Advertisement
ಒಖಿ ಚಂಡಮಾರುತದ ಪ್ರಭಾವ ದಿಂದ ಕೇರಳದ ಕಾಂಞಂಗಾಡ್‌ನಿಂದ ತೊಡಗಿ ಕುಂದಾಪುರದ ಗಂಗೊಳ್ಳಿ ವರೆಗೆ ದೊಡ್ಡ ಅಲೆಗಳು ಬಂದಿದ್ದು ಕಡಲ್ಕೊರೆತ ತೀವ್ರವಾಗಿತ್ತು. ಇದ ರೊಂದಿಗೆ ಮೀನುಗಾರಿಕೆ ದೋಣಿ ಗಳಿಗೂ ಸಮಸ್ಯೆ ಯಾಗಿದ್ದು, ಮುನ್ನೆಚ್ಚರಿಕೆ ಯಿಂದಾಗಿ ಸಮುದ್ರಕ್ಕಿಳಿದಿರಲಿಲ್ಲ. ರವಿವಾರ ಕಡಲು ಸಾಮಾನ್ಯವಾಗಿದ್ದು, ವಿಶೇಷವಾದ ಅಲೆಗಳು ಕಂಡುಬಂದಿಲ್ಲ. ಕರಾವಳಿಯಾದ್ಯಂತ ಬಹುತೇಕ ಶಾಂತವಾಗಿತ್ತು.
ಶನಿವಾರ ಅಲೆಗಳಬ್ಬರಕ್ಕೆ ಉಳ್ಳಾಲದಲ್ಲಿ ಎರಡು ಮನೆಗಳು ಸಂಪೂರ್ಣ ನಾಶವಾಗಿದ್ದರೆ, ಒಂದು ಮನೆಗೆ ಭಾಗಶಃ ಹಾನಿ ಯಾಗಿದೆ. ಉಳ್ಳಾಲ ಸೀಗ್ರೌಂಡ್ ನಿವಾಸಿಗಳಾದ ಎವರೆಸ್ಟ್ ಆಲ್ಫೋನ್ಸ್ ಮತ್ತು ಫಿಲೋಮಿನಾ ಫೆರ್ನಾಂಡಿಸ್ ಅವರ ಮನೆ ಸಮುದ್ರ ಪಾಲಾದರೆ, ನೆವಿಲ್ ಅವರ ಮನೆಗೆ ಭಾಗಶಃ ಹಾನಿಯಾಗಿದೆ. ತೊಕ್ಕೊಟ್ಟು ಪೆರ್ಮನ್ನೂರು ಚರ್ಚ್‌ನಲ್ಲಿ ಶತಮಾನೋತ್ಸವ ಕಾರ್ಯಕ್ರಮಕ್ಕೆ ಎವರೆಸ್ಟ್ ಆಲ್ಫೋನ್ಸ್ ದಂಪತಿ ಮತ್ತು ಫಿಲೋಮಿನಾ ಅವರ ಕುಟುಂಬ ಚರ್ಚ್‌ಗೆ ತೆರಳಿದ್ದರು. ಕಾರ್ಯ ಕ್ರಮ ಮುಗಿಸಿ ವಾಪಸ್ಸಾಗಿದ್ದ ವೇಳೆ ಸಮುದ್ರದ ಅಲೆಗಳಿಗೆ ಮನೆ ಭಾಗಶಃ ಕುಸಿದಿರುವುದು ಕಂಡು ಬಂತು. ರಾತ್ರಿ 1.30 ಗಂಟೆಯ ಸುಮಾರಿಗೆ ಸಂಪೂರ್ಣ ಮನೆಯೇ ಸಮುದ್ರ ಪಾಲಾಗಿದೆ. ಹಿಂದೆ ಇವರ ಮನೆಗಳಿಗೆ ಕಡಲ್ಕೊರೆತದಿಂದ ಅಲ್ಪ ಹಾನಿಯಾಗಿತ್ತು.
