ಮಂಗಳೂರು ನಗರ ಸೇರಿದಂತೆ ವಿವಿಧೆಡೆ ಬೆಳಗ್ಗಿನಿಂದ ಸಂಜೆಯವರೆಗೆ ಸಾಧಾರಣ ಮಳೆಯಾಗಿದೆ. ಸಂಜೆ ಬಳಿಕ ಮಳೆಯ ಬಿರುಸು ತುಸು ಹೆಚ್ಚಿತ್ತು. ಉಡುಪಿ ಜಿಲ್ಲೆಯ ಉಡುಪಿ, ಮಣಿಪಾಲ, ಕಾರ್ಕಳ, ಕಾಪು, ಹೆಬ್ರಿ, ಬ್ರಹ್ಮಾವರ, ಅಜೆಕಾರು ಭಾಗದಲ್ಲಿ ಮಳೆ ಸುರಿದಿದೆ.
Advertisement
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿದ್ದ ಮಳೆಯ ಪರಿಣಾಮ ಗರಿಷ್ಠ ಉಷ್ಣಾಂಶ ಕಡಿಮೆಯಾಗಿದೆ. ಮಂಗಳೂರಿನಲ್ಲಿ 28.9 ಡಿ.ಸೆ. ಗರಿಷ್ಠ ಮತ್ತು 23.6 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.
ಕರಾವಳಿ ಭಾಗದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆಯು ಜು. 3ರಿಂದ 6ರ ವರೆಗೆ ಎಲ್ಲೋ ಅಲರ್ಟ್ ಘೊಷಿಸಿದೆ. ಈ ವೇಳೆ ಬಿರುಸಿನ ಮಳೆ, ಗಾಳಿ ಮತ್ತು ಸಮುದ್ರದ ಅಬ್ಬರ ಕೂಡ ಹೆಚ್ಚಿರುವ ಸಾಧ್ಯತೆ ಇದೆ. ಕುಕ್ಕೆ: ಸ್ನಾನ ಘಟ್ಟ ಭಾಗಶಃ ಮುಳುಗಡೆ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಹಾಗೂ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಭಾರೀ ಮಳೆಯಿಂದಾಗಿ ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಸ್ನಾನ ಘಟ್ಟ ಭಾಗಶಃ ಜಲಾವೃತಗೊಂಡಿದೆ.
ಕುಕ್ಕೆ ಸುಬ್ರಹ್ಮಣ್ಯ ಸಮೀಪ ಕುಮಾರಧಾರೆಯಲ್ಲಿ ಶನಿವಾರ ನೀರು ಭಾರೀ ಪ್ರಮಾಣದಲ್ಲಿ ಬಂದು ಕಿಂಡಿ ಅಣೆಕಟ್ಟು, ಸ್ನಾನಘಟ್ಟ ಮುಳುಗಡೆಯಾಗಿದೆ. ದೇವರ ಕಟ್ಟೆ ವರೆಗೆ ನೀರು ಆವರಿಸಿದ್ದು, ಭಕ್ತರು ದಡದಲ್ಲಿ ನಿಂತು ತೀರ್ಥ ಸ್ನಾನ ನೆರವೇರಿಸಿದರು. ಸ್ಥಳದಲ್ಲಿ ಸೂಕ್ತ ರೀತಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಸುಬ್ರಹ್ಮಣ್ಯ, ಐನೆಕಿದು, ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಳ್ಪ, ಪಂಜ, ಬಿಳಿನೆಲೆ, ಕಮಿಲ ವ್ಯಾಪ್ತಿಯಲ್ಲೂ ಶನಿವಾರ ಮಳೆ ಮುಂದಿವರಿದಿದೆ.
Related Articles
ಅರಂತೋಡು: ಸುಳ್ಯ -ಪಾಣತ್ತೂರು ಅಂತಾರಾಜ್ಯ ರಸ್ತೆ ಯಲ್ಲಿ ಮತ್ತೆ ಕೆಲವೆಡೆ ಬರೆ ಕುಸಿತ ಸಂಭವಿಸಿದ್ದು, ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.
