Advertisement

ಕರಾವಳಿ ಆನೆ ಕಾರಿಡಾರ್‌ ಈಗ ನಕ್ಸಲ್‌ ಕಾರಿಡಾರ್‌!

12:40 AM Mar 25, 2024 | Team Udayavani |

ಕಾರ್ಕಳ/ಸುಳ್ಯ: ಕೇರಳ- ಕೊಡಗು- ದಕ್ಷಿಣ ಕನ್ನಡ ಜಿಲ್ಲೆಗಳ ನಡುವಿನ ಪಶ್ಚಿಮ ಘಟ್ಟದ ಆನೆ ಕಾರಿಡಾರ್‌ ಈಗ ನಕ್ಸಲರು ನಡೆದಾಡುವ ಹಾದಿಯಾಗಿ ಪರಿಣಮಿ ಸಿದ್ದು, ಸದ್ದಿಲ್ಲದೆ ಇದು “ರೆಡ್‌ ಕಾರಿಡಾರ್‌’ ಆಗಿ ಪರಿವರ್ತನೆಗೊಂಡಿದೆ.

Advertisement

ವಿಕ್ರಂ ಗೌಡನಂತಹ ಮಾವೋವಾದಿಗಳ ನೇತೃತ್ವದಲ್ಲಿ ನಿರಂ ತರವಾಗಿ ಕೇರಳ-ಕೊಡಗು-ದ.ಕ. ಜಿಲ್ಲೆಗಳ ಮೂಲಕ ನಕ್ಸಲರು ಓಡಾಡುತ್ತಿ ದ್ದಾರೆ. ಯಾವ ಮಾರ್ಗದ ಮೂಲಕ ಎಲ್ಲಿಗೆ ತೆರಳಬಹುದು, ಎಲ್ಲಿ ಹೋದರೆ ಅಕ್ಕಿ, ದಿನಸಿ ಇನ್ನಿತರ ವಸ್ತುಗಳು ದೊರೆ ಯುತ್ತವೆ, ಎಷ್ಟು ಅಪಾಯ ರಹಿತ ಒಂಟಿ ಮನೆಗಳಿವೆ, ಎಲ್ಲಿ ಅಪಾಯ ಎದುರಾಗದು ಎನ್ನುವ ಮಾಹಿತಿ ಅವರಿಗಿದೆ ಎಂದು ಮೂಲಗಳು ಹೇಳು ತ್ತವೆ. ಈಗ ಚುನಾವಣೆಯ ಸಮಯ ಮನೆಗಳಲ್ಲಿ ಕೋವಿ ಇರುವು ದಿಲ್ಲ, ಕಾರ್ಮಿಕರ ಮನೆಗಳಲ್ಲಿ ಬಂದೂಕಿನಂತಹ ಆಯುಧವೂ ಇರುವುದಿಲ್ಲ ಎಂಬ ಧೈರ್ಯವೂ ಅವರು ಅರಣ್ಯದಂಚಿನ ಲೈನ್‌ ಮನೆಗಳತ್ತ ನಿರ್ಭಯವಾಗಿ ಹೆಜ್ಜೆ ಹಾಕಲು ಕಾರಣ ಎನ್ನಲಾಗಿದೆ.

ತಳವೂರಲು ಪ್ರಯತ್ನ
ಪುಷ್ಪಗಿರಿ ದಟ್ಟಾರಣ್ಯದ ಅಂಚಿನ ಕೊಡಗು ಹಾಗೂ ದ.ಕ. ಜಿಲ್ಲೆಯ ಗಡಿ ಭಾಗಗಳಲ್ಲಿ ಹಲವಾರು ಜನವಾಸದ ಸ್ಥಳಗಳಿವೆ.

