Advertisement

ಕರಾವಳಿ: ಎಂ.ಒ. 4 ಬಿತ್ತನೆ ಬೀಜ ಕೊರತೆ

10:54 AM Jun 08, 2017 | Team Udayavani |

ಮೂಡಬಿದಿರೆ/ಉಡುಪಿ/ಮಂಗಳೂರು: ಮಳೆಗಾಲ ಆರಂಭವಾಗಿದೆ. ಕರಾವಳಿಯಲ್ಲಿ “ಎಂ.ಒ. 4′ ಭತ್ತದ ಬೀಜ ಕೊರತೆಯಾಗಿದ್ದು, ಬದಲಿಯಾಗಿ ಜಯ ಮತ್ತು ಜ್ಯೋತಿ ಮಾತ್ರ ಲಭ್ಯವಿದೆ. 

Advertisement

ಕರಾವಳಿಯಲ್ಲಿ ಜಯ ಮತ್ತು ಜ್ಯೋತಿಗೆ ಹೋಲಿಸಿದರೆ ಎಂ.ಒ.4 ತಳಿಯಿಂದ ಹೆಚ್ಚು ಫ‌ಸಲು ಬರುವುದರಿಂದ ಇತ್ತೀಚೆಗೆ ಈ ಬೀಜಕ್ಕೆ ಬೇಡಿಕೆ ಹೆಚ್ಚುತ್ತಿದೆ.

ರೈತರು ಮೂಡಬಿದಿರೆ ವಲಯದ ಕೃಷಿ ಇಲಾಖೆಯಲ್ಲಿ “ಎಂ.ಒ. 4′ ಭತ್ತದ ಬೀಜ ಬೇಕು ಎಂದು ವಿಚಾರಿ ಸಿದರೆ ಅಲ್ಲಿ ಬಂದಿದ್ದ 100 ಚೀಲ ಬೀಜ ಈಗಾಗಲೇ ಮುಗಿದು ಹೋಗಿದೆ. ಅದಕ್ಕಾಗಿಯೇ ಬಂದ ರೈತರು ಬರಿಗೈಯಲ್ಲಿ ವಾಪಸು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮೂಡಬಿದಿರೆ ವಲಯದಲ್ಲಿ ಸುಮಾರು 3,000 ಎಕ್ರೆ ಭತ್ತ ಬೆಳೆಯುವ ಭೂಮಿ ಇದೆ. ಎಲ್ಲೋ ಕೆಲವರು
ಸ್ವಂತ ಬೆಳೆಸಿದ ಬೀಜವನ್ನೇ ಬಳಸುತ್ತಾರೆ. ಹೆಚ್ಚಿನವರು ಸರಕಾರದ ಬೀಜವನ್ನೇ ಅವಲಂಬಿತರಾಗಿದ್ದಾರೆ.

ಮೂಡಬಿದಿರೆಗೆ ಈ ಸಲ 100 ಚೀಲ ಎಂ.ಒ. 4 ಮತ್ತು 25 ಚೀಲ ಬಿಳಿ ಜಯ ಬೀಜ ಬಂದಿತ್ತು. ಎಂ.ಒ. 4 ಮುಗಿದಾಗಿದೆ. ಬಿಳಿ ಜಯಕ್ಕೆ ಅಷ್ಟು ಬೇಡಿಕೆ ಇಲ್ಲ. ಕಾರಣ  ಅದು ಸಪ್ಪೆ. ಮಾರಾಟಕ್ಕೂ ಬೇಡಿಕೆ ಇಲ್ಲ. ಮೂಡಬಿದಿರೆಗೆ ಕನಿಷ್ಠ ಪಕ್ಷ 250 ಚೀಲ ಎಂ.ಒ. 4 ಬೇಕಾಗಬಹುದು ಎಂದು ಅಂದಾಜಿಸಲಾಗುತ್ತಿದೆ. ಈ ಸೀಸನ್‌ನಲ್ಲಿ ಇನ್ನು ಈ ಬೀಜ ಪೂರೈಕೆ ಆಗಲು ಸಾಧ್ಯವೇ ಇಲ್ಲ.

