Advertisement
ದ.ಕ. ಜಿಲ್ಲೆಯ ಮುಚ್ಚಾರು ಮೂಲದ ಅಂತಾರಾಷ್ಟ್ರೀಯ ಕಲಾವಿನ್ಯಾಸಕ ಶಶಿಧರ ಅಡಪ ಮತ್ತು ತಂಡದವರು ಈ ಸ್ತಬ್ಧಚಿತ್ರ ನಿರ್ಮಾಣ ಮಾಡಿದ್ದು, ಈ ತಂಡದಲ್ಲಿ ಸುಳ್ಯ ಮೂಲದ ವಿನೋದ್ ಎಂಬ ಕಲಾವಿದ ಸಹಿತ 50 ಮಂದಿ ಕೈ ಜೋಡಿಸಿದ್ದಾರೆ. ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆಯನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಎಲ್ಲ ರಾಜ್ಯಗಳು ಗಾಂಧೀಜಿ ಅವರ ಜೀವನಾಧಾರಿತ ಸ್ತಬ್ಧಚಿತ್ರದ ಪರಿಕಲ್ಪನೆ ಮಾಡುವಂತೆ ಕೇಂದ್ರ ಸರಕಾರ ಸೂಚಿಸಿತ್ತು.
ಮಹಾತ್ಮ ಗಾಂಧೀಜಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಸ್ತಬ್ಧಚಿತ್ರದಲ್ಲಿ ಸ್ವಾತಂತ್ರ್ಯ ಪರ ಹೋರಾಟದಲ್ಲಿ ದೇಸಿ ಪ್ರತಿಮೆಗಳನ್ನು ಬಳಕೆ ಮಾಡಲಾಗಿದೆ. ಅಧಿವೇಶನ ನಡೆದ ಜಾಗವನ್ನು ‘ವಿಜಯನಗರ’ ಎಂದು ಹೆಸರಿಡಲಾಗಿದೆ. ಪ್ರವೇಶ ದ್ವಾರದಲ್ಲಿ ಹಂಪಿ ವಿರೂಪಾಕ್ಷ ಗೋಪುರದ ಮಹಾದ್ವಾರವಿದ್ದು, ಸುತ್ತಮುತ್ತಲು ಜನಸಾಮಾನ್ಯರು ಓಡಾಡುತ್ತಿದ್ದಾರೆ. ಅಧಿವೇಶಕ್ಕೆ ಆಗಮಿಸಿದವರು ತಂಗಲು ಕುಟೀರಗಳನ್ನು ನಿರ್ಮಿಸಲಾಗಿದೆ. ಪಕ್ಕದಲ್ಲಿಯೇ ರೈಲು ನಿಲ್ದಾಣವಿದೆ. ಕುಡಿಯು ನೀರಿಗಾಗಿ ಪಂಪಾಸಾಗರವಿದೆ. ಅಧಿವೇಶನದಲ್ಲಿ ಗಾಂಧೀಜಿ ಭಾಷಣ ಮಾಡುವ ವೇದಿಕೆ ಇದ್ದು, ಅವರ ಹಿಂದೆ ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್, ಬಸವೇಶ್ವರ, ವಿದ್ಯಾರಣ್ಯ, ಬಾಲ ಗಂಗಾಧರ ತಿಲಕರ ಫೋಟೋ ಇಡಲಾಗಿದೆ. 1921ರಲ್ಲಿ ಧ್ವಜವಂದನೆ ಮಾಡುತ್ತಿರುವ ಚಿತ್ರ ಬಿಂಬಿಸಲಾಗಿದ್ದು, ಅಂದಿನ ಕೆಂಪು, ಹಸಿರು, ಬಿಳಿ ಬಣ್ಣ ಧ್ವಜವಿದೆ. ಪಕ್ಕದಲ್ಲಿಯೇ ಸ್ವಾತಂತ್ರ್ಯ ಹೋರಾಟಗಾರ ಗಂಗಾಧರ ದೇಶಪಾಂಡೆ ಅವರು ಚರಕ ತಿರುಗಿಸುತ್ತಿದ್ದಾರೆ.
Related Articles
ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಶಶಿಧರ ಅಡಪ ಅವರು 12 ವರ್ಷಗಳಿಂದ ಸ್ತಬ್ಧಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸಿದ್ಧಪಡಿಸಿದ ಸ್ತಬ್ದಚಿತ್ರಗಳ ಪೈಕಿ ಇಲ್ಲಿಯವೆರೆಗ 4 ಬಾರಿ ಪ್ರಶಸ್ತಿ ಸಂದಿದೆ. 2008 ಸಾಲಿನ ಹೊಯ್ಸಳ ವಾಸ್ತುಶಿಲ್ಪ ಸ್ತಬ್ಧಚಿತ್ರಕ್ಕೆ ದ್ವಿತೀಯ ಬಹುಮಾನ, 2011 ಸಾಲಿನ ಬಿದರಿ ಕಲೆ ಸ್ತಬ್ಧಚಿತ್ರಕ್ಕೆ ದ್ವಿತೀಯ ಬಹುಮಾನ, 2012 ಸಾಲಿನ ಭೂತಾರಾಧನೆ ಸ್ತಬ್ಧಚಿತ್ರಕ್ಕೆ ತೃತೀಯ ಬಹುಮಾನ, 2015ನೇ ಸಾಲಿನ ಚೆನ್ನಪಟ್ಟಣದ ಆಟಿಕೆಗಳು ಸ್ತಬ್ಧಚಿತ್ರಕ್ಕೆ ತೃತೀಯ ಬಹುಮಾನ ಲಭಿಸಿತ್ತು.
Advertisement
ಬಹುಮಾನದ ನಿರೀಕ್ಷೆಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಕರ್ನಾಟಕ ರಾಜ್ಯಕ್ಕೆ ಸ್ತಬ್ಧಚಿತ್ರ ನಿರ್ಮಿಸಿದ್ದು, ಗೌರವದ ಕೆಲಸ. ನಮ್ಮ ರಾಜ್ಯದ ಸ್ತಬ್ಧಚಿತ್ರವು ಈ ಬಾರಿಯೂ ಬಹುಮಾನಗಳಿಸುತ್ತದೆ ಎಂಬ ನಿರೀಕ್ಷೆ ಇದೆ.
– ಶಶಿಧರ ಅಡಪ,
ಕಲಾವಿನ್ಯಾಸಕ