Advertisement

ಕರಾವಳಿ ಉತ್ಸವ: ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಚಾಲನೆ

09:43 AM Dec 23, 2017 | |

ನೆಹರೂಮೈದಾನ: ಕರಾವಳಿ ಕರ್ನಾಟಕ ಅತ್ಯಂತ ದೊಡ್ಡ ಸರಕಾರಿ ಸಾಂಸ್ಕೃತಿಕ ಉತ್ಸವವೆಂದೇ ಖ್ಯಾತಿ ಗಳಿಸಿರುವ, ಹತ್ತು ದಿನಗಳ ಕಾಲ ನಡೆಯಲಿರುವ ಅದ್ದೂರಿ ಕರಾವಳಿ ಉತ್ಸವಕ್ಕೆ ಶುಕ್ರವಾರ ಸಂಜೆ ಸಾಂಸ್ಕೃತಿಕ ಮೆರವಣಿಗೆ ಮೂಲಕ ಚಾಲನೆ ನೀಡಲಾಯಿತು. ರಾಜ್ಯ ಆಹಾರ ಮತ್ತು
ನಾಗರಿಕ ಪೂರೈಕೆ ಇಲಾಖಾ ಸಚಿವ ಯು.ಟಿ. ಖಾದರ್‌ ಅವರು ದೀಪ ಬೆಳಗಿಸಿ ತೆಂಗಿನಕಾಯಿ ಒಡೆಯುವ ಮೂಲಕ ಸಾಂಪ್ರದಾಯಿಕ ಶೈಲಿಯಲ್ಲಿ ಮೆರವಣಿಗೆಯನ್ನು ಉದ್ಘಾಟಿಸಿದರು.

Advertisement

ಬಳಿಕ ಶಂಖ ಉದ್ಘೋಷ ಹಾಗೂ ಕೊಂಬಿನ ನಾದದೊಂದಿಗೆ ಮೆರವಣಿಗೆಗೆ ಚಾಲನೆ ಸಿಕ್ಕಿತು. ನೆಹರೂ ಮೈದಾನದಿಂದ ಹೊರಟ ಮೆರವಣಿಗೆ ಎ.ಬಿ.ಶೆಟ್ಟಿ ಸರ್ಕಲ್, ಹಂಪನಕಟ್ಟೆ ವೃತ್ತ, ಕೆ.ಎಸ್‌. ರಾವ್‌ ರಸ್ತೆ, ಎಂ.ಜಿ.ರೋಡ್‌ ಮೂಲಕ ಕರಾವಳಿ ಉತ್ಸವ ಮೈದಾನವನ್ನು ತಲುಪಿತು. ಸುಮಾರು 76 ಸಾಂಸ್ಕೃತಿಕ ತಂಡಗಳ ಸಾವಿರಾರು ಕಲಾವಿದರು ಮೆರವಣಿಗೆಯ ರಂಗವನ್ನು ಹೆಚ್ಚಿಸಿದರು. 

ರಾಜ್ಯ ಸಾಂಸ್ಕೃತಿಕತೆಯ ಸೊಬಗು
ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ವೈವಿಧ್ಯಮಯ ಕಲಾಪ್ರಕಾರಗಳಾದ ಶಂಖದಾಸರು, ಕೊಂಬಿನ ಸ್ವರ, ಚೆಂಡೆ ಸದ್ದು, ಹುಲಿವೇಷ, ತಟ್ಟೀರಾಯ, ಯಕ್ಷಗಾನದ ವೇಷಗಳು, ಬೇತಾಳ, ಗೊಂಬೆ ಬಳಗ, ತಾಲೀಮು ಜತೆಗೆ ಮಹಿಳಾ ವೀರಗಾಸೆ, ಚಿಕ್ಕಮಗಳೂರು, ಶಿವಮೊಗ್ಗದ ಡೊಳ್ಳು ಕುಣಿತ, ಸಾಗರದ ಕೋಲಾಟ, ಹಾವೇರಿಯ ಪುರವಂತಿಕೆ, ಧಾರವಾಡದ ಜಗ್ಗಲಿಗೆ ಮೇಳ, ಮಾಗಡಿಯ ಪಟ್ಟದ ಕುಣಿತ, ತುಮಕೂರಿನ ಸೋಮನ ಕುಣಿತ, ರಾಮನಗರದ ಪೂಜಾ ಕುಣಿತ, ಮೈಸೂರಿನ ವೀರಭದ್ರ ಕುಣಿತ, ಜಾನಪದ ಗೊಂಬೆ, ಗಜಮೇಳ, ಹಾವೇರಿಯ ಬೇಡರ ಕುಣಿತ, ಕಾರವಾರದ ಸುಗ್ಗಿ ಕುಣಿತ, ಮೈಸೂರಿನ ಕಂಸಾಳೆ, ಕನ್ನಡ ಭುವನೇಶ್ವರಿಯ ಸ್ತಬ್ಧಚಿತ್ರ ವಿಶೇಷ ಗಮನ ಸೆಳೆಯಿತು.

