ಮುಂಬೈ: ಸುಮಾರು 47 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಮತ್ತು ಹೆರಾಯಿನ್ ಮಾದಕ ವಸ್ತುಗಳೊಂದಿಗೆ ಇಬ್ಬರನ್ನು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ವಲಯ ಘಟಕ ನಡೆಸಿದ ಕಾರ್ಯಾಚರಣೆಯಲ್ಲಿ 31.29 ಕೋಟಿ ಮೌಲ್ಯದ 4.47 ಕಿಲೋಗ್ರಾಂಗಳಷ್ಟು ಹೆರಾಯಿನ್ ಮತ್ತು 15.96 ಕೋಟಿ ಮೌಲ್ಯದ 1.596 ಕಿಲೋ ಗ್ರಾಂಗಳಷ್ಟು ಕೊಕೇನ್ ಪತ್ತೆಯಾಗಿದೆ ಎಂದು ಅವರು ಹೇಳಿದರು.
“ಅವರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಲಾಗಿದೆ. ಮೊದಲ ಪ್ರಕರಣದಲ್ಲಿ, ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಿಂದ ಕೀನ್ಯಾದ ನೈರೋಬಿ ಮೂಲಕ ಕೀನ್ಯಾ ಏರ್‌ವೇಸ್ ವಿಮಾನದಲ್ಲಿ ಇಲ್ಲಿಗೆ ಬಂದಿಳಿದ ನಂತರ 4.47 ಕಿಲೋಗ್ರಾಂಗಳಷ್ಟು ಹೆರಾಯಿನ್ ನೊಂದಿಗೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಯಿತು” ಎಂದು ಅವರು ಹೇಳಿದರು.
ಇದನ್ನೂ ಓದಿ:ಪಾಠ ಮಾಡುವಾಗಲೇ ಶಿಕ್ಷಕಿ ಮೇಲೆ ಗುಂಡು ಹಾರಿಸಿದ 6 ವರ್ಷದ ವಿದ್ಯಾರ್ಥಿ.!
ಎರಡನೇ ಪ್ರಕರಣದಲ್ಲಿ ಇಥಿಯೋಪಿಯನ್ ಏರ್ ಲೈನ್ಸ್ ನಲ್ಲಿ ಬಂದಿಳಿದ ವ್ಯಕ್ತಿಯನ್ನು ಅನುಮಾನದ ಕಾರಣದಿಂದ ವಿಚಾರಣೆ ಮಾಡಲಾಯಿತು. ಅವರ ಲಗೇಜಿನಲ್ಲಿ ಹಲವು ಕುರ್ತಾ ಬಟನ್ ಗಳಿದ್ದವು.
ಬ್ಯಾಗ್ ನ ವಿವರವಾದ ಶೋಧನೆಯು ಕುರ್ತಾಗಳ ಗುಂಡಿಗಳಲ್ಲಿ ಮತ್ತು ಮಹಿಳೆಯರ ಕೈಚೀಲಗಳೊಳಗಿನ ಕುಳಿಗಳಲ್ಲಿ ಅಡಗಿಸಿಟ್ಟಿದ್ದ 1.596 ಕಿಲೋಗ್ರಾಂಗಳಷ್ಟು ಕೊಕೇನ್ ಪತ್ತೆಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.