ಮಡಿಕೇರಿ, ಗಾಳಿಬೀಡು, ಸಂಪಾಜೆ, ಕಲ್ಮಕಾರು, ಕೊಲ್ಲಮೊಗ್ರು, ಬಾಳುಗೋಡು, ಸುಬ್ರಹ್ಮಣ್ಯ ಮುಂತಾದ ಕಡೆ ಬುಡಕಟ್ಟು ಸಹಿತ ಎಲ್ಲ ವರ್ಗದ ಜನರಿದ್ದಾರೆ. ಕಾಡಂಚಿನಲ್ಲಿ ಕೃಷಿ, ಸಣ್ಣ ಪುಟ್ಟ ಉದ್ದಿಮೆ, ಕೂಲಿ ಕಾರ್ಮಿಕರು ಒಂದೆಡೆಯಿದ್ದರೆ, ನೂರಾರು ಎಕರೆ ಭೂ ಒಡೆಯರಿದ್ದಾರೆ. ಆನೆ ಕಾರಿಡಾರ್‌, ಕಸ್ತೂರಿರಂಗನ್‌, ರಸ್ತೆ, ನೀರು, ವಿದ್ಯುತ್‌ ಸಹಿತ ಮೂಲಸೌಕರ್ಯಗಳಿಗಾಗಿ ಚಳವಳಿ ಇಲ್ಲಿ ನಿರಂತರ. ಇದರ ಲಾಭ ಪಡೆದು ನಕ್ಸಲರು ಭದ್ರ ನೆಲೆ ಕಾಣುವ ದೂರಗಾಮಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನೊಂದು ಕಡೆ ಇದಕ್ಕೆ ಸರಕಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯವೂ ಕಾರಣವಾಗಿದೆ ಎಂದು ಆರೋಪಿಸಲಾಗುತ್ತಿದೆ.

ಇಡೀ ದೇಶ ಚುನಾವಣೆಯ ಗುಂಗಿನಲ್ಲಿದೆ. ಇದೇ ವೇಳೆ ಕೇರಳದಿಂದ ಪ್ರಾರಂಭಗೊಂಡು ಕೊಡಗು, ಸಂಪಾಜೆ, ಕಡಮಕಲ್ಲು, ಕೂಜಿಮಲೆ, ಬಾಳುಗೋಡು, ಸುಬ್ರಹ್ಮಣ್ಯ, ಬಿಸಿಲೆ, ಚಾರ್ಮಾಡಿ, ಬೆಳ್ತಂಗಡಿ, ಕುದುರೆಮುಖ, ಕಾರ್ಕಳ, ಹೆಬ್ರಿ, ಶೃಂಗೇರಿ, ಕುಂದಾಪುರ ಸೇರಿದಂತೆ ಚಿಕ್ಕಮಗಳೂರು ವರೆಗೂ ಪಶ್ಚಿಮ ಘಟ್ಟದಲ್ಲಿ ನಕ್ಸಲ್‌ ಚಟುವಟಿಕೆ ಜೀವಂತವಿದೆ. ನಕ್ಸಲರು ಕಾಡಂಚಿನ ಮನೆಗಳಿಗೆ ಬಂದು ಹೋದ ಸುದ್ದಿ ಬಹಿರಂಗವಾಗುತ್ತಲೇ ಈ ಹಿಂದೆ ಅಲ್ಲಲ್ಲಿ ಕಂಡುಬಂದಿರುವ ಮಾಹಿತಿಗಳು ಹೊರಬೀಳುತ್ತಿವೆ. ಸ್ವಲ್ಪ ಸಮಯದ ಹಿಂದೆ ಗುಂಡ್ಯ ಬಳಿಯ ಅಡ್ಡಹೊಳೆ, ಕೈಕಂಬ, ರೆಂಜಾಳ, ಚಾರಗುಡ್ಡೆ ದಟ್ಟಾರಣ್ಯದಲ್ಲೂ ನಕ್ಸಲರ ಇರುವಿಕೆಯನ್ನು ಕಂಡಿದ್ದಾಗಿ ಕೆಲವರು ಹೇಳಿಕೊಂಡಿದ್ದಾರೆ. ಫೆಬ್ರವರಿಯಲ್ಲಿ ಬೈಂದೂರಿನ ಜಡ್ಕಲ್‌, ಮುದೂರು ಭಾಗದಲ್ಲಿಯೂ ನಕ್ಸಲರು ಕಂಡುಬಂದಿದ್ದರು ಎನ್ನಲಾಗಿದೆ.

