ಗಾಂಧಿನಗರಕ್ಕೆ ಬರುವ ಬಹುತೇಕ ಹೊಸಬರು ಕನಸು ಕಟ್ಟಿಕೊಂಡೇ ಎಂಟ್ರಿಯಾಗುತ್ತಾರೆ. ಆ ಸಾಲಿಗೆ ಇಲ್ಲೊಂದು ಹೊಸಬರ ತಂಡ ಕೂಡ ತಮ್ಮ “ಕನಸು’ಗಳನ್ನು ಮಾರಲು ಬಂದಿದೆ. ಹೌದು, ಕರಾವಳಿಯ ಪ್ರತಿಭಾವಂತರು “ಕನಸು ಮಾರಾಟಕ್ಕಿದೆ’ ಎಂಬ ಹೆಸರಿನ ಚಿತ್ರ ಮಾಡಿ ಮುಗಿಸಿದ್ದಾರೆ. ಈಗ ಚಿತ್ರ ಸೆನ್ಸಾರ್‌ಗೆ ಹೋಗಲು ಸಜ್ಜಾಗಿದ್ದು, ಇನ್ನೇನು ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್ ಅಂತ್ಯದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.
ಈ ಚಿತ್ರವನ್ನು ಸ್ಮಿತೇಶ್ ಎಸ್.ಬಾರ್ಯ ನಿರ್ದೇಶಿಸಿದ್ದಾರೆ. ನವೀನ್ ಪೂಜಾರಿ ಕಥೆ ಬರೆದರೆ, ಅನೀಶ್ ಪೂಜಾರಿ ವೇಣೂರು ಸಂಭಾಷಣೆ ಬರೆದು ಸಹ ನಿರ್ದೇಶನವನ್ನೂ ಮಾಡಿದ್ದಾರೆ. ಇದು ಇವರ ಮೊದಲ ಸಿನಿಮಾ. ಚಿತ್ರಕ್ಕೆ ಪ್ರಜ್ಞೆಶ್ ಶೆಟ್ಟಿ ನಾಯಕರಾಗಿ ಕಾಣಿಸಿಕೊಂಡರೆ, ಸ್ವಸ್ತಿಕಾ ಪೂಜಾರಿ ಹಾಗು ನವ್ಯಾ ಪೂಜಾರಿ ನಾಯಕಿಯರಾಗಿ ನಟಿಸಿದ್ದಾರೆ. ಇವರಿಗೂ ಈ ಚಿತ್ರ ಮೊದಲ ಅನುಭವ.
ತಮ್ಮ ಚೊಚ್ಚಲ ಚಿತ್ರದ ಕುರಿತು ಹೇಳುವ ನಿರ್ದೇಶಕ ಸ್ಮಿತೇಶ್ ಎಸ್. ಬಾರ್ಯ ಅವರು, “ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ಸ್ಫೂರ್ತಿದಾಯಕವಾದಂತಹ ಕಥೆ ಇಲ್ಲಿದೆ. ಯುವಕರನ್ನೇ ಟಾರ್ಗೆಟ್ ಮಾಡಿ ಮಾಡಿರುವ ಸಿನಿಮಾ ಇದು. ಮನರಂಜನೆ ಜೊತೆಯಲ್ಲಿ ಒಂದಷ್ಟು ಸಂದೇಶವೂ ಇಲ್ಲಿದೆ. ಇಲ್ಲಿ ಯಾವ ಕನಸಿದೆ. ಅದನ್ನೇಕೆ ಮಾರಲು ಹೊರಟಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಸಿನಿಮಾದಲ್ಲಿ ಉತ್ತರ ಸಿಗಲಿದೆ.
ಬಹುತೇಕ ಕರಾವಳಿ ಭಾಗದ ಹುಡುಗರು ಸೇರಿ ಮಾಡಿರುವ ಮೊದಲ ಪ್ರಯತ್ನವಿದು. ದಕ್ಷಿಣ ಕನ್ನಡ, ಹಾಸನ, ಬೆಂಗಳೂರು ಹಾಗು ಉಡುಪಿ ಸುತ್ತಮುತ್ತಲ ಭಾಗದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಮಾನಸ ಹೊಳ್ಳ ಅವರು ಸಂಗೀತ ನೀಡಿದ್ದು, ವಿಜಯ ಪ್ರಕಾಶ್, ವಾಣಿ ಹರಿಕೃಷ್ಣ ಹಾಡಿದ್ದಾರೆ. ಕವಿರಾಜ್, ನಾಗೇಂದ್ರ ಪ್ರಸಾದ್, “ಬಹದ್ದೂರ್’ ಚೇತನ್‌ಕುಮಾರ್ ಸಾಹಿತ್ಯವಿದೆ.
ಸಂತೋಷ್ ಆಚಾರ್ಯ ಛಾಯಾಗ್ರಹಣವಿದೆ. ಗಣೇಶ್ ಸಂಕಲನ ಮಾಡಿದ್ದಾರೆ. ಚಿತ್ರವನ್ನು ಶಿವಕುಮಾರ್ ನಿರ್ಮಾಣ ಮಾಡಿದ್ದಾರೆ. ಶರತ್‌ಕುಮಾರ್, ಪ್ರಶಾಂತ್, ಚೆಲುವರಾಜ್ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಇಷ್ಟರಲ್ಲೇ ಚಿತ್ರದ ಆಡಿಯೋ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದ್ದು, ಏಪ್ರಿಲ್ ಅಂತ್ಯದಲ್ಲಿ ಪ್ರೇಕ್ಷಕರ ಮುಂದೆ ಬರುವ ಯೋಚನೆ ಇದೆ’ ಎನ್ನುತ್ತಾರೆ ನಿರ್ದೇಶಕ ಸ್ಮಿತೇಶ್ ಎಸ್.ಬಾರ್ಯ.