Related Articles
ಕುಂದಾಪುರದ ಗಂಗೊಳ್ಳಿ ಹಾಗೂ ಕಿರಿ ಮಂಜೇಶ್ವರದ ಹೊಸಹಿತ್ಲುವಿನಲ್ಲಿ ತೀರದಲ್ಲಿ ನಿಲ್ಲಿಸಿದ್ದ 25ಕ್ಕೂ ಹೆಚ್ಚು ದೋಣಿಗಳಿಗೆ ಶನಿವಾರ ಹಾನಿ ಯಾಗಿವೆ. ಎಂದಿ ನಂತೆ ದೋಣಿ ನಿಲ್ಲಿಸಿ ಮೀನು ಗಾರರು ತೆರಳಿದ್ದು, ಅಲೆಗಳ ಹೊಡೆತಕ್ಕೆ ಏಕಾಏಕಿ ತೇಲಲಾರಂಭಿಸಿದ್ದವು. ತತ್‌ಕ್ಷಣ ಸುಮಾರು 60 ಮಂದಿ ಸ್ಥಳೀಯರು ಒಟ್ಟುಗೂಡಿ ಕಡಲ ಪಾಲಾಗು ತ್ತಿದ್ದ ದೋಣಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
Advertisement
ಇನ್ನು, ದಡದಲ್ಲಿ ನಿಲ್ಲಿಸಿದ್ದ ಧರ್ಮ ದೀಪ ಡಿಸ್ಕೊ ಫಂಡ್ ದೋಣಿಯ 10 ತರಾಪ್ (ದೋಣಿಯ ಅಡಿಯಲ್ಲಿ ಇಡುವ ಮರದ ವಸ್ತು) ಹಾಗೂ ಬಲೆಯು ಸಮುದ್ರದ ಅಲೆಗೆ ಕೊಚ್ಚಿ ಕೊಂಡು ಹೋಗಿದೆ. ಶಾರವರಿ ಡಿಸ್ಕೊ ಫಂಡ್ ದೋಣಿಯ 15 ತರಾಪ್ ಹಾಗೂ ಬಲೆಗಳು ಕಡಲ ಪಾಲಾಗಿವೆ. ಸುಮಾರು 5 ಲಕ್ಷ ರೂ. ನಷ್ಟ ಸಂಭವಿಸಿದೆ. ಮಂಜುನಾಥ ಕುಂದರ್ ಅವರ ದೋಣಿ ಅದರ ಇಂಜಿನ್‌ಗೆ ಹಾನಿಯಾಗಿದ್ದು, ಸುಮಾರು 40ರಿಂದ 50 ಸಾವಿರ ನಷ್ಟ ಉಂಟಾಗಿದೆ.
ಕೋಸ್ಟ್‌ಗಾರ್ಡ್ ನೆರವು ಮಂಗಳೂರಿನ ಪಣಂಬೂರಿನಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿದ ಹಲವು ಮೀನುಗಾರಿಕಾ ದೋಣಿಗಳಿಗೆ ಕೋಸ್ಟ್ ಗಾರ್ಡ್‌ನ ಅಮರ್ತ್ಯ ಕಣ್ಗಾವಲು ಹಡಗು ನೆರವು ನೀಡಿದೆ. ತತ್ವಮಸಿ ಹೆಸರಿನ ಮೀನುಗಾರಿಕಾ ದೋಣಿಯ ಗೇರ್‌ಬಾಕ್ಸ್ ಸಮುದ್ರದ ಅಬ್ಬರಕ್ಕೆ ಕೆಟ್ಟು ನಿಂತ ಪರಿಣಾಮ ಬಂಡೆ ಕಲ್ಲುಗಳ ಕಡೆಗೆ ಸೆಳೆಯಲ್ಪಟ್ಟಿತ್ತು. ತುರ್ತು ಕೋರಿಕೆ ಮೇರೆಗೆ ಅದನ್ನು ಕೋಸ್ಟ್ ಗಾರ್ಡ್ ಪಾರುಮಾಡಿದೆ. ಜತೆಗೆ ಲಕ್ಷ ದ್ವೀಪದ ಸುಹೇಲಿಪರ್ ದ್ವೀಪದಲ್ಲಿ ಶುಕ್ರವಾರ ರಾತ್ರಿ ದಡ ಸೇರಿದ್ದ ಸೆ„ಂಟ್ ಆಂಟನಿ ದೋಣಿಯ ಮೀನುಗಾರರಿಗೆ ಆಹಾರ, ಬಟ್ಟೆಬರೆ ವಿತರಿಸಲಾಗಿದೆ. ತುರ್ತು ಸಂದರ್ಭದ ಹಿನ್ನೆಲೆಯಲ್ಲಿ ನವಮಂಗಳೂರು ಬಂದರು ಮೂಲಕ ಅಲ್ ನಫೀಸ ಮತ್ತು ಮೀಸಾ ಐ ಮೀನು ಗಾರಿಕಾ ದೋಣಿಗಳಿಗೆ ನಿಲುಗಡೆಗೆ ಅವಕಾಶ ನೀಡಲಾಗಿದೆ. ಮಲ್ಪೆಯಲ್ಲೇ ಉಳಿದ ದೋಣಿಗಳು ಚಂಡಮಾರುತ ಹಿನ್ನೆಲೆಯಲ್ಲಿ ರವಿ ವಾರವೂ ಮಲ್ಪೆ ಮೀನುಗಾರಿಕಾ ಬಂದರಿ ನಲ್ಲಿ ಬೋಟ್‌ಗಳು ಮೀನು ಗಾರಿಕೆಗೆ ತೆರಳಲಿಲ್ಲ. ಶೇ. 70ರಷ್ಟು ಆಳಸಮುದ್ರ ಬೋಟ್ ಗಳು ದಡ ಸೇರಿವೆ. ಮಲ್ಪೆ ಕಡಲ ತೀರದಲ್ಲಿ ಯಾರೂ ಸಮುದ್ರ ಕ್ಕಿಳಿಯದಂತೆ ಮೈಕ್ ಮೂಲಕ ಎಚ್ಚರಿಕೆ ಸಂದೇಶವನ್ನು ರವಿವಾರವೂ ನೀಡಲಾಗಿದೆ. ಪರಿಹಾರ ಚೆಕ್ ವಿತರಣೆ
ಕಡಲುಬ್ಬರಕ್ಕೆ ಮನೆ ಕಳೆದುಕೊಂಡ ಎವರೆಸ್ಟ್ ಅಲ್ಫೋನ್ಸೋ ಮತ್ತು ಫಿಲೋ ಮಿನಾ ಫೆರ್ನಾಂಡಿಸ್ ಅವ ರಿಗೆ ಜಿಲ್ಲಾಡ ಳಿತದ ಪ್ರಕೃತಿ ವಿಕೋಪ ನಿಧಿಯಿಂದ ತಲಾ 1 ಲಕ್ಷ ರೂ. ಗಳ ಚೆಕ್ ಅನ್ನು ಸಚಿವ ಯು.ಟಿ. ಖಾದರ್ ವಿತರಿಸಿದರು. ಅಲ್ಲದೆ ಭಾಗಶಃ ಹಾನಿ ಗೀಡಾದ 8 ಮನೆ ಗಳಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮನೆ ಕಳೆದುಕೊಂಡವರಿಗೆ ಅಂಬ್ಲಿಮೊಗರು ಅಥವಾ ಬೇರೆ ಕಡೆಗಳಲ್ಲಿ ಕೂಡಲೇ ಪರ್ಯಾಯ ನಿವೇಶನ ನೀಡಬೇಕೆಂದು ತಿಳಿಸಿದ ಅವರು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಸರಕಾರದಿಂದ ನೆರವು ಒದಗಿಸಲಾಗುವುದು ಎಂದರು. ಪ್ರಸಕ್ತ ತಲಪಾಡಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಅಲ್ಲಿ 30 ಕುಟುಂಬಗಳು ತಾತ್ಕಾಲಿಕವಾಗಿ ಆಶ್ರಯ ಪಡೆದುಕೊಂಡಿವೆ. ಕಡಲು ಉಕ್ಕೇರಿದ ಉಳ್ಳಾಲ, ಕೈಕೋ, ಕಿಲೆರಿಯ ನಗರ, ಸೋಮೇಶ್ವರ, ಉಚ್ಚಿಲಗಳಲ್ಲಿ 35ರಿಂದ 40 ಮನೆಗಳನ್ನು ಸ್ಥಳಾಂತರ ಮಾಡು ವಂತೆ ಅಧಿಕಾರಿಗಳಿಗೆ ಸೂಚಿಸ ಲಾಗಿದೆ. ಸ್ಥಳೀಯ ಶಾಲೆ, ಪ್ರಾರ್ಥನಾ ಸ್ಥಳಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಖಾದರ್ ಹೇಳಿದರು. ಸಭೆಯಲ್ಲಿ ದ.