ಕೋಸ್ಟಲ್ ವುಡ್ ಮತ್ತೂಮ್ಮೆ ಶೈನಿಂಗ್ ಮೂಡ್ ನಲ್ಲಿದೆ. ಕೆಲವು ಸಮಯದಿಂದ ಹಿಟ್ ಸಿನೆಮಾ ದಾಖಲಿಸಿದ ತುಳು ಸಿನೆಮಾರಂಗದಲ್ಲಿ ಕಸುವು ಜೋರಾಗಿದೆ. ಮಳೆ ಮುಗಿದ ಬೆನ್ನಿಗೆ ಶೂಟಿಂಗ್ ತಯಾರಿಯೂ ಇಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಸದ್ಯ ಚಿತ್ರ ತಂಡಗಳು ಫುಲ್ ಬ್ಯುಸಿ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಮೂರು ತಿಂಗಳ ಒಳಗೆ 8 ತುಳು ಸಿನೆಮಾಗಳು ಶೂಟಿಂಗ್ ಆರಂಭಿಸಲಿವೆ.
“ಮಣೆ ಮಂಚವು” ಶೂಟಿಂಗ್ ಆಗುತ್ತಿದೆ. ಮೊನ್ನೆ ಯಷ್ಟೇ ತೆರೆಕಂಡ “ಧರ್ಮ ದೈವ” ಟೀಮ್ ನ ಹೊಸ ಸಿನೆಮಾ “ಧರ್ಮ ಚಾವಡಿ” ಅಕ್ಟೋಬರ್‌ನಲ್ಲಿ ಮುಹೂರ್ತ ಕಾಣಲಿದೆ.
ಇನ್ನು “ಕಂಕನಾಡಿ”, ” ತರವಾಡು”, “ಜೈ”, ” ಪಿಲಿಪಂಜ”, “90 ಎಂಎಲ್”, ” ಗಾಡ್ ಫ್ರಾಮಿಸ್” ಹೀಗೆ ಕೆಲವು ಸಿನೆಮಾಗಳು ಈ ವರ್ಷಾಂತ್ಯದಲ್ಲಿ ಶೂಟಿಂಗ್ ಕಾಣಲಿವೆ.
ಈ ಮೂಲಕ ಕೋಸ್ಟಲ್ ವುಡ್‌ನ ಎಲ್ಲ ಕಲಾವಿದರು, ತಂತ್ರಜ್ಞರು ಸಿದ್ದತೆ ನಡೆಸುತ್ತಿದ್ದಾರೆ. 3 ತಿಂಗಳ ಒಳಗೆ ಈ ಎಲ್ಲ ಸಿನೆಮಾಗಳ ಶೂಟಿಂಗ್ ಒಂದು ಹಂತವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ತಯಾರಿ ನಡೆಯುತ್ತಿದೆ.
“ದಸ್ಕತ್” ಹಾಗೂ ” ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ಈಗಾಗಲೇ ರೆಡಿಯಾಗಿದೆ. ಈ ಪೈಕಿ “ಮಿಡ್ಲ್ ಕ್ಲಾಸ್” ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ.
ಮೊನ್ನೆಯಷ್ಟೇ ತೆರೆಕಂಡು ಸಾಕಷ್ಟು ಚರ್ಚೆ ಹುಟ್ಟುಹಾಕಿದ ತುಳುವರ “ಕಲ್ಜಿಗ” ಕನ್ನಡ ಸಿನೆಮಾ ಹಿನ್ನೆಲೆಯಲ್ಲಿ ಮುಂಬರುವ ತುಳುನಾಡಿನ ಸಿನೆಮಾದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿದೆ. ಸರಿ/ತಪ್ಪು ವಿಮರ್ಶೆಗಳ ಅವಲೋಕನ ಸದ್ಯ ಚಾಲ್ತಿಯಲ್ಲಿರುವುದರಿಂದ ಮುಂದಿನ ಸಿನೆಮಾಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನಡೆಸುವ ಜವಾಬ್ದಾರಿ ಚಿತ್ರತಂಡದ್ದಾಗಿದೆ.ಈ ಮಧ್ಯೆ ತುಳುವಿನಲ್ಲಿ ಸಾಕಷ್ಟು ಹೆಸರು ಮಾಡಿದ್ದ “ಕೋಟಿ ಚೆನ್ನಯ” ಕನ್ನಡದಲ್ಲಿ ಬರಲಿದೆ.
ದಿನೇಶ್ ಇರಾ