Advertisement

ಕರಾವಳಿಯ ‘ಪ್ಲಾಸ್ಟಿಕ್ ಪಾರ್ಕ್‌’ಕಡತ ರಾಜ್ಯದಲ್ಲಿಯೇ ಬಾಕಿ!

10:17 AM Jul 10, 2018 | Team Udayavani |

ಮಹಾನಗರ: ನಗರ ಹೊರವಲಯದ ಗಂಜಿಮಠ ಹಾಗೂ ಗುರುಪುರದ ಸುಮಾರು 90 ಎಕ್ರೆ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೇಂದ್ರ ಸರಕಾರದ ಬಹುನಿರೀಕ್ಷಿತ ‘ಪ್ಲಾಸ್ಟಿಕ್‌ ಪಾರ್ಕ್‌’ ಯೋಜನೆಗೆ ಸದ್ಯ ಗ್ರಹಣ ಹಿಡಿದಿದೆ. ಘೋಷಣೆಯಲ್ಲಿಯೇ ಬಾಕಿಯಾದ ಈ ಯೋಜನೆಯ ಕಡತ ಇನ್ನೂ ರಾಜ್ಯ ಸರಕಾರದಲ್ಲಿದ್ದು, ಕೇಂದ್ರ ಸರಕಾರವನ್ನು ತಲುಪಿಲ್ಲ!

Advertisement

ಸಂಸದ ನಳಿನ್‌ ಕುಮಾರ್‌ ಕಟೀಲು ನೇತೃತ್ವದಲ್ಲಿ ಕಳೆದ ವರ್ಷ ಗುರುಪುರ, ಗಂಜಿಮಠದಲ್ಲಿ ಪಾರ್ಕ್‌ ಸ್ಥಾಪನೆಯ ಸ್ಥಳ ಪರಿಶೀಲಿಸಿ, ಕೇಂದ್ರ ಕೌಶಲಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತ ಕುಮಾರ್‌ ಹೆಗಡೆ ಅವರ ಉಪಸ್ಥಿತಿಯಲ್ಲಿ ನಗರದಲ್ಲಿ ಸಭೆ ನಡೆಸಲಾಗಿತ್ತು. ಯೋಜನೆಯ ಪ್ರಸ್ತಾವನೆಯನ್ನು ಬೆಂಗಳೂರಿನ ಕೈಗಾರಿಕಾ ಇಲಾಖೆಯ ಉನ್ನತ ಅಧಿಕಾರಿಗಳ ಸಮಿತಿಗೆ ಅಂದು ಕಳುಹಿಸಲಾಗಿತ್ತು. ಆದರೆ, ಅಲ್ಲಿಂದ ಕಡತ ಮುಂದೆ ಹೋಗಿಲ್ಲ ಎಂದು ಮೂಲಗಳು ತಿಳಿಸಿವೆ.

ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದರೇ?
‘ರಾಜ್ಯ ಮುಖ್ಯ ಕಾರ್ಯದರ್ಶಿಯವರು ಈ ಸಂಬಂಧ ವಿಶೇಷ ಸಭೆ ನಡೆಸಿ ಆ ಬಳಿಕ ಕಡತವನ್ನು ಕೇಂದ್ರಕ್ಕೆ ಕಳುಹಿಸಲಿದ್ದಾರೆ. ಅಲ್ಲಿ ಒಪ್ಪಿಗೆ ದೊರೆತ ಮೇಲೆ ಪ್ಲಾಸ್ಟಿಕ್‌ ಪಾರ್ಕ್‌ ನಿರ್ಮಾಣ ಕುರಿತ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಮೂಲಗಳು ತಿಳಿಸಿವೆ. ಹಾಗಾದರೆ, ಪ್ಲಾಸ್ಟಿಕ್‌ ಪಾರ್ಕ್‌ ನಿರ್ಮಾಣ ಸಂಬಂಧ ಘೋಷಣೆ- ಮಾತುಕತೆ ನಡೆದದ್ದು ಇನ್ನೂ ಕೂಡ ಜೀವಕಳೆ ಪಡೆದಿಲ್ಲ ಎಂಬುದು ಸ್ಪಷ್ಟ. ಕೈಗಾರಿಕಾ ಸ್ನೇಹಿ ವಾತಾವರಣ ರಾಜ್ಯದಲ್ಲಿ ಕಲ್ಪಿಸಿಕೊಡುವ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು ಈ ಯೋಜನೆಯ ಬೆನ್ನು ಹಿಡಿದು ಕಾರ್ಯಗತಗೊಳಿಸುವಲ್ಲಿ ಎಡವಿದ್ದು ಯಾಕೆ ಎಂಬ ಪ್ರಶ್ನೆ ಈಗ ಕಾಡುತ್ತಿದೆ.

