ಕಣ್ಣಿನ ಕಾಡಿಗೆ, ಮೂಗಿನ ಮೂಗುತಿ
ಜಡೆಯದು ಸೆಳೆದಿದೆ ನನ್ನನ್ನೇ
ಕೊರಳಿನ ಮಣಿಸರ ಗೆಜ್ಜೆಯ ಸದ್ದು ಸೆಳೆದಿದೆ ನನ್ನನ್ನೇ
ಯಾರೋ ಇವಳ್ಯಾರೊ ಇವಳ್ಯಾರೋ ನನ್ನ ಎದೆಯ ಕಧ್ದೋಳೆ…
ರೈಲಿನಲ್ಲಿ ಎತ್ತಲೋ ಹೊರಟಿದ್ದೆ. ಮನದ ತುಂಬಾ ಬೇಸರದ ಬಿರುಸು ಮಳೆ. ಬೇಸರ ಇದ್ದರೂ “ಖುಷಿಯಲ್ಲಿದ್ದೇನೆ’ ಎಂಬ ಮಂದಹಾಸವನ್ನು ಮೊಗದಲ್ಲಿ ಅರಳಿಸಿಕೊಂಡಿದ್ದೆ. ನನ್ನ ಈ ಬೇಸರವನ್ನು ಓಡಿಸುವ ಚಂಡಮಾರುತ ಯಾವಾಗ ಬೀಸುತ್ತೋ ಎಂದು ಕಾಯುತ್ತಾ, ರೈಲಿನ ಕಿಟಕಿಗೆ ಕಣ್ಣುಮಾಡಿ ಕೂತಿದ್ದೆ.
ನನ್ನ ಮನದ ಸಂಕಟ ಆ ದೇವರಿಗೆ ತಲುಪಿತೇನೋ, ಗೊತ್ತಿಲ್ಲ. ನನ್ನ ಬೇಸರವನ್ನು ಓಡಿಸುವ “ಹೆಣ್ಣು ಚಂಡಮಾರುತ’ ಅಲ್ಲಿಗೆ ಬಂದಾಗಿತ್ತು. ಅದು ತಂಪು ತಂಪು ಚೆಂದಮಾರುತ. ಕಾರವಾರದಲ್ಲಿ ನಾನು ಇದ್ದ ಬೋಗಿಗೆ ಒಬ್ಬಳು ಸುಂದರಿ ಹತ್ತಿದಳು. ನನ್ನ ಎದುರು ಕೂತವಳ ಹೆಸರು, “ಪ್ರೇಮ’ ಅಂತಲೂ ಗೊತ್ತಾಯಿತು. ಸಾಕ್ಷಾತ್ ಪ್ರೇಮದೇವತೆಯೇ ಅವಳು. ನನ್ನ ಎದೆಯಲ್ಲಿ ಪ್ರೀತಿಯನ್ನು ಹುಟ್ಟುಹಾಕಲು ಬಂದಹಾಗೆ ಕಾಣುತ್ತಿದ್ದಳು. ಕೊಲ್ಲುವಂಥ ನೋಟ, ನವಿಲುಗರಿಯಂತೆ ಹರಡಿರುವ ಅವಳ ತಲೆಕೂದಲು, ಯಾವ ಪೋರನ ದೃಷ್ಟಿಯೂ ನಾಟಬಾರದೆಂದು ಇಟ್ಟುಕೊಂಡಿರುವ ದೃಷ್ಟಿಬೊಟ್ಟು, ದ್ರಾಕ್ಷಿಯಂತೆ ಜೋತು ಬಿದ್ದಿರುವ ಕಿವಿಯೋಲೆ, ಮುಗಿಲತ್ತ ಮುಖಮಾಡಿರುವ ಆ ಮೂಗಿನ ದುಂಡಾದ ಮೂಗುತಿ ನನ್ನನ್ನು ಪ್ರೀತಿಯ ಸಾಗರಕ್ಕೆ ಧುಮ್ಮಿಕ್ಕುವಂತೆ ಮಾಡಿತು.
