Advertisement

ಕರಾವಳಿ ಪಕ್ಷಿಗಳು ಬೇರೆಡೆಗೆ ವಲಸೆ

09:44 PM Apr 11, 2019 | mahesh |

ಬೆಳ್ತಂಗಡಿ: ತಾಪಮಾನ ಬಿಗಡಾಯಿಸುವುದರ ನಡುವೆಯೇ ಕಲುಷಿತ ನದಿ ನೀರಿನಿಂದಾಗಿ ವಲಸೆ ಪಕ್ಷಿಗಳು ಕರಾವಳಿಯತ್ತ ವಿಮುಖವಾಗುತ್ತಿದ್ದರೆ, ಮತ್ತೂಂದೆಡೆ ಕರಾವಳಿ ತೀರದ ಪಕ್ಷಿಗಳೇ ವಲಸೆ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆ.

Advertisement

ಪಕ್ಷಿ ತಜ್ಞರ ಅಭಿಪ್ರಾಯದಂತೆ ಯುರೋಪ್‌, ಉತ್ತರ ಅಮೇರಿಕ, ದಕ್ಷಿಣ ಏಷ್ಯಾದಿಂದ ಕರಾವಳಿ ತೀರಕ್ಕೆ ಬರುವ ಅಮುರ್‌ ಫಾಲ್ಕನ್‌, ಕೆಂಟಿಶ್‌, ಗ್ರೇಟ್‌ ನಾಟ್‌, ಬಾರ್‌ ಟೇಲ್ಡ್‌ ಗಾಡ್ವಿಟ್‌, ಆಯಿಸ್ಟ್‌ರ್‌ ಕ್ಯಾìಚರ್‌ ವಲಸೆ ಪಕ್ಷಿಗಳು ಈ ಬಾರಿ ಜನವರಿ-ಫೆಬ್ರವರಿಗಾಗಲೇ ಮತ್ತೆ ತನ್ನ ಗೂಡು ಸೇರಿಕೊಂಡಿವೆಯಂತೆ. ಈ ವರ್ಷ ಅತೀವ ತಾಪಮಾನ ಒಂದೆಡೆಯಾದರೆ, ನದಿ ನೀರಿನ ಮಟ್ಟ ಸಂಪೂರ್ಣ ಬತ್ತಿ ಹೋಗಿರುವುದಲ್ಲದೆ, ತ್ಯಾಜ್ಯ ಸೇರುವುದರಿಂದ ನೀರು ಕಲಷಿತಗೊಂಡಿದೆ. ಇದು ಪಕ್ಷಿಗಳ ಆಹಾರದ ಮೂಲಕ್ಕೆ ಹೊಡೆತ ಬಿದ್ದಂತಾಗಿದೆ. ಬಿಸಿಲು ಹೆಚ್ಚಾದರೂ ತಡೆದು ಕೊಳ್ಳುವ ಪಕ್ಷಿಗಳು ನೀರು, ಆಹಾರದ ಸಮಸ್ಯೆಯಾದಾಗ ವಲಸೆ ಪಕ್ಷಿಗಳು ಬೇರೆಡೆ ಸ್ಥಳಾಂತರಗೊಳ್ಳು ತ್ತದೆ.

ನದಿಗಳಿಗೆ ತ್ಯಾಜ್ಯ ಎಸೆಯುವ ಪರಿಣಾಮ ಜಲಚರಗಳು ನಾಶವಾಗುತ್ತಿವೆ. ಇದರಿಂದ ನದಿ ಸಮದ್ರ ಸೇರುವ ಪ್ರದೇಶ ಹಾಗೂ ಗದ್ದೆ, ನದಿ ತೊರೆಗಳಲ್ಲಿ ಮೀನು ಕಪ್ಪೆ, ಹುಳು ಆಶ್ರಯಿಸಿದ ಪಕ್ಷಿಗಳು ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಪಕ್ಷಿ ತಜ್ಞರು ಅಭಿಪ್ರಾಯಿಸಿದ್ದಾರೆ.

ಕೊಕ್ಕರೆ ಪ್ರಭೇದಕ್ಕೂ ಆತಂಕ
ಸಾಮಾನ್ಯವಾಗಿ ಗದ್ದೆ ಹಾಗೂ ನದಿ ಸಮೀಪ ಕಾಣಸಿಗುವ ಕೊಕ್ಕರೆ, ನೀರುಕಾಗೆ ಸಂಖ್ಯೆ ಕಡಿಮೆಯಾಗುತ್ತಿದೆ. ಕೊಕ್ಕರೆಯಲ್ಲಿ ಬ್ಲ್ಯಾಕ್‌ ಸ್ಟಾರ್‌, ವೈಟ್‌ ಸ್ಟಾರ್‌, ಗ್ರೇಟ್‌ ಈಗ್ರೆಟ್‌, ಇನ್‌ಟರ್‌ ಈಗ್ರೆಟ್‌, ಲಿಟ್ಲ ಈಗ್ರೆಟ್‌, ಊಲ್ಲಿ ನೆಕ್ಡ್ ಸ್ಟೋರ್‌ ಬಹುತೇಕ ವಿರಳವಾಗುತ್ತಿದೆ. ಗದ್ದೆ ಪ್ರದೇಶ ಕಡಿಮೆಯಾಗುತ್ತಲೇ ಗುಬ್ಬಚ್ಚಿಯಂತೆ ಹೋಲುವ ಮುನಿಯಾ ಪಕ್ಷಿಗಳೂ ವಿನಾಶದಂಚಿನಲ್ಲಿವೆ ಎಂದು ಪಕ್ಷಿ ತಜ್ಞ ಅರ್ನಾಲ್ಡ್‌ ಅಭಿಪ್ರಾಯಿಸಿದ್ದಾರೆ.

