Advertisement

ಭೂಕಂಪ ಸಂತ್ರಸ್ತರಿಗಾಗಿ ಮಿಡಿದ ಕರಾವಳಿ: ಇಂದಿಗೆ 50 ವರ್ಷ

06:15 AM Apr 05, 2018 | Team Udayavani |

ಮಂಗಳೂರು: ಮಾನವೀಯ ಮೌಲ್ಯಗಳಿಗೆ ಕ್ರಿಕೆಟ್‌ ಆಟ ಸ್ಪಂದಿಸಿದ ಅಪೂರ್ವ ಘಟನೆ 50 ವರ್ಷಗಳ ಹಿಂದೆ ಮಂಗಳೂರಿನಲ್ಲೂ ನಡೆದಿತ್ತು. ಅದು ಘಟಿಸಿ ಈ ಎಪ್ರಿಲ್‌ 5ಕ್ಕೆ ಭರ್ತಿ 50 ವರ್ಷ! ಆ ಕಾಲಘಟ್ಟದ ಭಾರತದ ಪ್ರಸಿದ್ಧ ಮತ್ತು ಉದಯೋನ್ಮುಖ ಕ್ರಿಕೆಟಿಗರು ಈ ಸಹಾಯಾರ್ಥ ಪ್ರದರ್ಶನ ಪಂದ್ಯದಲ್ಲಿ ಭಾಗವಹಿಸಿದ್ದರು ಅನ್ನುವುದು ಇನ್ನೊಂದು ವಿಶೇಷ. ಈ ಪಂದ್ಯ ನಡೆದದ್ದು 1968ರ ಎಪ್ರಿಲ್‌ 5, 6 ಮತ್ತು 7ರಂದು.

Advertisement

ಮಹಾರಾಷ್ಟ್ರದ ಕೊಯ್ನಾದಲ್ಲಿ (ಇದು ಕರ್ನಾಟಕದ ಗಡಿ ಪ್ರದೇಶವೂ ಆಗಿದೆ) 1967ರ ಡಿಸೆಂಬರ್‌ 11ರಂದು ಇತಿಹಾಸದ ಅತ್ಯಂತ ಭೀಕರ ಭೂಕಂಪವೊಂದು ಸಂಭವಿಸಿತು. 177 ಜೀವಹಾನಿ, ಅಪಾರ ಆಸ್ತಿಹಾನಿ ಉಂಟಾಯಿತು. 2,200 ಮಂದಿ ಗಾಯಗೊಂಡರು. ಸಹಸ್ರಾರು ಮಂದಿ ನಿರ್ಗತಿಕರಾದರು. ಆ ಬಳಿಕ ಪರಿಹಾರ ಕ್ರಮಗಳ ಅಂಗವಾಗಿ ಧನ ಸಂಗ್ರಹದ ಕಾರ್ಯವೂ ನಡೆಯಿತು.

ಈ ಕಾರ್ಯದ ಅಂಗವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕ (ಆಗ ಮೈಸೂರು ರಾಜ್ಯ) ಸರಕಾರಗಳು 10 ಪಂದ್ಯಗಳ ಸಹಾಯಾರ್ಥ ಕ್ರಿಕೆಟ್‌ ಸರಣಿಯನ್ನು ವಿವಿಧೆಡೆ ಆಯೋಜಿಸಿದ್ದವು. ಆ ಪೈಕಿ ಒಂದು ಪಂದ್ಯ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಿತು. ಆಗ ಟಿ.ಜೆ. ರಾಮಕೃಷ್ಣನ್‌ ಜಿಲ್ಲಾಧಿಕಾರಿಯಾಗಿದ್ದರು. ಈ ಸಂದರ್ಭದ ಅಪೂರ್ವ ಛಾಯಾಚಿತ್ರವನ್ನು ಮಾಜಿ ಕ್ರಿಕೆಟಿಗ, ದ. ಕನ್ನಡ ಕ್ರಿಕೆಟ್‌ ಸಂಸ್ಥೆಯಲ್ಲಿ ವ್ಯವಸ್ಥಾಪಕರಾಗಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕಸ್ತೂರಿ ಬಾಲಕೃಷ್ಣ ಪೈ ಅವರು “ಉದಯವಾಣಿ’ಗೆ ನೀಡಿದ್ದಾರೆ. ಸಂಘಟಕರ ನೆರವಿನಿಂದ ದೊರೆತ ಚಿತ್ರ ಇದು, ತನ್ನ ಕ್ರಿಕೆಟ್‌ ಜೀವನದ ಅಮೂಲ್ಯ ಸಂಗ್ರಹಗಳಲ್ಲೊಂದು ಎಂದು ಅಖೀಲ ಭಾರತ ಶಾಲಾ ಬಾಲಕರ ಕ್ರಿಕೆಟ್‌ನಲ್ಲಿ ಮೈಸೂರು ರಾಜ್ಯವನ್ನು ಮತ್ತು ವಿ.ವಿ. ಮಟ್ಟದಲ್ಲಿ ಮೈಸೂರು ವಿ.ವಿ.ಯನ್ನು ಪ್ರತಿನಿಧಿಸಿದ್ದ ಬಾಲಕೃಷ್ಣ ಪೈ ಹೇಳುತ್ತಾರೆ.

 - ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next