ಪಡುಬಿದ್ರಿ: ಬಿರುಸಿನ ಮಳೆ, ಗಾಳಿಗೆ ಕಡಲ ತಡಿಯ ಉಸುಕಿನಲ್ಲಿನ ಉಂಟಾಗಿರುವ ಭಾರೀ ಗುಂಡಿಯ ಪರಿಣಾಮವಾಗಿ ಪಡುಬಿದ್ರಿ ಕಾಡಿಪಟ್ಣ ಶಂಕರ ಅಮೀನ್ ಮನೆ ಬಳಿ ಕಡಲ್ಕೊರೆತವುಂಟಾಗಿದೆ. ಇದರಿಂದಾಗಿ ಈಗಾಗಲೇ ಸುಮಾರು 4ತೆಂಗಿನ ಮರಗಳು, ಪಡುಬಿದ್ರಿ ಬೀಚ್ ಅಭಿವೃದ್ಧಿ ಕಾಮಗಾರಿಯ ಭಾಗವಾಗಿರುವ ಒಂದು ವಿದ್ಯುತ್ ಕಂಬವು ನೆಲಕಚ್ಚಿದೆ.
ಇಲ್ಲಿನ ಅಭಿವೃದ್ಧಿ ಕಾಮಗಾರಿಯ ವೇಳೆ ಹಾಸಲಾಗಿದ್ದ ಹಾಲೋ ಬ್ಲಾಕ್ಸ್ ಅಂಗಳದ ಭಾಗ ಹಾಗೂ ಕಾಡಿಪಟ್ಣ ಕೈರಂಪಣಿ ಫಂಡ್‌ಗೆ ಸೇರಿರುವ ಗೋದಾಮು ಕಡಲೊಡಲು ಸೇರಲು ಕ್ಷಣಗಣನೆಯೂ ಆರಂಭವಾಗಿದೆ.
ಕಳೆದ ಬಾರಿ ಮಾಜಿ ಶಾಸಕ ಲಾಲಾಜಿ ಮೆಂಡನ್ ಮುತುವರ್ಜಿಯಲ್ಲಿ ಪಡುಬಿದ್ರಿ ಮುಖ್ಯಬೀಚ್ ಹಾಗೂ ಕಾಡಿಪಟ್ಣಗಳಲ್ಲಿ ನಿರ್ಮಿಸಲಾದ ತಡೆಗೋಡೆಯ ಕಾಮಗಾರಿಯ ನಡುವೆ ಖಾಸಗಿ ವ್ಯಕ್ತಿಯೋರ್ವರ ಮನವಿಯಂತೆ ಸಮುದ್ರ ತೀರ ಪ್ರವೇಶಕ್ಕಾಗಿ ಕೈಬಿಡಲಾಗಿದ್ದ ಸುಮಾರು 50ಮೀಟರ್ ವ್ಯಾಪ್ತಿಯ ಪ್ರದೇಶದಲ್ಲೇ ಈ ಕೊರೆತವೀಗ ಕಾಣಿಸಿಕೊಂಡಿದೆ.
ಈಗಾಗಲೇ ಕಳೆದ 2-3ವರ್ಷಗಳಿಂದೀಚೆಗೆ ನಡೆಸಲಾಗಿರುವ ತಡೆಗೋಡೆ ಕಾಮಗಾರಿಗಳ ಕುರಿತಾಗಿ ಗುತ್ತಿಗೆದಾರರಿಗೆ ಸರಕಾರದ ವತಿಯಿಂದ ಆಗಬೇಕಾಗಿರುವ ಹಣದ ಪಾವತಿಯಾಗದಿರುವುದು ನಿರಾಶಾದಾಯಕವಾಗಿದೆ. ಪ್ರಾಕೃತಿಕ ವಿಕೋಪ ನಿಧಿಯಿಂದಲೂ ಈ ತಡೆಗೋಡೆ ತುರ್ತು ಕಾಮಗಾರಿಗಳನ್ನು ಹೊರತುಪಡಿಸಿರುವುದೂ ಸರಿಯಲ್ಲ ಎಂದು ಕೆಪಿಸಿಸಿ ಕೋ – ಆರ್ಡಿನೇಟರ್, ಮಾಜಿ ತಾ. ಪಂ. ಸದಸ್ಯ ನವೀನ್‌ಚಂದ್ರ ಜೆ. ಶೆಟ್ಟಿ ಹೇಳಿದ್ದಾರೆ.
ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಬಜೆಟ್ ಅಧಿವೇಶನಲ್ಲಿ ಭಾಗಿಗಳಾಗಿದ್ದು ಬೆಂಗಳೂರಿನಲ್ಲಿದ್ದಾರೆ.
ಪಡುಬಿದ್ರಿ ಗ್ರಾಮ ಲೆಕ್ಕಾಧಿಕಾರಿ ಮಥಾಯಿ ಪಿ. ಎಂ. ಹಾಗೂ ಗ್ರಾಮ ಸಹಾಯಕ ಜಯರಾಮ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಾಪು ತಹಶೀಲ್ದಾರ್ ಶ್ರೀನಿವಾಸಮೂರ್ತಿ ಅವರು ತಾವೇ ಸ್ವತಹಾ ಪರಿಶೀಲಿಸಿ, ಗ್ರಾಮ ಲೆಕ್ಕಾಧಿಕಾರಿಗಳ ವರದಿಯ ಮೇರೆಗೆ ಬಂದರು ಹಾಗೂ ಮೀನುಗಾರಿಕಾ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಿ ಈ ಪ್ರದೇಶದಲ್ಲಿ ತುರ್ತು ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಲಾಗಿದೆ ಎಂದಿದ್ದಾರೆ.