ಕ ಅಪರ ಜಿಲ್ಲಾಧಿಕಾರಿ ಕುಮಾರ್, ಅಗ್ನಿಶಾಮಕ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ತುರ್ತು ಕಾರ್ಯಾಚರಣೆಗೆ 4 ಹೆಲಿಕಾಪ್ಟರ್ ಸನ್ನದ್ಧ
ಒಖೀ ಚಂಡಮಾರುತ ಪ್ರಭಾವ ಇರುವ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ತೀರದಲ್ಲಿ ಡಿ. 4ರ ಮಧ್ಯರಾತ್ರಿವರೆಗೆ ಹೈಅಲರ್ಟ್ ಘೋಷಿಸ ಲಾಗಿದೆ. ಜತೆಗೆ ಕೋಸ್ಟ್‌ಗಾರ್ಡ್ ವತಿಯಿಂದ 4 ಹೆಲಿಕಾಪ್ಟರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಉಳ್ಳಾಲದ ಸೋಮೇಶ್ವರ ಪ್ರದೇಶದಲ್ಲಿ ಕಡಲು ಉಕ್ಕೇರಿ ಆಸ್ತಿಪಾಸ್ತಿ ಹಾನಿಯಾದ ಹಿನ್ನೆಲೆಯಲ್ಲಿ ಆಹಾರ ಖಾತೆ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ರವಿವಾರ ಜಿಲ್ಲಾ ಧಿಕಾರಿ ಕಚೇರಿಯಲ್ಲಿ ತುರ್ತು ಸಭೆ ನಡೆದು ತುರ್ತು ಕ್ರಮಗಳು, ಪರಿಹಾರ ಕಾಮಗಾರಿ ಬಗ್ಗೆ ಚರ್ಚಿಸಲಾಯಿತು. ಉಳ್ಳಾಲದಲ್ಲಿ ಜಿಲ್ಲಾಡಳಿತ ತಾತ್ಕಾಲಿಕ ಗಂಜಿ ಕೇಂದ್ರ ತೆರೆದಿದೆ. ಮಂಗಳೂರು ಕ್ಷೇತ್ರದ ಶಾಸಕರೂ ಆದ ಆಹಾರ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ಮತ್ತಿತರ ಮುಖಂಡರು ಭೇಟಿ ನೀಡಿ ಪರಿಶೀಲಿಸಿದರು. ಬಂದರುಗಳಲ್ಲಿ ನಂಬರ್ ಟು ಸಿಗ್ನಲ್
ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಮುಂದಿನ 24 ಗಂಟೆಗಳಲ್ಲಿ ಗಂಟೆಗೆ 45- 55 ಕಿ.