Advertisement

ಈ ಬಗ್ಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ವಿಚಾರಿಸಿದರೆ ಅವರು ಕೊಡುವ ಉತ್ತರ ಹೀಗಿದೆ:
“ಎಂ.ಒ. 4ನ್ನು ಬೆಳೆಯುವವರು ಉಡುಪಿ, ದ.ಕ. ಜಿಲ್ಲೆಯವರೇ ಹೆಚ್ಚು. ಉಳಿದೆಡೆ ಅದನ್ನು ಬೆಳೆಯಲು ಆಸಕ್ತಿ ತೋರಿಸುವುದಿಲ್ಲ. ಮಂಗಳೂರಿಗೆ ಕರ್ನಾಟಕ ಬೀಜ ನಿಗಮ ಎಂ.ಒ. 4 ಬೀಜವನ್ನು ಪೂರೈಕೆ ಮಾಡುವುದು ಶಿವಮೊಗ್ಗದಿಂದ. ಅಲ್ಲಿಯ 1 ಹಳ್ಳಿಯ ರೈತರಿಂದ ಒತ್ತಾಯ ಪೂರ್ವಕ ಕ್ರಮಬದ್ಧವಾಗಿ ಬೆಳೆಸಿ ಬೀಜ ತರಿಸಿಕೊಂಡು ದ.ಕ., ಉಡುಪಿಗೆ ಒದಗಿಸಲಾಗುತ್ತಿದೆ. ಈ ಸಲ 6,000 ಕ್ವಿಂ. ಬೆಳೆಯುವವರು ಬೆಳೆದದ್ದೇ 2,000 ಕ್ವಿಂ. ಹಾಗಾಗಿ ನಿರ್ದಿಷ್ಟವಾಗಿ ಎಂ.ಒ. 4 ಬೀಜದ ಕೊರತೆ ಕಂಡಿರುವುದು ಸಹಜ. ಆದರೆ ರೈತರಿಗೆ ಜಯ ಮತ್ತು ಜ್ಯೋತಿ ಬೀಜ ಎಷ್ಟು ಬೇಕಾದರೂ ಪೂರೈಸಲು ನಮಗೆ ಸಾಧ್ಯವಿದೆ’.

ಇನ್ನಷ್ಟು ವಿಚಾರಿಸಿದರೆ, ಕಳೆದ ವರ್ಷ ಮೂಡಬಿದಿರೆ ವಲಯಕ್ಕೆ ಪೂರೈಸಲಾದ ಬಿತ್ತನೆ ಬೀಜವನ್ನು ರೈತರು ಸಕಾಲ ದಲ್ಲಿ ಒಯ್ಯದೆ ಗೋದಾಮಿನಲ್ಲೇ ಉಳಿದುಬಿಟ್ಟು ಸಾಕಷ್ಟು ನಷ್ಟ ಉಂಟಾಗಿದೆ ಎಂಬ ಮಾಹಿತಿಯೂ ಲಭಿಸುತ್ತದೆ.