Advertisement

ಅರಣ್ಯದಂಚಿನ ಜನರ ನೋವು-ಕಷ್ಟಗಳ ಲಾಭ ಪಡೆದುಕೊಳ್ಳುವ ಪ್ರಯತ್ನದಲ್ಲಿ ನಕ್ಸಲರಿರುವುದು ಸ್ಪಷ್ಟ. ದಿನಸಿ ಪಡೆದುಕೊಳ್ಳುವ ನೆಪದಲ್ಲಿ ವಾರದ ಅವಧಿಯಲ್ಲಿ ಕೂಜಿಮಲೆ, ಕೋಟೆ ಪ್ರದೇಶಗಳಿಗೆ ಭೇಟಿ ನೀಡಿದ ನಕ್ಸಲರು ಮನೆಯವರಲ್ಲಿ, “ಬಡವರ ಪರವಾಗಿ ನಾವು ಹೋರಾಡುತ್ತಿದ್ದೇವೆ. ಉಳ್ಳವರ ಭೂಮಿಯನ್ನು ಬಡವರಿಗೆ ಹಂಚಬೇಕು. ಕಾರ್ಮಿಕರ, ಬಡವರ ಶೋಷಣೆ ನಡೆಯುತ್ತಿದ್ದು, ಅದು ನಿಲ್ಲಬೇಕು. ಅಶಕ್ತರಿಗೆ ನ್ಯಾಯ ಒದಗಿಸಲು ನಾವು ಹೋರಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಕಾಡಾನೆ ಓಡಾಡಿದ
ಜಾಗದಲ್ಲಿ ನಕ್ಸಲರು
ಪುಷ್ಪಗಿರಿ ತಪ್ಪಲಿನಲ್ಲಿ ಕಾಡಾನೆಗಳ ಉಪಟಳವೇ ಪ್ರಮುಖ ಸಮಸ್ಯೆ. ಕಾಡಂಚಿನ ತೋಟಗಳಿಗೆ ನುಗ್ಗಿ ತೆಂಗು, ಬಾಳೆ, ಅಡಿಕೆ ಫ‌ಸಲು ತಿಂದು / ನಾಶ ಮಾಡಿ ಹೋಗುತ್ತಿವೆ. ಹಗಲು – ರಾತ್ರಿಯೆನ್ನದೆ ಜನವಸತಿ ಪ್ರದೇಶಕ್ಕೂ ಕಾಲಿಡುತ್ತಿವೆ. ವಾಹನಗಳು ಸಂಚರಿಸುವ ರಸ್ತೆಗಳಲ್ಲೂ ಸಂಚರಿಸುತ್ತಿವೆ. ಈಗ ಅದೇ ಸ್ಥಳಗಳಲ್ಲಿ ನಕ್ಸಲರು ಕೂಡ ಆತಂಕ ಸೃಷ್ಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಎಕೆ-47 ಹೊಂದಿದ್ದ ಬಗ್ಗೆ ವದಂತಿ
ಐನಕಿದು ಗ್ರಾಮದ ಕೋಟೆ ತೋಟದಮೂಲೆಯ ಮನೆಗೆ ತೆರಳುತ್ತಿದ್ದ ನಕ್ಸಲರ ತಂಡವು ಹೊಳೆಯಲ್ಲಿ ಮೀನು ಹಿಡಿಯುತ್ತಿದ್ದವರನ್ನು ಕಂಡು ಮಾತನಾಡಿಸಿದೆ. ತಿನ್ನಲು ಏನಾದರೂ ಕೊಡಿ ಎಂದಿದ್ದಾರೆ. ಬಳಿಕ ಶೆಡ್‌ನ‌ಲ್ಲಿದ್ದ ಕಾರ್ಮಿಕರಲ್ಲಿ ತಮ್ಮನ್ನು ಬೆಂಬಲಿಸುವಂತೆ ಕೋರಿದ್ದಾರೆ. ಅವರ ಪೈಕಿ ಇಬ್ಬರಲ್ಲಿ ಎಕೆ-47 ಮಾದರಿಯ ಆಯುಧ ಇರುವುದನ್ನು ಮನೆಯವರು ಗಮನಿಸಿದ್ದಾರೆ ಎನ್ನಲಾಗಿದೆ. ಇತ್ತ ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್)ಯೂ ಚುರುಕುಗೊಂಡಿದೆ.

-ಬಾಲಕೃಷ್ಣ ಭೀಮಗುಳಿ / ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next