Advertisement
ಸುಳ್ಯ-ಪಾಣತ್ತೂರು ರಸ್ತೆ ಯಲ್ಲಿ ಗಡಿ ಪ್ರದೇಶ ಕೇರಳದ ಭಾಗದ ಕಲ್ಲಪಳ್ಳಿ ಸಮೀಪದ ಬಾಟೋಳಿಯ ಹಲವು ಕಡೆಗಳಲ್ಲಿ ಭೂ ಕುಸಿತ ಆಗಿ ಮಣ್ಣು, ಕಲ್ಲು ರಸ್ತೆಯ ಮೇಲೆ ಬಿದ್ದಿತ್ತು. ಜನಪ್ರತಿನಿಧಿಗಳು ಮತ್ತು ಸ್ಥಳೀಯ ಯುವಕರು ಸೇರಿ ಮಣ್ಣು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಅರ್ಧಕ್ಕೆ ನಿಂತಿದೆ. ಇದರಿಂದ ಮಳೆಗಾಲ ಪ್ರಾರಂಭ ವಾದಾಗ ಪದೇಪದೆ ಗುಡ್ಡ ಕುಸಿದು ಸಮಸ್ಯೆಯಾಗುತ್ತಿದೆ. ಎರಡು ದಿನಗಳ ಹಿಂದೆ ಇಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿತ್ತು.
ಉಳ್ಳಾಲ: 3 ದಿನಗಳಲ್ಲಿ 66 ಮನೆಗಳಿಗೆ ಹಾನಿಉಳ್ಳಾಲ ಗಾಳಿ-ಮಳೆಯಿಂದಾಗಿ ಕಳೆದ ಮೂರು ದಿನಗಳಲ್ಲಿ ಉಳ್ಳಾಲ ತಾಲೂಕಿನಲ್ಲಿ ಸುಮಾರು 66 ಮನೆಗಳಿಗೆ ಹಾನಿಯಾಗಿದೆ. ಕಡಲ್ಕೊರೆತ ಸೇರಿದಂತೆ ಗುಡ್ಡ ಕುಸಿತದಿಂದ ಸುಮಾರು 50ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ. 60 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟ ಅಂದಾಜಿಸಲಾಗಿದೆ. ಉಳ್ಳಾಲ ತಾಲೂಕು ರಚನೆಯಾದ ಬಳಿಕ ಅಕಾಲಿಕ ಮಳೆ ಮತ್ತು ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಯಿಂದ 8 ಮನೆಗಳು ತೀವ್ರ ಹಾನಿಯಾಗಿದ್ದು, ಸುಮಾರು 26 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ತಾಲೂಕಿನಾದ್ಯಂತ 58 ಮನೆಗಳು ಭಾಗಶಃ ಹಾನಿಗೀಡಾಗಿ 24.9 ಲಕ್ಷ ನಷ್ಟ ಅಂದಾಜಿಸಲಾಗಿದೆ.
ಉಳ್ಳಾಲ ಸೀಗ್ರೌಂಡ್ ಮತ್ತು ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಕಡಲ್ಕೊರೆತದಿಂದ 30ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿದ್ದರೆ, ಗುಡ್ಡ ಕುಸಿತದಿಂದ 20ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ. ಬೀಚ್ ರಸ್ತೆ ಕುಸಿದು ಎರಡು ವರುಷ
ಬಟ್ಟಪ್ಪಾಡಿಯಿಂದ ಉಚ್ಚಿಲ ಎಂಡ್ ಪಾಯಿಂಟ್ ಸಂಪರ್ಕಿಸುವ ಬೀಚ್ ರಸ್ತೆ ಕುಸಿತಗೊಂಡು ಈ ಮಳೆಗಾಲಕ್ಕೆ ಎರಡು ವರ್ಷವಾದರೂ ಜಿಲ್ಲಾಡಳಿತವಾಗಲಿ ಸಂಬಂಧಿತ ಇಲಾಖೆಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಶಾಶ್ವತ ಕಾಮಗಾರಿ ಸಂದರ್ಭ ಉಚ್ಚಿಲ ಎಂಡ್ ಪಾಯಿಂಟ್‌ವೆರೆಗೆ ಕಾಮಗಾರಿ ನಡೆಸದೆ ಬಟ್ಟಪ್ಪಾಡಿಯಲ್ಲಿ ಕಡಲ್ಕೊರೆತಕ್ಕೆ ಕಾರಣವಾಗಿದ್ದು, ಸುಮಾರು 15ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ. ಕೆಲವು ಮನೆಗಳಿಗೆ ಸಂಪರ್ಕ ರಸ್ತೆ ಇಲ್ಲದಂತಾಗಿದೆ. ಉಳ್ಳಾಲ ಸೀಗ್ರೌಂಡ್‌ನಲ್ಲಿ 500 ಮೀಟರ್ ಕಾಮಗಾರಿ ಬಾಕಿ ಉಳಿದಿದ್ದು, 15ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ. ಕೊಡಗಿನಲ್ಲಿ ಧಾರಾಕಾರ ಮಳೆ; ವಿವಿಧೆಡೆ ಹಾನಿ
ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆೆಯಾಗುತ್ತಿದ್ದು, ಅಲ್ಲಲ್ಲಿ ಕುಸಿದ ಬರೆ, ಧರೆಗುರುಳಿದ ಮರಗಳಿಂದ ಸಂಚಾರಕ್ಕೆ ತೊಡಕಾಗಿದೆ. ಜೀವನದಿ ಕಾವೇರಿಯ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ಕಾವೇರಿಯ ಕ್ಷೇತ್ರ ಭಾಗಮಂಡಲ ಮತ್ತು ತಲಕಾವೇರಿ ವಿಭಾಗದಲ್ಲಿ ಒಂದು ದಿನದ ಅವಧಿಯಲ್ಲಿ ಸರಾಸರಿ ನಾಲ್ಕು ಇಂಚಿಗೂ ಹೆಚ್ಚಿನ ಮಳೆಯಾಗಿದ್ದು, ಕಾವೇರಿ ನದಿ ಪಾತ್ರದ ಪ್ರದೇಶಗಳಲ್ಲೂ ಎಡೆಬಿಡದೆ ಮಳೆಯಾಗುತ್ತಿದೆ.
ಭಾಗಮಂಡಲದಿಂದ ಕರಿಕೆಗೆ ತೆರಳುವ ರಸ್ತೆಯಲ್ಲಿ ಅಲ್ಪ ಪ್ರಮಾಣದ ಬರೆ ಕುಸಿತವಾಗಿದ್ದು, ಸ್ವಲ್ಪಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮಡಿಕೇರಿಯಿಂದ ಭಾಗಮಂಡಲಕ್ಕೆ ತೆರಳುವ ಮುಖ್ಯ ರಸ್ತೆಯ ಬೆಟ್ಟಗೇರಿ ಬಕ್ಕ ಗ್ರಾಮದಲ್ಲಿ ರಸ್ತೆಗಡ್ಡಲಾಗಿ ಭಾರೀ ಗಾತ್ರದ ಮರವುರುಳಿ ಸಂಚಾರಕ್ಕೆ ತೊಡಕುಂಟಾಗಿದೆ. ಮಡಿಕೇರಿ-ಮಂಗಳೂರು ರಸ್ತೆಯ ಜೋಡು ಪಾಲದ ಬಳಿ ಮುಖ್ಯ ರಸ್ತೆಯ ಮೇಲೆ ಬರೆ ಕುಸಿದು ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಕರಿಕೆ: 6 ಮನೆಗಳಿಗೆ ಹಾನಿ
ಗಡಿ ಭಾಗವಾದ ಕರಿಕೆ ಗ್ರಾ.ಪಂ. ವ್ಯಾಪ್ತಿಯ ವಾರ್ಡ್ ಸಂಖ್ಯೆ 3 ಮತ್ತು 4ರಲ್ಲಿ ಭಾರೀ ಪ್ರಮಾಣದ ಬರೆ ಕುಸಿತವಾಗಿದೆ. 6 ಮನೆಗಳಿಗೆ ಹಾನಿಯಾಗಿದೆ. ಇದೇ ಭಾಗದಲ್ಲಿ ಭಾರೀ ಮಳೆೆಯಿಂದ ಎರಡು ಬಂಡೆಗಲ್ಲುಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ಇವುಗಳು ಕೆಳಕ್ಕೆ ಜಾರಿದಲ್ಲಿ ಮತ್ತಷ್ಟು ಹಾನಿ ಸಂಭವಿಸುವ ಅಪಾಯವಿರುವುದಾಗಿ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕರಿಕೆ ಗ್ರಾಮ ವ್ಯಾಪ್ತಿಯಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಿದ್ದಿದ್ದು, ವಿದ್ಯುತ್ ಸರಬರಾಜು ಕಡಿತಗೊಂಡಿದೆ.