ದ.ಕ.ಕ್ಕೆ  ಈ ವರ್ಷ 285 ಕ್ವಿಂಟಾಲ್‌ ಪೂರೈಕೆ
ಈ ವರ್ಷ 285 ಕ್ವಿಂಟಾಲ್‌ “ಎಂ.ಒ. 4′ ಭತ್ತದ ಬೀಜವನ್ನು ದ.ಕ. ಜಿಲ್ಲೆಗೆ ತರಿಸಿ ದಾಸ್ತಾನು ಇರಿಸಲಾಗಿತ್ತು. ಈಗ ಅದು ವಿತರಣೆಯಾಗಿ ಬಹುತೇಕ ಖಾಲಿಯಾಗಿದೆ. ಇನ್ನು  ಜಯಾ ಮತ್ತು ಜ್ಯೋತಿ ಭತ್ತದ ಬೀಜ ಮಾತ್ರ ಲಭ್ಯವಿದೆ. ಈ ವರ್ಷ ಮಳೆ ಬೇಗ ಬಂದ ಕಾರಣ ಭತ್ತದ ಬೀಜ ಬೇಗನೆ ಮುಗಿದಿದೆ. ಸಾಮಾನ್ಯವಾಗಿ ಜಿಲ್ಲೆಯ ಎಂ.ಒ. 4 ಭತ್ತದ ಬೀಜದ ಬೇಡಿಕೆ 250 ಕ್ವಿಂಟಾಲ್‌ನಿಂದ 300 ಕ್ವಿಂಟಾಲ್‌. ಈ ವರ್ಷ 285 ಕ್ವಿಂಟಾಲ್‌ ತರಿಸಿದ್ದೆವು. ಬೇಡಿಕೆ ಜಾಸ್ತಿ ಇದ್ದ ಕಾರಣ ಅದೆಲ್ಲವೂ ಬಹುತೇಕ ಖಾಲಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇ ಗೌಡ ತಿಳಿಸಿದ್ದಾರೆ. 

ಉಡುಪಿ: ಬೇಡಿಕೆ 2,500 ಕ್ವಿಂ.; ಬಂದದ್ದು 1659 ಕ್ವಿಂ.
ಉಡುಪಿ ಜಿಲ್ಲೆಯಲ್ಲಿ 2,500 ಕ್ವಿಂ. ಬೇಡಿಕೆ ಇತ್ತು. ಆದರೆ ಪೂರೈಕೆಯಾದುದು 1,655 ಕ್ವಿಂ. ಎಂ.ಒ.4 ಬೀಜ ಉತ್ಪಾದನೆಯಾಗುವುದು ಸಾಗರದಲ್ಲಿ. ಅಲ್ಲಿಯೂ ಬರ ಸಮಸ್ಯೆ ಇದ್ದ ಕಾರಣ ಕೇವಲ 1,900 ಕ್ವಿಂ. ಉತ್ಪಾದನೆ ಯಾಯಿತು. ಅದರಲ್ಲಿ ಬಹುತೇಕ ಭಾಗವನ್ನು ಉಡುಪಿ ಜಿಲ್ಲೆಗೆ ತರಿಸಿಕೊಳ್ಳಲಾಯಿತು. ಕರ್ನಾಟಕ ಬೀಜ ನಿಗಮ ಬೀಜಗಳನ್ನು ಕೃಷಿ ಇಲಾಖೆಗೆ ಸರಬರಾಜು ಮಾಡುತ್ತದೆ. ಮುಂದಿನ ಸಾಲಿನಲ್ಲಿ 4,000 ಕ್ವಿಂ. ಗುರಿ ಇರಿಸಿಕೊಂಡು ಉತ್ಪಾದನೆ ಮಾಡಲು ಯತ್ನಿಸುತ್ತೇವೆ. ಈ ಬಾರಿಗೆ ಕೊರತೆ ಉಂಟಾದಲ್ಲಿ ರೈತರಲ್ಲಿರುವ ಬೀಜವನ್ನು ಇತರ ರೈತರಿಗೆ ಕೊಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇದು ಅಲ್ಲವಾದರೆ ಉಮಾ, ಜ್ಯೋತಿ ಬೀಜವನ್ನು ಪೂರೈಸುತ್ತೇವೆ ಎನ್ನುತ್ತಾರೆ ಉಡುಪಿಯ ಕೃಷಿ ಅಧಿಕಾರಿಗಳು.

Advertisement

Udayavani is now on Telegram. Click here to join our channel and stay updated with the latest news.

Next