ಎಲ್ಲೆಡೆ ದೀಪಾವಳಿ ಸಡಗರ ಶುರುವಾಗಿದೆ. ಬೇರೆ ಬೇರೆ ಸ್ಥಳಗಳಿಂದ ಬೆಂಗಳೂರಿಗೆ ಬಂದು ನೆಲೆಸಿದವರೆಲ್ಲ, ಹಬ್ಬ ಆಚರಿಸಲು ಹುಟ್ಟೂರಿನತ್ತ ಮುಖ ಮಾಡಿದ್ದಾರೆ. ಆದರೆ, ಕಾರಣಾಂತರಗಳಿಂದ ಊರಿಗೆ ಹೋಗಲು ಆಗದಿರುವವರು ಬೇಸರಪಟ್ಟುಕೊಳ್ಳಬೇಕಿಲ್ಲ. ರಾಜಧಾನಿಯಲ್ಲಿಯೇ ಸಾಂಪ್ರದಾಯಕವಾಗಿ ಹಬ್ಬ ಆಚರಿಸಬಹುದು. ಬಾಲ್ಯದ ದಿನಗಳನ್ನು ನೆನಪಿಸುವ ದೀಪಾವಳಿ ಆಚರಣೆಗೆ ನಿಮ್ಮ ಜೊತೆಗೂಡಲಿದೆ ಬಂಟರ ಸಂಘ.
ಹಬ್ಬದ ಪ್ರಯುಕ್ತ ದೀಪಾವಳಿ ಸಂಭ್ರಮವನ್ನು ಹಮ್ಮಿಕೊಂಡಿರುವ ಬಂಟರ ಸಂಘ, ಆ ಮೂಲಕ ವಿವಿಧ ಸಾಂಸ್ಕೃತಿಕ, ಮನೋರಂಜಕ ಸ್ಪರ್ಧೆಗಳನ್ನು ಆಯೋಜಿಸಿದೆ. ಹಾಸ್ಯ ಕಾರ್ಯಕ್ರಮ, ನಾಟಕ, ಯಕ್ಷಗಾನ ವೇಷ ಅಷ್ಟೇ ಅಲ್ಲ, ಹಬ್ಬದ ಪ್ರಮುಖ ಆಕರ್ಷಣೆಯಾದ ಭಕ್ಷ್ಯ-ಭೋಜ್ಯಗಳೂ ಇಲ್ಲಿ ಇರಲಿವೆ. ಮನೆಮಂದಿಯೊಂದಿಗೆ ಬಂದು ಹಬ್ಬ ಆಚರಿಸಿದರಾಯ್ತು.
ವೇಷ ಕಟ್ಟಿ: ಜೀವನದಲ್ಲಿ ಒಮ್ಮೆಯಾದರೂ ಯಕ್ಷಗಾನ ಪಾತ್ರ ಮಾಡಬೇಕು, ವೇದಿಕೆ ಮೇಲೆ ಬಣ್ಣ ಹಚ್ಚಿ ಕುಣಿಯಬೇಕು ಅಂತ ಆಸೆಪಟ್ಟವರು ನೀವಾಗಿದ್ದರೆ, ನಿಮಗೆ ಇಲ್ಲೊಂದು ಅವಕಾಶವಿದೆ. ಆಸೆಯ ವೇಷಕ್ಕೆ ಬಣ್ಣ ಹಚ್ಚಿಸಿಕೊಳ್ಳಬಹುದು. ಮಕ್ಕಳು, ಮಹಿಳೆಯರು, ಪುರುಷರೆಲ್ಲರಿಗೂ ಅವಕಾಶವಿದೆ. ಶ್ರೀದೇವಿ, ಮಹಿಷಾಸುರಮ ಕೇಸರಿ ತಟ್ಟಿ (ಬಣ್ಣದ ವೇಷ) ಹನುಮಂತ ಇತ್ಯಾದಿ ವಿಶೇಷ ಪಾತ್ರಗಳಿಗೆ ವಿಶೇಷ ದರ ನಿಗದಿಸಲಾಗಿದೆ. ವೇಷ ಧರಿಸುವವರು ಟ್ರ್ಯಾಕ್ ಪ್ಯಾಂಟ್ ಮತ್ತು ಟಿ-ಶರ್ಟ್ ತರಬೇಕು.
ಬಣ್ಣ ಹಚ್ಚಿಸಿಕೊಳ್ಳಲು: 1000 ರೂ.
ನೋಂದಣಿ ಮತ್ತು ವಿವರಗಳಿಗೆ: 9845376085, 9845605958