ಪ್ಲಾಸ್ಟಿಕ್‌ ಪಾರ್ಕ್‌ ಉದ್ದೇಶ
1 ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆಯಡಿ ಪ್ಲಾಸ್ಟಿಕ್‌ ತಯಾರಿಕೆ ಜತೆಗೆ, ಮರುಬಳಕೆ ತಂತ್ರಜ್ಞಾನಕ್ಕೂ ಒತ್ತು ನೀಡಲು ಉದ್ದೇಶಿಸಲಾಗಿತ್ತು. ಇದರಿಂದ ಪ್ಲಾಸ್ಟಿಕ್‌ ತ್ಯಾಜ್ಯದ ಸಮರ್ಪಕ ವಿಲೇವಾರಿ ಆಗಲಿದ್ದು, ದೇಶದಲ್ಲಿ ಬೇಡಿಕೆ ಇರುವ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಾಗಲಿದೆ. ದೇಶದಲ್ಲಿ ಹಲವಾರು ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿಕೆ ಘಟಕಗಳಿವೆ. ಈ ಘಟಕಗಳು ಲಘು, ಸಣ್ಣ ಪ್ರಮಾಣದಲ್ಲಿದ್ದು, ಬೇಡಿಕೆ ಪೂರೈಸುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊರ ದೇಶಗಳಿಂದಲೇ ಆಮದು ಮಾಡಿಕೊಳ್ಳಬೇಕಾಗಿದೆ.

ಇದನ್ನು ನಿವಾರಿಸಲು ವಿವಿಧೆಡೆ ಪ್ಲಾಸ್ಟಿಕ್‌ ಪಾರ್ಕ್‌ಗಳ ಸ್ಥಾಪನೆಗೆ ಕೇಂದ್ರದ ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್‌ ಸಚಿವಾಲಯವು ಮುಂದಾಗಿತ್ತು. ಇದರಂತೆ, ಪಂಜಾಬ್‌ ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಒಡಿಶಾ ಹಾಗೂ ಆಂಧ್ರಪ್ರದೇಶಗಳಲ್ಲಿ ಆರು ಪ್ಲಾಸ್ಟಿಕ್‌ ಪಾರ್ಕ್‌ಗಳ ಸ್ಥಾಪನೆಗೆ ಮಂಜೂರಾತಿ ನೀಡಲಾಗಿತ್ತು. ಜತೆಗೆ ಮಧ್ಯಪ್ರದೇಶ, ತಮಿಳುನಾಡು, ಒಡಿಶಾ ಮತ್ತು ಅಸ್ಸಾಂಗಳಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ಗಳ ಸ್ಥಾಪನೆಯ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ವಿಶೇಷವೆಂದರೆ ಎಲ್ಲ ಭಾಗದ ಪ್ಲಾಸ್ಟಿಕ್‌ ಪಾರ್ಕ್‌ ನಿರ್ಮಾಣ ಯೋಜನೆ ಅನುಷ್ಠಾನ ಹಂತದಲ್ಲಿದ್ದರೆ, ಮಂಗಳೂರು ಯೋಜನೆ ಇನ್ನು ಕೂಡ ಕಡತದಲ್ಲಿಯೇ ಬಾಕಿಯಾಗಿದೆ.

Advertisement

ಪ್ಲಾಸ್ಟಿಕ್‌ ಪಾರ್ಕ್‌; ಎಂಆರ್‌ಪಿಎಲ್‌ನಿಂದ ಹೊಸ ರೂಪ
ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಎಂಆರ್‌ಪಿಎಲ್‌ ಅವಕಾಶಗಳನ್ನು ತೆರೆದಿಟ್ಟಿತು. ಎಂಆರ್‌ಪಿಎಲ್‌ನಿಂದ ಪಾಲಿಪ್ರೊಪಲಿನ್‌ ಘಟಕ ಆರಂಭವಾಗುತ್ತಿದ್ದಂತೆಯೇ ಪ್ಲಾಸ್ಟಿಕ್‌ ಪಾರ್ಕ್‌ನ ಬೇಡಿಕೆ ಗರಿಗೆದರಿತ್ತು. ಪಾಲಿಪ್ರೊಪಲಿನ್‌ ಘಟಕದ ತ್ಯಾಜ್ಯವು ಪ್ಲಾಸ್ಟಿಕ್‌ ಪಾರ್ಕ್‌ನ ಕಚ್ಚಾ ವಸ್ತುವಾಗಿ ಬಳಕೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪಿಸುವಂತೆ ಕೆನರಾ ಪ್ಲಾಸ್ಟಿಕ್‌ ಮ್ಯಾನುಫ್ಯಾಕ್ಚರರ್ಸ್‌ ಆ್ಯಂಡ್‌ ಟ್ರೇಡರ್ಸ್‌ ಅಸೋಸಿಯೇಶನ್‌ ವತಿಯಿಂದ 2015ರಲ್ಲಿಯೇ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಇದರಂತೆ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲವು, ಇದಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿತ್ತು. 

ಪ್ರಸ್ತಾವನೆ ಶೀಘ್ರ ಕೇಂದ್ರಕ್ಕೆ 
ಗಂಜಿಮಠದಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ ನಿರ್ಮಾಣ ಸಂಬಂಧಿಸಿ ಈಗಾಗಲೇ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಕಳುಹಿಸಲಾಗಿದ್ದು, ಶೀಘ್ರದಲ್ಲಿ ಮುಖ್ಯಕಾರ್ಯದರ್ಶಿಯವರ ನೇತೃತ್ವದಲ್ಲಿ ಸಭೆ ನಡೆದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವ ನಿರೀಕ್ಷೆ ಇದೆ. ಆ ಬಳಿಕ ಈ ಯೋಜನೆಯು ಅನುಮೋದನೆ ಪಡೆದು ಜಾರಿಗೊಳ್ಳಲಿದೆ.
– ಗೋಕುಲ್‌ದಾಸ್‌ ನಾಯಕ್‌,
ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next