ಮೀ. ವೇಗದಲ್ಲಿ ದಕ್ಷಿಣದ ಕಡೆಯಿಂದ ಆಗ್ನೇಯ ದಿಕ್ಕಿಗೆ ಗಾಳಿ ಬೀಸುವ ಸಾಧ್ಯತೆ ಇದ್ದು, ರಾಜ್ಯದ ಎಲ್ಲ ಬಂದರುಗಳಲ್ಲಿ ನಂಬರ್ ಟು ಸಿಗ್ನಲ್ ಹಾಕುವಂತೆ ಹವಾಮಾನ ಇಲಾಖೆಯು ಸೂಚನೆ ನೀಡಿದೆ. ನಂಬರ್ ಟು ಸಿಗ್ನಲ್ ಅಂದರೆ ಸಮುದ್ರಕ್ಕೆ ಇಳಿಯುವುದು ಅಪಾಯಕಾರಿ ಎಂದರ್ಥ. ಹಾಗಾಗಿ ಮೀನುಗಾರರು ಮೀನುಗಾರಿಕೆ ನಡೆಸಬಾರದು ಎಂಬರ್ಥದಲ್ಲಿ ಈ ಸಿಗ್ನಲ್ ಹಾಕಲಾಗುತ್ತಿದೆ. ಹಿಂದಿನ ಕಾಲದಲ್ಲಿ ಇಂತಹ ಸಿಗ್ನಲ್ ಹಾಕುವಾಗ ನಿರ್ದಿಷ್ಟ ಬಣ್ಣದ ಧ್ವಜ (ನಿಶಾನೆ) ಹಾಕಲಾಗುತ್ತಿತ್ತು. ಈಗ ಕೇವಲ ಮೈಕ್‌ನಲ್ಲಿ ಉದ್ಘೋಷಣೆ ಮಾಡಲಾಗುತ್ತದೆ ಹಾಗೂ ಸಂಬಂಧ ಪಟ್ಟ ಮೀನುಗಾರರ ಸಂಘಗಳ ಕಚೇರಿಯ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟನೆಯನ್ನು ಅಂಟಿಸಲಾಗುತ್ತದೆ ಎಂದು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ತಲೆಯೇ ಕೆಡಿಸಿರಲಿಲ್ಲ…
ಚಂಡಮಾರುತದ ಮುನ್ಸೂಚನೆ ಇದ್ದರೂ, ಉಳ್ಳಾಲ ಕಡಲ ತೀರದಲ್ಲಿ ಅಷ್ಟಾಗಿ ಯಾರೂ ತಲೆಕೆಡಿಸಿರಲಿಲ್ಲ. ಶನಿವಾರ ಹಗಲಲ್ಲಿ ಸಮುದ್ರ ಸ್ವಲ್ಪ ಬಿರುಸಾಗಿದ್ದು , ಇದು ಹುಣ್ಣಿಮೆಯ ದಿನದಂತೆ ಬಿರುಸಿದೆ ಎಂದು ಮೀನುಗಾರರು ನಂಬಿದ್ದರು. ಆದರೆ ರಾತ್ರಿ ಏಳು ಗಂಟೆಯಾಗುತ್ತಿದ್ದಂತೆ ಸಮುದ್ರದ ಅಲೆಗಳು ಉಕ್ಕೇರತೊಡಗಿದಾಗ ಸಮುದ್ರದಲ್ಲಿ ಏನೋ ಸಂಭವಿಸುತ್ತಿದೆ ಎಂಬ ಮುನ್ಸೂಚನೆ ಸಿಕ್ಕಿದ್ದು, ಜನರು ಭಯದಿಂದ ಮನೆಯಿಂದ ಹೊರಗೆ ಬಂದಿದ್ದಾರೆ. ನೀರಿನಿಂದ ಆವರಿಸಿದ ಫಿಶ್‌ಮಿಲ್‌ಗಳು
ಉಳ್ಳಾಲ ಕೋಟೆಪುರದಲ್ಲಿರುವ ಫಿಶ್‌ಮಿಲ್‌ಗಳು ಒಂದು ಕಡೆ ನೇತ್ರಾವತಿ ನದಿ ಮತ್ತು ಇನ್ನೊಂದು ಕಡೆ ಸಮುದ್ರ ನೀರಿನಿಂದಾವೃತ ವಾಗಿವೆ. ಶನಿವಾರ ಅಲೆಗಳಬ್ಬರ ಪರಿಣಾಮ ಸಮುದ್ರದ ನೀರು ಫಿಶ್‌ಮಿಲ್‌ನೊಳಗೆ ಹರಿದು, ನದಿಯತ್ತ ಹರಿದಿದೆ. ಈ ಸಂದರ್ಭದಲ್ಲಿ ಭಯಭೀತರಾದ ಅನ್ಯ ರಾಜ್ಯ ಗಳ ಕಾರ್ಮಿಕರು ತಮ್ಮ ಸರಂಜಾಮು ಹಿಡಿದು ಓಡಿದ್ದಾರೆ. ಬಳಿಕ ಫಿಶ್ ಮಿಲ್ ಗಳ ಮಾಲಕರು ಕಾರ್ಮಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ರಾತ್ರಿಯಿಡೀ ಜಾಗರಣೆ
