದೆ.

ಈ ವರ್ಷ ಜನವರಿ, ಫೆಬ್ರವರಿ, ಮಾರ್ಚ್‌ನಲ್ಲಿ ಬೆಲೆ ಹೆಚ್ಚಾಗಿದೆ. ಆದರೆ ಈ ಹಿಂದಿನ ಹೆಚ್ಚಿನ ವರ್ಷಗಳಲ್ಲಿ ಜನವರಿಯಿಂದ ಜೂನ್‌ವರೆಗೆ ಬೆಲೆ ಹೆಚ್ಚಾಗುತ್ತಾ ಹೋಗಿದೆ.ಆದರೆ ಈ ವರ್ಷ ಜನವರಿ (65 ರೂ.) ಮತ್ತು ಫೆಬ್ರವರಿ (65 ರೂ.) ತಿಂಗಳುಗಳಲ್ಲಿ ಒಂದೇ ರೀತಿಯ ದರ ಇತ್ತು. ಆದರೆ ಮಾರ್ಚ್‌ನಲ್ಲಿ ಬೆಲೆ ಕುಸಿತ ಕಂಡಿದೆ. ಫೆಬ್ರವರಿಯಲ್ಲಿ 65 ರೂ. ಗಳಿದ್ದರೆ ಮಾರ್ಚ್‌ನಲ್ಲಿ ಇದು 70-75ರಷ್ಟಾದರೂ ಆಗಬೇಕಿತ್ತು ಎಂಬ ನಿರೀಕ್ಷೆ ರೈತರದ್ದಾಗಿತ್ತು. ಆದರೆ ಇದು ಕಡಿಮೆಯಾಗಿದೆ. ಈಗಲೇ ಇಷ್ಟು ಇಳಿಕೆಯಾಗಿದೆ. ಹಾಗಾಗಿ ಜೂನ್‌ ತಿಂಗಳಲ್ಲಿ ಮತ್ತಷ್ಟು ಕುಸಿಯುವ ಸಂಭವವಿದೆ ಎನ್ನುವ ಭಯ ಬೆಳೆಗಾರರದ್ದು.

ಅಂತಾರಾಷ್ಟ್ರೀಯ ಮಾರುಕಟ್ಟೆ ಕಾರಣ 
ಜಿಲ್ಲೆಯಲ್ಲಿ ಕ್ಯಾಂಪ್ಕೋ ಮತ್ತು ಕ್ಯಾಡ್‌ಬರೀಸ್‌ ಹಾಗೂ ಇತರ ಚಾಕಲೇಟ್‌ ತಯಾರಿಸುವ ಸಂಸ್ಥೆಗಳು ಕೋಕೋವನ್ನು ಖರೀದಿಸುವ ಪ್ರಮುಖ ಸಂಸ್ಥೆಗಳು. ಆದರೆ ಮಾರುಕಟ್ಟೆಯ ಹಿಡಿತ ಈ ಸಂಸ್ಥೆಗಳಲ್ಲಿದೆ ಎನ್ನಲು ಬರುವುದಿಲ್ಲ. ಈ ಸಂಸ್ಥೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿವೆ. ಹಾಗಾಗಿ ಕೋಕೋ ಬೆಲೆ ಇಳಿಕೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಕಾರಣ ಎಂದು ವಿಶ್ಲೇಷಿಸಲಾಗುತ್ತದೆ.

ಕಡಿಮೆ ಬೆಲೆಗೆ ಬೀಜ ಆಮದು 
ಭಾರತದಲ್ಲಿ ಉತ್ಪಾದನೆಯಾಗುವ ಕೋಕೋ ಇಲ್ಲಿನ ಸಂಸ್ಥೆಗಳ ಬೇಡಿಕೆಯನ್ನು ಪೂರೈಸಲು ಸಾಕಾಗುತ್ತಿಲ್ಲ. ಹಾಗಾಗಿ ಸಾಮಾನ್ಯವಾಗಿ ಇಂತಹ ಸಂಸ್ಥೆಗಳು ಹೊರದೇಶದಿಂದ ಆಮದು ಮಾಡಿಕೊಳ್ಳುತ್ತವೆ. ಆದರೆ ಈ ಬಾರಿ ಭಾರತದಲ್ಲಿ ಕೋಕೋ ಬೆಳೆ ಹೆಚ್ಚಾಗಿದೆ. ಆದಾಗ್ಯೂ ಕೋಕೋದಿಂದ ಉತ್ಪನ್ನ ಮಾಡುವ ಸಂಸ್ಥೆಗಳು ಈ ಬಾರಿ ಭಾರತದ ಕೋಕೋಗಿಂತಲೂ ಹೊರದೇಶದ ಕೋಕೋವನ್ನೇ ಬಳಸುತ್ತಿವೆ. ಯಾಕೆಂದರೆ ಹೊರದೇಶದಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದೆ. ಇದು ಭಾರತದ ಕೋಕೋ ಮಾರುಕಟ್ಟೆ ಕುಸಿಯಲು ಕಾರಣವಾಗಿದೆ ಎಂದು ಕ್ಯಾಂಪ್ಕೋ ಸಂಸ್ಥೆಯ ತಜ್ಞರು ಅಭಿಪ್ರಾಯಪಡುತ್ತಾರೆ.

Advertisement

ಗಿಡಗಳನ್ನು ಕಡಿಯಬೇಕೆ?
ಕೋಕೋಗೆ ಬೆಲೆ ಬರುವ ಹೊತ್ತಲ್ಲಿ ಬೆಲೆ ಬಂದಿಲ್ಲ. ನಮ್ಮ ನಿರೀಕ್ಷೆಗಳು ಹುಸಿಯಾಗಿವೆ. ಈ ಕುಸಿತ ಮುಂದುವರಿದರೆ ಕೋಕೋ ಬೆಳೆಗಾರರು ಭಾರೀ ನಷ್ಟ ಹೊಂದಬೇಕಾಗುತ್ತದೆ. ಬೆಲೆ ಇಲ್ಲ ಎಂಬ ಕಾರಣಕ್ಕೆ ಕೋಕೋ ಗಿಡಗಳನ್ನು ಕಡಿಯಬೇಕೇ?
-ಸೇರಾಜೆ ಸುಬ್ರಹ್ಮಣ್ಯ ಭಟ್‌,  ಕೋಕೋ ಬೆಳೆಗಾರರು

ಕಳೆದ ವರ್ಷಗಳಲ್ಲಿ 
ಕೋಕೋ ದರ (ಕೆ.ಜಿ.ಗೆ -ರೂ.ಗಳಲ್ಲಿ )

2014: ಜ.-50, ಫೆ. – 55, ಮಾ. -60,  ಎ.-65   ಮೇ -67, ಜೂ.-62 .
2015 : ಜ.-55, ಫೆ.-55, ಮಾ.-60, ಎ.- 65, ಮೇ – 65, ಜೂ.-60
2016: ಜ.-50, ಫೆ. 58, ಮಾ.-59, ಎ.- 60, ಮೇ -60, ಜೂ.-57
2017: ಜ.-65, ಫೆ.-65, ಮಾ.-60.

– ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next