Advertisement
ಕಾಶ್ಮೀರದ ಮಂಜು ಕರಾವಳಿಯಲ್ಲಿಲ್ಲ. ಕರಾವಳಿಯ ಸಮೃದ್ಧ ಕಡಲು ಕಾಶ್ಮೀರದಲ್ಲಿ ಕಾಣಸಿಗದು. ಆದರೆ ಕಾಶ್ಮೀರದಷ್ಟೇ ಸಮೃದ್ಧವಾಗಿರುವ ಪ್ರಾಕೃತಿಕ ಸೊಬಗು ಕರಾವಳಿ ಮತ್ತು ಮಲೆನಾಡು ಮಿಶ್ರಿತ ಉಭಯ ಜಿಲ್ಲೆಗಳಲ್ಲಿ ಕಾಣ ಸಿಗುತ್ತದೆ. ಇಲ್ಲಿ ಕಡಲು, ಬೆಟ್ಟಗುಡ್ಡ, ಜಲಪಾತ, ನದಿಗಳು, ಚಾರಣಯೋಗ್ಯ ಪ್ರೇಕ್ಷಣೀಯ ಸ್ಥಳಗಳು ಹೀಗೆ ಎಲ್ಲವೂ ಇವೆ. ಆದರೆ ಒಂದಕ್ಕೊಂದು ಸಂಪರ್ಕ ಇಲ್ಲದಂತಿದೆ. ಹೀಗಾಗಿ ಪ್ರವಾಸಿಗರಿಗೂ ಹೋಗಲಾಗದ ಸ್ಥಿತಿಯಿದೆ.
Related Articles
ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ತುರ್ತಾಗಿ ಆಗಬೇಕಿರುವುದು ಮಾಹಿತಿ ಸಂಪರ್ಕ ವ್ಯವಸ್ಥೆ. ಬೀಚ್, ಜಲಪಾತ, ದೇವಸ್ಥಾನ ಹಾಗೂ ಧಾರ್ಮಿಕ ಕೇಂದ್ರಗಳು, ಬೆಟ್ಟಗುಡ್ಡಗಳು (ಚಾರಣ ಮಾಡಬಹುದಾದ ಸ್ಥಳಗಳು) ಹೀಗೆ ಎಲ್ಲವೂ ಇದೆ. ಆದರೆ ಒಂದಕ್ಕೊಂದು ಸಂಪರ್ಕ ಕಲ್ಪಿಸುವ ವ್ಯವಸ್ಥೆ ಇಲ್ಲ. ಪ್ರತೀ ವರ್ಷ ಉಭಯ ಜಿಲ್ಲೆಗೆ ಸರಾಸರಿ 2 ಕೋಟಿಗೂ ಅಧಿಕ ಪ್ರವಾಸಿಗರು ಬರುತ್ತಾರೆ. ಇದರಲ್ಲಿ ವಿದೇಶಿ ಪ್ರವಾಸಿಗರೂ ಇದ್ದಾರೆ.
Advertisement
ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ಪ್ರವಾಸಿಗರು ಹೆಚ್ಚು. ಧಾರ್ಮಿಕ ಕ್ಷೇತ್ರಕ್ಕೆ ಬರುವ ಭಕ್ತರು ಜಿಲ್ಲೆಯ ಪ್ರವಾಸಿ ತಾಣ ನೋಡುವಂತಾಗಬೇಕು. ಹಾಗೆಯೇ ಪ್ರವಾಸಿ ತಾಣಕ್ಕೆ ಬರುವ ಪ್ರವಾಸಿಗರು ದೇವಸ್ಥಾನ/ಧಾರ್ಮಿಕ ಕೇಂದ್ರಗಳನ್ನು ಸಂದರ್ಶಿಸುವಂತೆ ಮಾಡಬೇಕು. ಒಂದುಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಈಗ ವ್ಯವಸ್ಥೆಗೆ ಕೊರತೆಯಿಲ್ಲ ಮತ್ತು ಬಹುತೇಕ ಪ್ರವಾಸಿಗರು ತಮ್ಮದೇ ವಾಹನ ವ್ಯವಸ್ಥೆಯಲ್ಲಿ ಬರುತ್ತಾರೆ. ಎಲ್ಲಿಂದ ಎಲ್ಲಿಗೆ ಹೋಗಬೇಕು ಎಂಬುದರ ಸ್ಪಷ್ಟತೆ ಅವರಿಗೆ ಇರುವುದಿಲ್ಲ. ಉಡುಪಿ/ ಮಂಗಳೂರಿನ ಸುತ್ತಮುತ್ತಲು ಹತ್ತಾರು ದೇವಸ್ಥಾನ, ಧಾರ್ಮಿಕ ಕೇಂದ್ರವಿದೆ.
