ಮಹಾನಗರ: ಕರಾವಳಿಯಲ್ಲಿ ಈ ಬಾರಿಯ ಬಿಸಿಲ ಝಳ ಎಲ್ಲರನ್ನೂ ಹೈರಾಣಾಗಿಸಿದೆ. ಬಿಸಿಲಿಗೆ ಒಂದು ಸುತ್ತು ಹೋದರೆ ಮೈಯಿಂದ ಬೆವರಿಳಿಸಿ ಬಿಡುತ್ತದೆ. ಇದರ ನಡುವೆ ಚುನಾವಣೆಯೂ ಬಂದಿರುವುದು ಅಭ್ಯರ್ಥಿಗಳು, ಕಾರ್ಯಕರ್ತರು ಪ್ರಚಾರದ ಅವಧಿಯನ್ನು ಬದಲಾಯಿಸುವಂತೆ ಮಾಡಿದೆ.
ಹಗಲು ಹೊತ್ತು ಬಿಸಿಲಿನ ಝಳ ಹೆಚ್ಚಿರುವುದರಿಂದ ಸದ್ಯ ಬೆಳಗ್ಗೆ-ಸಂಜೆ ಹೊತ್ತು ಮಾತ್ರ ಚುನಾವಣ ಮನೆ ಮನೆ ಪ್ರಚಾರ ಕಾರ್ಯ ನಡೆಯುತ್ತಿದೆ. ಮಧ್ಯಾಹ್ನ ಹೊತ್ತು ಕಾರ್ಯಕರ್ತರ ಸಭೆಗಳಿಗೆ ಮೀಸಲಿರಿಸಲಾಗಿದೆ. ಮುಂಜಾನೆಯಿಂದಲೇ ಆರಂಭವಾಗುವ ಮನೆ ಮನೆ ಭೇಟಿ 9-10 ಗಂಟೆಯ ವರೆಗೆ, ಬಳಿಕ ಸಂಜೆ ನಾಲ್ಕು ಗಂಟೆಯಿಂದ ಆರಂಭವಾಗಿ 6-7 ಗಂಟೆಯ ವರೆಗೆ ಸಾಗುತ್ತದೆ.
ರಾತ್ರಿ ವೇಳೆ ಅಭ್ಯರ್ಥಿಗಳು ದೇವಸ್ಥಾನದ ಜಾತ್ರೆ, ಉತ್ಸವಗಳಿಗೆ, ದೈವ ಸ್ಥಾನಗಳ ಕೋಲ-ನೇಮಗಳಿಗೆ ಭೇಟಿ ನೀಡಿ, ದೈವ- ದೇವರಿಂದ ಆಶೀರ್ವಾದ ಪಡೆಯುವ ಕೆಲಸವನ್ನೂ ಮಾಡುತ್ತಿದ್ದಾರೆ. ಸಭಾ ಕಾರ್ಯಕ್ರಮಗಳು ಸಂಜೆ ಅನಂತರ ಸದ್ಯ ಬಹಿರಂಗ ಪ್ರಚಾರ ಸಭೆಗಳು ಆರಂಭವಾಗಿಲ್ಲ. ನಾಮಪತ್ರ ಸಲ್ಲಿಕೆ ಯಾದ ಬಳಿಕ ಬಹಿರಂಗ ಪ್ರಚಾರವೂ ಅಲ್ಲಲ್ಲಿ ಆಯೋಜನೆಗೊಳ್ಳಲಿದೆ.
ಬಿಸಿಲು ಹೆಚ್ಚಿರುವುದರಿಂದ ಸಭೆಗಳನ್ನು ಸಂಜೆಯ ಅನಂತರವೇ ಆಯೋಜಿಸಲು ನಿರ್ಧರಿಸಲಾಗಿದೆ ಎನ್ನುತ್ತಾರೆ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು. ಹಗಲು ಹೊತ್ತಿನಲ್ಲಿ ನಡೆಸಿದರೆ ಸಾರ್ವಜನಿಕರು ಭಾಗವಹಿಸುವುದು ಕಷ್ಟವಾಗಲಿದೆ. ಆದ್ದರಿಂದ ಸಂಜೆ 5ರಿಂದ 7ರ ವರೆಗೆ ಆಯೋಜನೆಗೊಳ್ಳಲಿದೆ. ಈ ವೇಳೆಗೆ ವಾತಾವರಣ ತುಸು ತಂಪಾಗಿರುತ್ತದೆ ಎನ್ನುತ್ತಾರೆ ಅವರು.
