Advertisement

ಈ ಬಾರಿ ಕೊಕ್ಕೋ ದಾಖಲೆ ಉತ್ಪಾದನೆ : ಬೆಳೆಗಾರರ ನೆರವಿಗೆ ಕ್ಯಾಂಪ್ಕೋ

06:59 PM Jul 07, 2017 | Team Udayavani |

ಸುಳ್ಯ: ತಾಲೂಕಿನಲ್ಲಿ ರೈತರು ಮಾರುಕಟ್ಟೆಗೆ ಕೊಕ್ಕೋ ಹಸಿಬೀಜ ಮಾರಿದ ಪ್ರಮಾಣ ಗಮನಿಸಿದರೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಕೊಕ್ಕೋ ಬೆಳೆಯಾಗಿದೆ. ಇದೇ ವೇಳೆ ಎಂದಿನಂತೆ ಕೊಕ್ಕೊ ಬೀಜ ಖರೀದಿಸುತ್ತಿದ್ದ ಹಲವು ಕಂಪೆನಿಗಳು ಬೆಳೆಗಾರರಿಗೆ ಕೈಕೊಟ್ಟರೆ, ಕ್ಯಾಂಪ್ಕೋ ತನ್ನ ಸಾಮರ್ಥ್ಯಕ್ಕೂ ಮೀರಿ ಖರೀದಿಸಿ ರೈತರ ಸಹಾಯಕ್ಕೆ ಬಂದಿದೆ.

Advertisement

ಕಂಪೆನಿಯು 2016 ರ ಎಪ್ರಿಲ್‌ನಿಂದ 2017 ರ ಮಾರ್ಚ್‌ ಅಂತ್ಯಕ್ಕೆ ಅವಿಭಜಿತ ಜಿಲ್ಲೆಗಳಿಂದ ಖರೀದಿಸಿದ ಕೊಕ್ಕೋ ಹಸಿಬೀಜದ ಪ್ರಮಾಣ 19 ಸಾವಿರ ಕ್ವಿಂಟಾಲ್‌. ಈ ವರ್ಷದ ಮೂರು ತಿಂಗಳಲ್ಲೇ 28 ಸಾವಿರ ಕ್ವಿಂಟಾಲ್‌ ಖರೀದಿಸಲಾಗಿದೆ. ಕ್ಯಾಂಪ್ಕೋಗೆ ಇಷ್ಟೊಂದು ಪ್ರಮಾಣದಲ್ಲಿ ಕೊಕ್ಕೋ ಬೀಜ ಬಂದದ್ದು ಸುಳ್ಯ ಭಾಗದಿಂದಲೇ ಎನ್ನುವುದು ವಿಶೇಷ. ಕಳೆದ ವರ್ಷ ಪೂರ್ತಿ ಸುಳ್ಯ ಶಾಖೆಯಲ್ಲಿ ಖರೀದಿಸಲಾಗಿದ್ದ ಕೊಕ್ಕೋ ಬೀಜ ಒಟ್ಟು 1209 ಕ್ವಿಂಟಾಲ್‌. ಆದರೆ ಈ ಮೂರು ತಿಂಗಳಲ್ಲಿ 3969 ಕ್ವಿಂಟಾಲ್‌ ಖರೀದಿಯಾಗಿದೆ. ಇದು ಈ ಶಾಖೆಯೊಂದರಲ್ಲಿ ಮಾತ್ರವಲ್ಲ, ತಾಲೂಕಿನ ಗುತ್ತಿಗಾರು, ಹರಿಹರ, ಸಂಪಾಜೆ ಮತ್ತಿತರ ಹಲವಾರು ಶಾಖೆಗಳಲ್ಲೂ ಇದೇ ರೀತಿ ದಾಖಲೆ ಪ್ರಮಾಣದಲ್ಲಿ ಖರೀದಿಯಾಗಿದೆ.

ತಾಲೂಕಿನಲ್ಲಿ ಅಂದಾಜು 200 ಹೆಕ್ಟೇರ್‌ ಪ್ರದೇಶದಲ್ಲಿ ಕೊಕ್ಕೋ ಬೆಳೆಯಲಾಗುತ್ತಿದೆ. ಈ ಬಾರಿ ಇಳುವರಿ ಹೆಚ್ಚಿದ್ದ ಕಾರಣ, ಮಾರುಕಟ್ಟೆಗೆ ಹರಿವಿನ ಪ್ರಮಾಣ ಹೆಚ್ಚಿತ್ತು. ಆರಂಭದಲ್ಲಿ ದರ ಏರಿಕೆಯಿದ್ದು, ಕ್ಯಾಂಪ್ಕೋ ಗರಿಷ್ಠ 65 ರೂ. ಗಳಿಗೆ ಖರೀದಿಸಿತ್ತು. ವಿದೇಶದಿಂದ ಕಡಿಮೆ ಬೆಲೆಗೆ ಆಮದಾಗುವ ಕೊಕ್ಕೊದಿಂದಾಗಿ ಕಂಪೆನಿಗಳು ದೇಶೀಯ ಕೊಕ್ಕೊ ಖರೀದಿ ಸ್ಥಗಿತಗೊಳಿಸಿದವು. ಈ ಹಿನ್ನೆಲೆಯಲ್ಲಿ ದರ ಕುಸಿದಿತ್ತು.

ಗಮನಾರ್ಹ ಉತ್ಪಾದನೆ
ಈ ಬಾರಿ ತಾಲೂಕಿನಲ್ಲಿ ಕೊಕ್ಕೋ ಗಮನಾರ್ಹ ಉತ್ಪಾದನೆಗೊಂಡಿದೆ. ಬೇರೆ ಕಂಪೆನಿಗಳು ಖರೀದಿಸದಿದ್ದರೂ ಕೃಷಿಕರ ಹಿತಾಸಕ್ತಿ ಕಾಪಾಡಲು ಸಂಕಷ್ಟಗಳ ಮಧ್ಯೆಯೂ ಸಂಸ್ಥೆ ಖರೀದಿಗೆ ಮುಂದಾಯಿತು.
– ಕೃಷ್ಣಪ್ರಸಾದ್‌ ಮಡ್ತಿಲ, ಕ್ಯಾಂಪ್ಕೋ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next