Advertisement

ಕರಾವಳಿ ಜನ ಶ್ರಮಜೀವಿಗಳು: ಕೃಷ್ಣಾಚಾರ್ಯ

10:43 AM Aug 27, 2017 | |

ಕಲಬುರಗಿ: ತಮ್ಮ ಕೆಲಸದೊಂದಿಗೆ ಹೆಚ್ಚಾಗಿ ಗುರುತಿಸಿಕೊಳ್ಳುವ ಕಡಲು ತೀರ ಕರಾವಳಿ ಭಾಗದ ಜನರು ಶ್ರಮಜೀವಿಗಳು ಎಂದು ಹಿರಿಯ ನ್ಯಾಯವಾದಿ ನವಲಿ ಕೃಷ್ಣಾಚಾರ್ಯ ಹೇಳಿದರು. ನಗರದ ಸಾರ್ವಜನಿಕ ಉದ್ಯಾನವನದ ಹೋಟೆಲ್‌ ಯಾತ್ರಿಕ ನಿವಾಸದಲ್ಲಿ ದಕ್ಷಿಣ ಕನ್ನಡ ಸಂಘದ 52ನೇ ಗಣೇಶೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯವರು ಯಾವುದಾದರೂ ಕೆಲಸದಲ್ಲಿ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಂಡು ಯಶಸ್ವಿಯಾಗುತ್ತಾರೆ.
ಇದಕ್ಕೆ ಅವರ ಶ್ರಮವೇ ಕಾರಣ. ಕಳೆದ 52 ವರ್ಷದಿಂದ ವರ್ಷಂಪ್ರತಿ ದಕ್ಷಿಣ ಕನ್ನಡ ಭಾಗದವರೆಲ್ಲ ಕೂಡಿಕೊಂಡು ಗಣೇಶೋತ್ಸವ ಆಚರಿಸುತ್ತಿರುವುದು ಮಾದರಿ ಆಗಿದೆ ಎಂದು ಶ್ಲಾಘಿಸಿದರು. ಹೋಟೆಲ್‌ ಸೇರಿದಂತೆ ಇತರ ಉದ್ಯಮದಲ್ಲಿ ನೂರಾರು ಜನರು ಕಲಬುರಗಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸಂಘಕ್ಕೆ ಸ್ವಂತ ಕಚೇರಿ ಹೊಂದುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಮನಸ್ಸು ಮಾಡಬೇಕು. ಮುಂದಿನ ಗಣೇಶೋತ್ಸವ ನೂತನ ಕಚೇರಿಯಲ್ಲಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್‌ ಮಾತನಾಡಿ, ಗಣೇಶೋತ್ಸವದಲ್ಲಿ ಒಂದಾಗುವಂತೆ ಉಳಿದ ಕಷ್ಟ ನೋವುಗಳಲ್ಲೂ ಒಂದಾಗಬೇಕು. ಹೋಟೆಲ್‌ ಉದ್ಯಮ ಕಷ್ಟದಲ್ಲಿದೆ. ಸಂಘಕ್ಕೆ ಉದಾರಿಗಳ ಸಹಾಯ ಇನ್ನೂ ಬೇಕಾಗಿದೆ. ಕೇಳದೇ ಕೊಡುವವರೂ ಇದ್ದಾರೆ. ಇನ್ನು ಕೆಲವರು ಮರ್ಯಾದೆಗೆ ಅಂಜಿ ಕೊಡುವವರೂ ಇದ್ದಾರೆ. ಸಹಾಯ ಮಾಡುವ ಮನಸ್ಸು ಎಲ್ಲರಲ್ಲೂ ಬರಬೇಕೆಂದರು. ನಟಿ, ಕಲಾವಿದೆ ಪಂಕಜ ರವಿಶಂಕರ ಮಾತನಾಡಿ, ಆ. 27ರಂದು ಮಧ್ಯಾಹ್ನ 3:30ಕ್ಕೆ ಹಾಗೂ ಸಂಜೆ 6:30ಕ್ಕೆ ಗೌಡ್ರ ಗದ್ಲ ಸಾಮಾಜಿಕ ನಾಟಕ ಕಲಾವಿದರ ಸಹಾಯಾರ್ಥ ಹಮ್ಮಿಕೊಳ್ಳಲಾಗಿದೆ ಎಂದರು. ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ ವಿಭಾಗೀಯ ವ್ಯವಸ್ಥಾಪಕ ಜಿ. ಕೃಷ್ಣ ಹೇರ್ಳೆ ದಕ್ಷಿಣ ಕನ್ನಡ ಸಂಘದ ಗೌರವಾಧ್ಯಕ್ಷ ಪ್ರಶಾಂತ ಶೆಟ್ಟಿ, ಉಪಾಧ್ಯಕ್ಷ ಗಿರಿಧರ ಭಟ್‌, ಕಾರ್ಯದರ್ಶಿ ಅರುಣಾಚಲ ಭಟ್‌, ಜಂಟಿ ಕಾರ್ಯದರ್ಶಿ ಜಗನ್ನಾಥ ಸುವರ್ಣ, ಕ್ರೀಡಾ ಕಾರ್ಯದರ್ಶಿ ಜೀವನಕುಮಾರ ಜತ್ತನ್‌, ಸಾಂಸ್ಕೃತಿಕ ಕಾರ್ಯದರ್ಶಿ ಶ್ರವಣಾ ಭಟ್‌, ಖಜಾಂಚಿ ಸುಬ್ರಹ್ಮಣ್ಯ ಭಟ್‌ ಮುಂತಾದವರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಹೊಟೇಲ್‌ ಉದ್ಯಮದ ಸಾಧಕರನ್ನು ಸತ್ಕರಿಸಲಾಯಿತು. ನಂತರ ನಾಟ್ಯಾಂಜಲಿ ಸಂಘದಿಂದ ಭರತ ನಾಟ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 

Advertisement
Advertisement

Udayavani is now on Telegram. Click here to join our channel and stay updated with the latest news.

Next