ಉಚ್ಚಿಲದಿಂದ ಉಳ್ಳಾಲದವರೆಗೆ ಸುಮಾರು 300ಕ್ಕೂ ಹೆಚ್ಚು ಮನೆಗಳಿದ್ದು ಹೆಚ್ಚಿನ ಮನೆಯ ಜನರು ರಾತ್ರಿಯಿಡೀ ಭಯದಿಂದ ಜಾಗರಣೆ ಮಾಡಿದ್ದಾರೆ. ಸುಮಾರು ಮೂರು ಗಂಟೆಯವರೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡುವ ಕಾರ್ಯ ನಡೆದರೆ, ಈ ಸಂದರ್ಭದಲ್ಲಿ ವಾಟ್ಸಪ್, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ತಿಳಿಯುತ್ತಿದ್ದಂತೆ ಜನರು ಆಗಮಿಸಿದ್ದು ಕೆಲವೆಡೆ ಬೆಳಗ್ಗಿನವರೆಗೆ ಜನರು ಸಮುದ್ರದ ತಟದಲ್ಲಿ ಕುತೂಹಲದಿಂದ ಸಮುದ್ರವನ್ನು ನೋಡುತ್ತಿದ್ದರು. ಸಂಸದ ನಳಿನ್ ಭೇಟಿ
ಸಂಸದ ನಳಿನ್ ಕುಮಾರ್ ಕಟೀಲು ಶನಿವಾರ ತಡರಾತ್ರಿ ಸುಮಾರು 2.20ರ ಗಂಟೆಗೆ ಉಚ್ಚಿಲ ಮತ್ತು ಉಳ್ಳಾಲ ಪ್ರದೇಶಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸಚಿವ ಖಾದರ್ ಪ್ರವಾಸ ಮೊಟಕು
ಸಚಿವ ಯು.ಟಿ. ಖಾದರ್ ದುಬಾೖ ಪ್ರವಾಸದಲ್ಲಿದ್ದು ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಪ್ರವಾಸ ಮೊಟಕುಗೊಳಿಸಿ ರವಿವಾರ ಉಳ್ಳಾಲಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ತಹ ಶೀಲ್ದಾರ್, ಕಂದಾಯ ಅಧಿಕಾರಿಗಳು, ಬಂದರು ಇಲಾಖೆಯ ಅಧಿಕಾರಿ ಗಳು ಉಪಸ್ಥಿತರಿದ್ದರು. ಈ ಸಂದರ್ಭ ಮಾತನಾಡಿದ ಅವರು, ತಲಪಾಡಿ, ಉಳ್ಳಾಲ, ಸೋಮೇಶ್ವರ, ಉಚ್ಚಿಲ ಸೇರಿದಂತೆ ಸುಮಾರು ಅಪಾಯ ದಲ್ಲಿರುವ ಕುಟುಂಬಗಳನ್ನು ಸ್ಥಳಾಂತರಿಸಿ ಅವರಿಗೆ ಬೇಕಾದ ವ್ಯವಸ್ಥೆ ಮಾಡಲಾಗಿದೆ. ಉಳಿದುಕೊಂಡವರಿಗೆ ಸ್ಥಳಾಂತರಕ್ಕೆ ಸೂಚಿಸಲಾಗಿದೆ. ಕಡಲ ತೀರದ ಮಂದಿ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ ಎಂದರು. ಕಡಲತೀರದ ದೋಣಿಗಳ ಶಿಫ್ಟ್