ಇನ್ನೊಂದೆಡೆ ನದಿ ಸಮೀಪ ಎಲ್ಲೆಂದರಲ್ಲಿರುತ್ತಿದ್ದ ನೀರು ಕಾಗೆಗಳು ವಿರಳ, ಈಗ ಕುಂದಾಪುರ ಹೊರತುಪಡಿಸಿ ಬೇರೆಲ್ಲೂ ಕಾಣಸಿಗಲಾರವು. ಮರಮಟ್ಟು ಕಡಿಮೆಯಾಗಿರುವುದರಿಂದ ಬಾವಲಿಗಳ ಸಂಖ್ಯೆಯೂ ಕಡಿಮೆಯಾಗಿವೆ.

Advertisement

ನದಿ ನೀರು ಕಲುಷಿತ
ಈಗಾಗಲೇ ಕಾರವಳಿಯ ಬಹುತೇಕ ನದಿಗಳು ಮಾರ್ಚ್‌ ಆರಂಭದಲ್ಲೇ ಬತ್ತಿಹೋಗಿದ್ದು, ಈ ನಡುವೆ ಹೊಟೇಲ್‌ ತ್ಯಾಜ್ಯ, ಆಯಿಲ್‌, ತೋಟಕ್ಕೆ ಬಳಸುವ ರಸಗೊಬ್ಬರ ನದಿ ಸೇರುವುದರಿಂದ ಮೀನು, ಕಪ್ಪೆ, ಏಡಿಗಳ ಮೊಟ್ಟೆಗಳು ನಾಶವಾಗುತಿವೆೆ. ಪರಿಣಾಮವಾಗಿ ಮೀನು ಆಶ್ರಿತ ಪಕ್ಷಿಗಳು ಆಹಾರವಿಲ್ಲದೆ ಕರಾವಳಿ ಪ್ರದೇಶಕ್ಕೆ ಬರಲು ಮನಸ್ಸು ಮಾಡುತ್ತಿಲ್ಲ.

ಇಲ್ಲೇ ವಾಸಿಸುವ ಪಕ್ಷಿಗಳು ಬೇರೆಡೆ ವಲಸೆ ಹೋಗುವ ಅನಿವಾರ್ಯ ಬಂದೊದಗಿರುವುದು ಮುಂದಿನ ದಿನಗಳಲ್ಲಿ ಪಕ್ಷಿ ಸಂಕುಲವೇ ನಶಿಸುವ ಸಾಧ್ಯತೆಯ ಮನ್ಸೂಚನೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಅರಿವು ಮೂಡಿಸಿ
ಹೆಚ್ಚಾಗಿ ವಲಸೆ ಪಕ್ಷಿಗಳು ಮಾರ್ಚ್‌ ಕೊನೆವರೆಗೆ ಉಳಿಯುತ್ತದೆ. ಆದರೆ ಕಲುಷಿತ ನೀರು ಹಾಗೂ ಆಹಾರ ಸಮಸ್ಯೆಯಿಂದ ಕರಾವಳಿ ತೀರದ ಪಕ್ಷಿಗಳು ಹಾಸನ, ಮೈಸೂರು ಭಾಗಗಳಿಗೆ ವಲಸೆ ಹೋಗುತ್ತಿವೆ. ಇದು ಆತಂಕಕಾರಿ. ಪ್ರಾಣಿ, ಪಕ್ಷಿಗಳ ರಕ್ಷಣೆಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ.
ವಿನೀತ್‌ ಕುಮಾರ್‌ ಕೆ. ಪಕ್ಷಿ ತಜ್ಞ

ನಾವೇ ಕಾರಣ
ಜಲ ಮಾಲಿನ್ಯ ತಡೆಗಟ್ಟದಿದ್ದಲ್ಲಿ ಮುಂದೊಂದು ದಿನ ಜೀವಸಂಕುಲವೇ ವಿನಾಶದ ಘಟ್ಟ ತಲುಪುವ ಸಾಧ್ಯತೆ ಇದೆ. ಎಲೆಕ್ಟ್ರಾನಿಕ್‌ ವಸ್ತುಗಳಲ್ಲಿ ಬಳಸುವ ಬ್ಯಾಟರಿಯಲ್ಲಿ ಟಾಕ್ಸಿನ್‌ ಅಂಶ ಹೆಚ್ಚಿದ್ದು, ಅದು ನದಿ ನೀರಿಗೆ ಸೇರಿ ಜಲಚರ ಸಾವನ್ನಪ್ಪುತ್ತಿದೆ. ಪಕ್ಷಿಗಳ ಆಹಾರ ಸರಪಣಿಗೆ ಹೊಡೆತ ಬಳುತ್ತಿದ್ದು, ಪಕ್ಷಿಸಂಕುಲ ವಿನಾಶದಂಚಿಗೆ ಸಾಗಲು ನಾವೇ ಕಾರಣರಾಗುತ್ತಿದ್ದೇವೆ ಎಂಬುದನ್ನು ಮನಗಾಣಬೇಕಿದೆ.
ಆರ್ನಾಲ್ಡ್‌ ಎಂ. ಹಿರಿಯ ಪಕ್ಷಿತಜ್ಞ

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next