ಚುನಾವಣೆಗೆ ದಿನಗಳು ಹತ್ತಿರ ಬರುತ್ತಿದ್ದಂತೆ ಬಿಸಿಲೂ ಕೂಡ ಲೆಕ್ಕಕ್ಕಿಲ್ಲ ಎನ್ನವಪರಿಸ್ಥಿತಿ ನಿರ್ಮಾಣವಾಗಬಹುದು. ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾರ್ಯಕರ್ತರಿಗೆ ದಿನಕ್ಕೆ 1,000-1,500 ರೂ. ವರೆಗೆ ದುಡ್ಡು, ಜತೆಗೆ ಊಟ-ತಿಂಡಿಯೂ ಸಿಗುವುದರಿಂದ ಕಾರ್ಯಕರ್ತರೂ, “ಬಿಸಿಲಾದ ರೇನು- ಮಳೆಯಾದರೇನು’ ಎಂದು ಹೇಳುತ್ತಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಭ್ಯರ್ಥಿಗಳಿಗೂ ಗೆಲ್ಲುವು ದೊಂದೇ ಗುರಿ ಎನ್ನುವಾಗ ಬಿಸಿಲು ಕೂಡ ನಾಟುವುದಿಲ್ಲ ಎನ್ನುತ್ತಾರೆ ಸಾರ್ವಜನಿಕರು.
ತಾಪಮಾನದ ಸ್ಥಿತಿ-ಗತಿ
ಕರಾವಳಿಯಲ್ಲಿ ಸದ್ಯ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗುತ್ತಿದೆ. ಕೆಲವು ದಿನಗಳ ಹಿಂದೆ ದೇಶದಲ್ಲೇ ಗರಿಷ್ಠ ತಾಪಮಾನ ಮಂಗಳೂರಿನಲ್ಲಿ ದಾಖಲಾಗಿತ್ತು. ಆ ದಿನಗಳಿಗೆ ಹೋಲಿಸಿದರೆ ಸದ್ಯ ಉಷ್ಣಾಂಶ ಸ್ವಲ್ಪ ಇಳಿಕೆಯಾಗಿದೆ. ಆದರೆ ಮಧ್ಯಾಹ್ನದ ಹೊತ್ತು ಕೆಂಡದಂತಹ ಮೈ ಸುಡುವ ಬಿಸಿಲಿದೆ.
ಬಿಸಿಲಿಗೆ ಮೈಯೊಡ್ಡುವುದೆಂದರೆ ಅದೊಂದು ದೊಡ್ಡ ಸಾಹಸವೇ ಸರಿ ಎನ್ನುವಂತಾಗಿದೆ. ಸದ್ಯ ಘಟ್ಟದ ತಪ್ಪಲಿನ ಭಾಗದಲ್ಲಿ ಅಲ್ಲಲ್ಲಿ ಮಧ್ಯಾಹ್ನ ಬಳಿ, ಸಂಜೆ ಮಳೆಯಾಗುತ್ತಿರುವುದು ಪ್ರಚಾರ ಕಾರ್ಯಕ್ಕೂ ಅಡ್ಡಿಯಾಗುವ ಸಾಧ್ಯತೆಯೂ ಇದೆ.
ಚುನಾವಣ ಪ್ರಚಾರಕ್ಕೆ ಸಂಬಂಧಿಸಿ ರಾಜಕೀಯ ಪಕ್ಷಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವಾಗಲೂ ಚುನಾವಣಾಧಿಕಾರಿಯಿಂದ ಅನುಮತಿ ಪಡೆಯಬೇಕು. ಬೆಳಗ್ಗೆ 6ರಿಂದ ರಾತ್ರಿ 10ಗಂಟೆಯ ವರೆಗೆ ಮಾತ್ರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.
-ಮಹೇಶ್ ಚಂದ್ರ,
ಚುನಾವಣಾಧಿಕಾರಿ ಮೂಡುಬಿದಿರೆ ಕ್ಷೇತ್ರ