ಮೆರವಣಿಗೆಯುದ್ದಕ್ಕೂ ಬೆಡಿ ಗರ್ನಲ್  ನ ಸದ್ದು ಸಾರ್ವಜನಿಕರನ್ನು ಮೆರವಣಿಗೆಯತ್ತ ಸೆಳೆಯಲು ಯಶಸ್ವಿಯಾಯಿತು. ವಿವಿಧ ದೇವಸ್ಥಾನಗಳ ಸಾಂಪ್ರದಾಯಿಕ ವಾದನಗಳು ವಿಶೇಷ ಗಮನ ಸೆಳೆದವು. ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಬಣ್ಣದ ಕೊಡೆಗಳೊಂದಿಗೆ ಭಾಗವಹಿಸಿದ್ದರು. ತುರ್ತು ಸೇವೆಯ ದೃಷ್ಟಿಯಿಂದ ಅಗ್ನಿಶಾಮಕ ಸೇವೆ, ಆ್ಯಂಬುಲೆನ್ಸ್‌ ಮೆರವಣಿಗೆಯ ಕೊನೆಯಲ್ಲಿ ಪಾಲ್ಗೊಂಡಿದ್ದವು.

ಸಂಚಾರ ವ್ಯತ್ಯಯ
ನೆಹರೂ ಮೈದಾನದಿಂದ ಹೊರಟ ಮೆರವಣಿಗೆಯು ವಾಹನ ನಿಬಿಡ ಪ್ರಮುಖ ರಸ್ತೆಗಳಲ್ಲೇ ಸಾಗಿದ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ವ್ಯತ್ಯಯವೂ ಉಂಟಾಯಿತು. ಜತೆಗೆ ಸಂಜೆಯ ವೇಳೆಗೆ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದ್ದು, ಸುಗಮ ಸಂಚಾರಕ್ಕೆ ತೊಂದರೆಯುಂಟಾಯಿತು. ಆದರೆ ಪೊಲೀಸರು ಸೂಕ್ತ ಕ್ರಮ ಕೈಗೊಂಡು ಮೆರವಣಿಗೆಯ ಜತೆಗೆ ವಾಹನ ಸಂಚಾರವನ್ನೂ ಸುಗಮಗೊಳಿಸಿದರು.

Advertisement

ಪಾನೀಯ-ಉಪಾಹಾರ
ಮೆರವಣಿಗೆಯು ಪಾದಯಾತ್ರೆಯಲ್ಲೇ ಸಾಗಿದ ಹಿನ್ನೆಲೆಯಲ್ಲಿ ಹಸಿವು ಹಾಗೂ ಬಾಯಾ ರಿಕೆಯನ್ನು ನೀಗಿಸುವುದಕ್ಕೋಸ್ಕರ ಅಲ್ಲಲ್ಲಿ ಪಾನೀಯ- ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಹಣ್ಣು ಹಂಪಲುಗಳ ವ್ಯವಸ್ಥೆಯೂ ಇತ್ತು. ತಿಂಡಿ ಹಾಗೂ ಪಾನೀಯ ಕಸವನ್ನು ವಿಲೇವಾರಿ ಮಾಡುವುದಕ್ಕೂ ಪಾಲಿಕೆಯ ವಾಹನಯ ಕಸ ವಿಲೇವಾರಿ ವಾಹನಗಳನ್ನೂ ನಿಯೋಜಿಸಲಾಗಿತ್ತು.

ಕಲಾಭಿಮಾನದಿಂದ ಜೀವನ ಸಾರ್ಥಕ: ಸಚಿವ ಖಾದರ್‌
ಮನುಷ್ಯ ಜೀವನದಲ್ಲಿ ನಾಡು-ನುಡಿ ಹಾಗೂ ಕಲಾಭಿಮಾನ ಇದ್ದಾಗ ಮಾತ್ರ ಆತನ ಜೀವನ ಸಾರ್ಥಕ ವಾಗುತ್ತದೆ. ರಾಜ್ಯ ಸರಕಾರ ಪ್ರತಿವರ್ಷ ಅದ್ದೂರಿಯ ಕರಾವಳಿ ಉತ್ಸವವನ್ನು ಆಯೋಜಿಸುತ್ತಿದ್ದು, ಜನರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಸಹೋದ ರತೆ, ಏಕತೆ ಹಾಗೂ ಸಾಮರಸ್ಯ ಸಾರಲು ಇದು ಕಾರಣವಾಗ ಲಿದೆ ಎಂದು ಸಚಿವ ಯು.ಟಿ.ಖಾದರ್‌ ಹೇಳಿದರು.

ಶಾಸಕ ಮೊಯಿದಿನ್‌ ಬಾಬಾ ಮಾತನಾಡಿ, ಕಲೆ-ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಹೊಂದಿರುವ ತುಳು ನಾಡಿನ ಈ ಉತ್ಸವ ಶಾಂತಿ-ಸೌಹಾರ್ದದ ಉತ್ಸವವಾಗಲಿ ಎಂದರು. ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್‌.ಖಾದರ್‌, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ಜಿ.ಪಂ.ಸಿಇಒ ಡಾ| ಎಂ.ಆರ್‌.ರವಿ, ಎಡಿಸಿ ಕುಮಾರ್‌, ಮನಪಾ ಆಯುಕ್ತ ಮಹಮ್ಮದ್‌ ನಝೀರ್‌, ಜಂಟಿ ಆಯುಕ್ತ ಗೋಕುಲ್‌ದಾಸ್‌ ನಾಯಕ್‌, ತಹಶೀಲ್ದಾರ್‌ ಗುರುಪ್ರಸಾದ್‌ ನಾಯಕ್‌ ಮೊದಲಾದವರಿದ್ದರು. ಕಸಾಪ ಜಿಲ್ಲಾಧ್ಯಕ್ಷ ಪ್ರದೀಪಕುಮಾರ ಕಲ್ಕೂರ ನಿರ್ವಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next