ಅದರಲ್ಲಿ ಕೆಲವೇ ಕೆಲವನ್ನು ಮಾತ್ರ ಸಂದರ್ಶಿ ಸುತ್ತಾರೆ. ಬೀಚ್ ಎಂದಾಕ್ಷಣ ಮಲ್ಪೆ, ಕಾಪು, ಮರವಂತೆ, ಪಣಂಬೂರು, ಸೋಮೇಶ್ವರ, ತಣ್ಣೀರುಬಾವಿ ಮಾತ್ರ ನೆನಪಾಗುವುದು. ಇದರ ಹೊರತಾಗಿಯೂ ಹಲವು ಬೀಚ್‌ಗಳಿವೆ. ಪ್ರೇಕ್ಷಣೀಯ ಸ್ಥಳಗಳಿವೆ. ದೇವಸ್ಥಾನ, ಜಲಪಾತ, ಬೀಚ್ ಹೀಗೆ ಎಲ್ಲ ಮಾಹಿತಿಯೂ ಒಂದೇ ಕಡೆಯಲ್ಲಿ ಪ್ರವಾಸಿಗರಿಗೆ ಸಿಗುವಂತೆ ಜಿಲ್ಲಾಡಳಿತ ಅಥವಾ ಪ್ರವಾಸೋದ್ಯಮ ಇಲಾಖೆ ಆಯಾ ಪ್ರೇಕ್ಷಣೀಯ ಸ್ಥಳಗಳಲ್ಲಿ ವ್ಯವಸ್ಥೆ ಮಾಡಬೇಕು. ಡಿಜಿಟಲ್ ಮಾಹಿತಿಯೂ ಸಿಗುವಂತೆ ಸೂಚನಾ ಫಲಕ, ಕ್ಯುಆರ್ ಕೋಡ್‌ಗಳನ್ನು ಅಳವಡಿಸಬೇಕು.
ಹೂಡಿಕೆಗೆ ಬೇಕಾದ ಇಕೋ ಸಿಸ್ಟಮ್ ಬೇಕುಸರಕಾರಗಳು ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡುತ್ತಿಲ್ಲ. ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೂ ಗಮನ ನೀಡುತ್ತಿಲ್ಲ. ಉಭಯ ಜಿಲ್ಲೆಯಲ್ಲಿ ಕೆಲವೇ ಕೆಲವು ಬೀಚ್‌ಗಳು ಅಭಿವೃದ್ಧಿ ಕಂಡಿದ್ದು ಬಿಟ್ಟರೆ ಉಳಿದ ಬೀಚ್‌ಗಳು ಅಭಿವೃದ್ಧಿ ಕಂಡಿಲ್ಲ. ಜಲಪಾತಗಳು ತುಂಬ ಇವೆ. ಅಲ್ಲಿಗೆ ಹೋಗಲು ರಸ್ತೆಗಳೇ ಸರಿಯಿಲ್ಲ. ಇನ್ನು ಅಲ್ಲಿ ಕನಿಷ್ಠ ಮೂಲಸೌಕರ್ಯಗಳೂ ಇಲ್ಲ. ಧಾರ್ಮಿಕ ಕೇಂದ್ರಗಳು ಅಲ್ಲಿನ ಆದಾಯಕ್ಕೆ ಅನುಗುಣವಾಗಿ ಅಭಿವೃದ್ಧಿ ಕಂಡಿವೆ ಮತ್ತು ಅಭಿವೃದ್ಧಿ ಹೊಂದುತ್ತಿವೆ. ಖಾಸಗಿ ಹೂಡಿಕೆದಾರರನ್ನು ಸೆಳೆಯಲು ಕೆಲವು ಕಾರ್ಯಯೋಜನೆ ರೂಪಿಸಿದ್ದರೂ ಪರವಾನಿಗೆ ನೀಡುವಾಗ ಎದುರಾಗುತ್ತಿರುವ ತಾಂತ್ರಿಕ ಕಾರಣದಿಂದ ಅನುಷ್ಠಾನವೇ ಆಗುತ್ತಿಲ್ಲ. ಸಾಹಸ ಪ್ರವಾಸೋದ್ಯಮ ಯೋಜನೆಗಳು ಅನುಷ್ಠಾನವೇ ಆಗಿಲ್ಲ. ಉಭಯ ಜಿಲ್ಲೆಯಲ್ಲಿ ಒಂದು ಅಥವಾ ಎರಡು ಹಿನ್ನೀರಿನ ಸಾಹಸ ಕ್ರೀಡಾ ಚಟುವಟಿಕೆ ಇದ್ದಿರಬಹುದು. ಕೃಷಿ ಪ್ರವಾಸೋದ್ಯಮ ಇಲಾಖೆಯ ಕಡತದಲ್ಲೇ ಉಳಿದುಕೊಂಡಿದೆ. ಮನೋರಂಜನ ಪಾರ್ಕ್‌ಗಳು ಕೆಲವು ಖಾಸಗಿಯಾಗಿ ಅಭಿವೃದ್ಧಿ ಕಾಣುತ್ತಿದ್ದರೂ ಸರಕಾರದ ಉತ್ತೇಜನ ಅವುಗಳಿಗೂ ಸಿಗುತ್ತಿಲ್ಲ. ಸಾಂಸ್ಕೃತಿಕ ಗ್ರಾಮ ಹಾಗೂ ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ರೂಪಿಸಿದ ಪ್ರಸ್ತಾವನೆಗಳಿಗೆ ಅನುಮೋದನೆಯೇ ಸಿಕ್ಕಿಲ್ಲ. ಹೂಡಿಕೆದಾರರನ್ನು ಸೆಳೆಯಲು ಉಭಯ ಜಿಲ್ಲೆಯಲ್ಲೂ ವಿಪುಲ ಅವಕಾಶವಿದೆ. ಅದಕ್ಕಾಗಿ ಸರಕಾರ, ಪ್ರವಾಸೋದ್ಯಮ ಇಲಾಖೆ ಸುಸ್ಥಿರ ಇಕೋಸಿಸ್ಟಮ್ ಸಿದ್ಧಪಡಿಸಬೇಕು. ಪ್ರವಾಸಿತಾಣಗಳ ಅಭಿವೃದ್ಧಿಯಿಂದ ಸ್ಥಳೀಯ ಆರ್ಥಿಕತೆ ಅಭಿವೃದ್ಧಿಯಾಗುತ್ತದೆ. ಆ ಮೂಲಕ ಜಿಲ್ಲೆಯ ಆರ್ಥಿಕತೆಯೂ ಬೆಳೆಯುತ್ತದೆ. ಉದ್ಯೋಗ ಸೃಷ್ಟಿಯಾಗುತ್ತದೆ ಮತ್ತು ಉದ್ಯೋಗಾವಕಾಶಗಳು ಹೆಚ್ಚುತ್ತವೆ. ವಿಶೇಷವಾಗಿ ಸ್ಥಳೀಯರಿಗೆ ಹೆಚ್ಚು ಉದ್ಯೋಗ ಲಭ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಕರಾವಳಿಯಲ್ಲಿ ಅಭಿವೃದ್ಧಿ ಕಾಣಬೇಕು. ಸರಕಾರ, ಖಾಸಗಿ ಸಹಭಾಗಿತ್ವ ಎರಡೂ ಬೇಕು. ಪರಿಸರ ಸೂಕ್ಷ್ಮತೆಯೂ ಗಮನದಲ್ಲಿ ಇರಬೇಕು. ಪರಿಸರಕ್ಕೆ ಹಾನಿಯುಂಟುಮಾಡುವ ಪ್ರವಾಸೋದ್ಯಮ ಬೇಡ. – ರಾಜು ಖಾರ್ವಿ ಕೊಡೇರಿ