ಸುಮ್ಮನಿರಲಾರದೆ, ಅವಳೊಂದಿಗೆ ಮಾತಾಡಲು ಬಯಸಿದೆ. ಅವಳ ಮಧುರ ಕರಾವಳಿ ಭಾಷೆಗೆ ಮತ್ತೆ ಮನಸೋತೆ. “ಎಂಥಾ?’, “ಹೌದಾ?’, “ಅರ್ಥ ಆಯ್ತಾ?’, “ಅಲಾ…?’ ಎನ್ನುವ ಅವಳ ಭಾಷೆ ನನಗಂತೂ ಇಂದಿಗೂ ಮರೆಯಲು ಸಾಧ್ಯವಿಲ್ಲ. ಆ ಬೋಗಿಯೊಳಗಿನ ಸಂಭಾಷಣೆ ನನ್ನ ಕಿವಿಯಲ್ಲಿ ಈಗಲೂ ಗುನುಗುತ್ತಿದೆ. ಮಾತಿನಲ್ಲೇ ಪ್ರೇಮದ ಸಂಬಂಧವನ್ನು ಬೆಸೆಯುವಷ್ಟು ಹತ್ತಿರವಾದಳು.
ಅಲ್ಲಾ… ಆ ಕರಾವಳಿ ಕನ್ನಡದ ಮಾಧುರ್ಯ ಕೇಳುಗನ ಕಿವಿಗೆ ಅದೆಷ್ಟು ಇಂಪು! ನನ್ನ ಹೃದಯವನ್ನು ಹಗುರಾಗುವಂತೆ, ಬೇಸರವನ್ನೂ ಆ ಕಡಲಾಚೆಯಲ್ಲೋ ಎಸೆದುಬಿಡುವಂತೆ, ದುಃಖವನ್ನು ಮನಸ್ಸಿನಿಂದಲೇ ಅಳಿಸಿಹಾಕುವಂತೆ ಆಕೆ ಆಡಿದ ಪದಗಳು ನನ್ನ ಹೃದಯದಲ್ಲಿ ಕುಳಿತವು.
ಕೊನೆಗೂ ಅವಳೂರು ಭಟ್ಕಳ ಬಂತು. “ಹ್ವಾಯ್ ಬರೀ¤ನಿ ಆಯ್ತಾ?’ ಅಂತ ಮುದ್ದಾಗಿ ನಗುತ್ತಾ, ನನ್ನನ್ನು ಎಚ್ಚರಿಸಿ, ಹೊರಟಳು. ಅವಳು ಬೋಗಿಯಿಂದ ಇಳಿದು ನಡೆದು ಹೋಗುವಾಗ, ಅವಳ ಹೆಜ್ಜೆಗಳು ಪ್ಲಾಟ್‌ಫಾರಂ ಮೇಲಲ್ಲ, ನನ್ನೆದೆ ಮೇಲೆಯೇ ಅಚ್ಚಾಗುತ್ತಿರುವಂತೆ ಪುಳಕಗೊಂಡೆ. ಇವತ್ತಿಗೂ ಆಕೆ ಕೊಟ್ಟ ನಂಬರಿಗೆ ಯತ್ನಿಸುತ್ತಿರುವೆ, ಅದೇ ಸ್ವಿಚ್ಡ್ ಆಫ್ ಎನ್ನುವ ಒಂದೇ ರಾಗ. ಯಾವತ್ತಾದರೂ ಆಚೆಯಿಂದ, “ಹ್ವಾಯ್ ಆರಾಮ…?’ ಎಂಬ ದನಿ ಕೇಳಿಬರುತ್ತದೆಂದು ಕಾಯುತ್ತಲೇ ಇರುವೆ.
ಲೋಕೇಶ ಡಿ. ಶಿಕಾರಿಪುರ