ಬೆಂಗಳೂರು: ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಮತ್ತು ಘಾನಾ ದೇಶದ ಮೂವರು ಪ್ರಜೆಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಘಾನಾ ದೇಶದ ಎರ್ನೆಸ್ಟ್ (38), ನೈಜೀರಿಯಾ ಪ್ರಜೆಗಳಾದ ಫರ್ನೆಂಡ್ ಉಬ್ (36) ಹಾಗೂ ನೈಜೀರಿಯಾದ ಮದು ಅಬುಕುÌ ಉಬಾಕ್ (28) ಬಂಧಿತರು. ಆರೋಪಿಗಳಿಂದ 20 ಗ್ರಾಂ ಕೊಕೇನ್, 180 ಎಲ್‌ಎಸ್‌ಡಿ ಪೇಪರ್ ಮತ್ತು 19 ಎಂಡಿಎಂಎ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಾನಾದ ಎರ್ನೆಸ್ಟ್ ಮತ್ತು ನೈಜೀರಿಯಾದ ಫರ್ನೆಂಡ್ 2016ರಲ್ಲಿ ವ್ಯಾಪಾರ ವೀಸಾದಡಿ ಭಾರತಕ್ಕೆ ಬಂದಿದ್ದು, ಅವಧಿ ಮುಗಿದಿದ್ದರೂ ತಮ್ಮ ದೇಶಗಳಿಗೆ ವಾಪಾಸಾಗದೆ ನರಗದಲ್ಲೇ ಉಳಿದು ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದರು. ಇಬ್ಬರು ಹೆಣ್ಣೂರು ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅಲ್ಲದೆ, ತಾವು ತಮಿಳುನಾಡಿನಿಂದ ಬಟ್ಟೆಗಳನ್ನು ತಂದು ನಗರದಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಹೇಳುತ್ತಿದ್ದರು.
ಆದರೆ, ಬಟ್ಟೆ ವ್ಯಾಪಾರದ ಹೆಸರಿನಲ್ಲಿ ನಗರಕ್ಕೆ ಕೊಕೇನ್ ತಂದು ಗ್ರಾಂಗೆ ಐದು ಸಾವಿರದಿಂದ ಹತ್ತು ಸಾವಿರ ರೂ. ತನಕ ಮಾರಾಟ ಮಾಡುತ್ತಿದ್ದರು. ದ್ವಿಚಕ್ರ ವಾಹನದಲ್ಲಿ ಕೊಕೇನ್ ಇಟ್ಟುಕೊಂಡು ಶಾಲಾ-ಕಾಲೇಜು ಬಳಿ ಗ್ರಾಹಕರಿಗಾಗಿ ಹುಡುಕಾಟ ನಡೆಸಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಸಿಸಿಬಿ ಅಧಿಕಾರಿ ಹೇಳಿದ್ದಾರೆ.
ಆರೋಪಿಗಳಿಬ್ಬರೂ ಅಗರ ಮುಖ್ಯರಸ್ತೆಯ ರೈಲ್ವೆಗೇಟ್ ಬಳಿ ಮಾದಕ ವಸ್ತು ಕೊಕೇನ್ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇಲೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಸಿಸಿಬಿ ಎಸಿಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಕೆ.ಎನ್.ಯಶವಂತಕುಮಾರ್ ಮತ್ತು ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಮತ್ತೂಂದು ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಆರೋಪಿ ನೈಜೀರಿಯಾ ಮೂಲದ ಮದು ಅಬುಕು ಉಬಾಕ್ ಎಂಬಾತನನ್ನು ಬಂಧಿಸಿದ್ದು, ಆತ ಮಾದಕ ವಸ್ತುಗಳಾದ ಎಲ್‌ಎಸ್‌ಡಿ ಮತ್ತು ಎಂಡಿಎಂಎಗಳನ್ನು ಮಾರಾಟ ಮಾಡುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.