ಬಿಜಾಪುರ: ಎ.1ರಂದು ಛತ್ತೀಸ್‌ಗಢದಲ್ಲಿ ನಕ್ಸಲ್ ದಾಳಿ ವೇಳೆ ನಾಪತ್ತೆಯಾಗಿದ್ದ ಕೋಬ್ರಾ ಕಮಾಂಡೋ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರು ನಮ್ಮ ಒತ್ತೆಯಲ್ಲಿದ್ದಾರೆ ಎಂದು ಹೇಳಿಕೊಂಡಿರುವ ನಕ್ಸಲರು ಬುಧವಾರ ಅವರ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ.
ಸರಕಾರವು ಸಂಧಾನಕಾರರನ್ನು ಕಳುಹಿಸಿ ಕೊಟ್ಟರೆ ಯೋಧನನ್ನು ಹಸ್ತಾಂತರಿಸುವು ದಾಗಿ ನಿಷೇಧಿತ ಸಂಘಟನೆಯ ದಂಡಕಾರಣ್ಯ ವಿಶೇಷ ವಲಯ ಸಮಿತಿ ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಮಾವೋವಾದಿಗಳ ಶಿಬಿರದಲ್ಲಿ ಪ್ಲಾಸ್ಟಿಕ್ ಮ್ಯಾಟ್‌ವೊಂದರ ಮೇಲೆ ಯೋಧ ಮನ್ಹಾಸ್ ಅವರು ಕುಳಿತುಕೊಂಡಿರುವ ಫೋಟೋ ಇದಾಗಿದೆ.
ಇನ್ನೊಂದೆಡೆ ಮಾತನಾಡಿರುವ ಸಿಆರ್‌ಪಿಎಫ್ ಮುಖ್ಯಸ್ಥ ಕುಲದೀಪ್ ಸಿಂಗ್, ಮನ್ಹಾಸ್ ನಕ್ಸಲರ ಒತ್ತೆಯಲ್ಲಿದ್ದಾರೆ ಎಂಬುದು ಇನ್ನೂ ದೃಢಪಟ್ಟಿಲ್ಲ. ನಾವು ಶೋಧ ಕಾರ್ಯ ನಡೆಸುತ್ತಿದ್ದೇವೆ. ಕಾರ್ಯಾಚರಣೆ ವೇಳೆ ಅವರು ಅಸ್ವಸ್ಥರಾಗಿ ಕುಳಿತಿದ್ದರು ಎಂಬ ಮಾಹಿತಿಯಷ್ಟೇ ಸಿಕ್ಕಿದೆ. ಆದರೆ ನಕ್ಸಲರು ಅಪಹರಿಸಿರುವ ಕುರಿತು ಇನ್ನೂ ಗೊತ್ತಾಗಿಲ್ಲ ಎಂದು ಹೇಳಿದ್ದಾರೆ.
ಕುಟುಂಬಸ್ಥರ ಪ್ರತಿಭಟನೆ: ಯೋಧ ಮನ್ಹಾಸ್ ಅವರ ಸುರಕ್ಷಿತ ಬಿಡುಗಡೆಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬುಧವಾರ ಅವರ ಕುಟುಂಬ ಸದಸ್ಯರು ಜಮ್ಮು-ಪೂಂಛ… ಹೆದ್ದಾರಿ ತಡೆ ಮಾಡಿ ಪ್ರತಿಭಟನೆ ನಡೆಸಿದ್ದಾರೆ.