ಮಲ್ಪೆ ಕಡಲತೀರದಲ್ಲಿ ಇರಿಸಲಾಗಿದ್ದ ದೋಣಿಗಳನ್ನು ಅಲ್ಲಿಂದ ತೆರವುಗೊಳಿಸ ಲಾಗಿದೆ. ಸುಮಾರು 50ಕ್ಕೂ ಅಧಿಕ ದೋಣಿಗಳು ಸಮುದ್ರತೀರದಲ್ಲಿದ್ದು ಎಲ್ಲವನ್ನು ಜೆಸಿಬಿಯಲ್ಲಿ ತೆರವುಗೊಳಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸೈಂಟ್ ಮೇರೀಸ್ ಬೋಟ್ ಯಾನ ರದ್ದು
ಚಂಡಮಾರುತದ ಹಿನ್ನೆಲೆಯಲ್ಲಿ ಮಲ್ಪೆ ಸೈಂಟ್‌ಮೆರೀಸ್ ದ್ವೀಪ ವಿಹಾರದ ಬೋಟ್ ಸಂಚಾರವನ್ನು ರದ್ದುಮಾಡಲಾಗಿದೆ. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಮುಂಜಾಗ್ರತ ಕ್ರಮವಾಗಿ ಈ ಆದೇಶವನ್ನು ಹೊರಡಿಸಿದ್ದಾರೆ. ರವಿವಾರ ರಜಾ ದಿನವಾದ್ದರಿಂದ ದೂರದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದು ಬೋಟ್ ಇಲ್ಲದ್ದನ್ನು ಕಂಡು ವಾಪಸಾಗಿದ್ದಾರೆ. ಚಂಡಮಾರುತದ ಪ್ರಭಾವ ಕಡಿಮೆಯಾಗುವವರೆಗೆ ಬೋಟ್ ಸಂಚಾರ ಇರುವುದಿಲ್ಲ ಎಂದು ರಾಜರಾಜೇಶ್ವರಿ ಟೂರಿಸ್ಟ್ ಬೋಟ್ ಮಾಲಕರಾದ ಗಣೇಶ್ ಅಮೀನ್ ಮಲ್ಪೆ ತಿಳಿಸಿದ್ದಾರೆ. ಉಳ್ಳಾಲ: ರವಿವಾರ ರಾತ್ರಿಯೂ ನಿಗಾ
ಒಖೀ ಚಂಡಮಾರುತದಿಂದಾಗಿ ಹಿಂದೆಂದೂ ಕೇಳರಿಯದ ರೀತಿ ಶನಿ ವಾರ ರಾತ್ರಿ ಕಡಲು ಅಬ್ಬರಿಸಿದ್ದರಿಂದ ರವಿವಾರ ರಾತ್ರಿಯೂ ಕಡಲ ಕಿನಾರೆ ಯಲ್ಲಿ ನಿಗಾ ವಹಿಸಲಾಯಿತು. ಸ್ಥಳೀಯರು ತಡರಾತ್ರಿಯವರೆಗೂ ಸಮುದ್ರ ಬದಿ ಯಲ್ಲಿದ್ದು ಅಲೆಗಳ ಏರಿಳಿತದ ಮೇಲೆ ಗಮನ ಇರಿಸಿದ್ದರು. ಉಳ್ಳಾಲ ನಗರ ಸಭೆ ಪೌರಾಯುಕ್ತೆ ವಾಣಿ ಆಳ್ವ, ನಗರಸಭೆ ಅಧ್ಯಕ್ಷ ಹುಸೇನ್ ಕುಂಞಿ ಮೋನು ಸ್ಥಳದಲ್ಲಿದ್ದು, ಸಲಹೆ, ಸೂಚನೆ ನೀಡಿದರು.