Advertisement

ಕರಾವಳಿಯ ರೈಲು ಪ್ರಯಾಣಿಕರಿಗೆ ನಿರಾಶೆ

03:45 AM Jul 07, 2017 | |

ಬೆಂಗಳೂರು- ಕಾರವಾರ ರೈಲು: ನೇರ ಮಾರ್ಗದಲ್ಲಿ ಸಂಚರಿಸಲು ಮತ್ತೆ ವಿಘ್ನ
ಮೈಸೂರು ವಿಭಾಗದ ಲಾಬಿಗೆ ಮಣಿದ ಇಲಾಖೆ; ನಿರ್ಧಾರದಲ್ಲಿ ಹಿನ್ನಡೆ

ಕುಂದಾಪುರ
:  ಕರಾವಳಿ ಜನರ ಬಹಳಷ್ಟು ನಿರೀಕ್ಷೆಯ ಕಾರವಾರ-ಬೆಂಗಳೂರು ರೈಲು ಪ್ರಯಾಣ ಮತ್ತೆ ಹಳಿತಪ್ಪಿದೆ. ಸುತ್ತಿ ಬಳಸಿ ಬೆಂಗಳೂರನ್ನು ತಲುಪುವಾಗ ಸುಸ್ತಾಗಿದ್ದ  ಕರಾವಳಿಯ ಪ್ರಯಾಣಿಕರಿಗೆ ಕೊಂಚ ನಿರಾಳವೆಂಬಂತೆ ಕುಣಿಗಲ್‌ ಮೂಲಕ ನೇರ ಮಾರ್ಗದಲ್ಲಿ ರೈಲು ಸಂಚರಿಸುವುದು ಎನ್ನುವ ನಿರೀಕ್ಷೆ  ಇತ್ತು. ಆದರೆ  ಮತ್ತೆ ಈ ಯೋಜನೆಯ ಹಾದಿ ಹಿನ್ನಡೆ ಕಂಡಿರುವುದು ಪ್ರಯಾಣಿಕರಿಗೆ ನಿರಾಶೆ ಮೂಡಿಸಿದೆ.

Advertisement

ಪ್ರಯಾಣಿಕರಿಗೆ ಅಸಮಾಧಾನ
ರಾಜಧಾನಿ ಬೆಂಗಳೂರಲ್ಲಿ ಕರಾವಳಿ ಕರ್ನಾಟಕದ ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ಉದ್ಯೋಗ, ಉದ್ಯಮ, ಹೊಟೇಲ್‌ಗ‌ಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇವರಿಗೆ ರಾಜಧಾನಿಯನ್ನು ಸಂಪರ್ಕಿಸುವ ನೇರ ರೈಲು ಸೇವೆ ಇಲ್ಲವಾಗಿದೆ. ಪ್ರಸ್ತುತ ಸಂಚರಿಸುವ  

ಕಾರವಾರ -ಬೆಂಗಳೂರು ರೈಲು ಸುಮಾರು  18 ಘಂಟೆಗಳ ಕಾಲ ಸುದೀರ್ಘ‌ ಸಮಯ ತೆಗೆದುಕೊಳ್ಳುತ್ತಿದ್ದು, ರೈಲನ್ನೇ ನೆಚ್ಚಿಕೊಂಡಿದ್ದ ಪ್ರಯಾಣಿಕರು ಬಸ್‌ಗಳತ್ತ ಮುಖ ಮಾಡಿರುವುದು ಕಂಡು ಬರುತ್ತದೆ.  ಈ  ರೈಲು ನೇರ ಕುಣಿಗಲ್‌ ಮಾರ್ಗದಲ್ಲಿ ಸಂಚರಿಸುವುದನ್ನು  ಬಿಟ್ಟು ಸುತ್ತು ಬಳಸಿ ಮೈಸೂರು ಮಾರ್ಗದಲ್ಲಿ ಸಂಚರಿಸುತ್ತಿರುವುದೇ ಪ್ರಯಾಣಿಕರ ಅಸಮಾಧಾನಕ್ಕೆ  ಪ್ರಮುಖ ಕಾರಣವಾಗಿದೆ.

ಆಗ್ರಹ
ಕಾರವಾರ- ಬೆಂಗಳೂರು ರೈಲು ಕುಣಿಗಲ್‌ ಮೂಲಕ ನೇರ ಮಾರ್ಗದಲ್ಲಿ ಸಂಚರಿಸಿದಲ್ಲಿ   ರಾತ್ರಿ 10 ಗಂಟೆಗೆ ಕರಾವಳಿ ಬಿಟ್ಟು   ಮರುದಿನ ಬೆಳಗ್ಗೆ  6ಕ್ಕೆ  ಬೆಂಗಳೂರನ್ನು ತಲುಪಲು ಸಾಧ್ಯ. ಆದರೆ ಅದೇ ಈಗ ಸಂಚರಿಸುವ ರೈಲು ಮಧ್ಯಾಹ್ನ 2.30 ಕರಾವಳಿಯನ್ನು ಬಿಟ್ಟು  ಮರುದಿನ ಬೆಳಗ್ಗೆ 9 ಕ್ಕೆ ಬಹಳಷ್ಟು ತಡವಾಗಿ ತಲುಪುತ್ತಿದೆ.  ಇದರಿಂದ ಕರಾವಳಿಯ ಜನರಿಗೆ ಯಾವ ರೀತಿಯಿಂದಲೂ ರೈಲು ಉಪಯೊಗಕ್ಕೆ ಬಾರದಾಗಿದೆ. ಈ ಹಿನ್ನೆಲೆಯಲ್ಲಿ  ರೈಲು ಪ್ರಯಾಣವನ್ನೇ ಅವಲಂಬಿಸಿದ  ಜನರು  ರೈಲನ್ನು ಹಾಸನ-ಕುಣಿಗಲ್‌-ಬೆಂಗಳೂರು ನೇರ ಮಾರ್ಗದಲ್ಲಿ   ಸಂಚರಿಸುವಂತೆ ಆಗ್ರಹಿಸಿದ್ದಾರೆ.  ಇದರಿಂದ ಸುಮಾರು 70 ಕಿ. ಮೀ. ಉಳಿತಾಯವಾಗಲಿದ್ದು, ಈಗ ಸಂಚರಿಸುತ್ತಿರುವ  ಮೈಸೂರು ಮಾರ್ಗದಂತೆ ಹಾಸನ ಮತ್ತು ಮೈಸೂರಿನಲ್ಲಿ ಇಂಜಿನ್‌ ಬದಲಾಯಿಸಲು ತೆಗೆದುಕೊಳ್ಳುವ ಸಮಯ ಉಳಿತಾಯವಾಗಲಿದೆ .

ಆಕ್ಷೇಪ
ಮೈಸೂರು ವಿಭಾಗದ ಆಕ್ಷೇಪಣೆ:  ಕಳೆದ ಎಪ್ರಿಲ್‌ನಲ್ಲಿ  ನಡೆದ ಹುಬ್ಬಳ್ಳಿ ನೈಋತ್ಯ ರೈಲ್ವೇ ಬಳಕೆದಾರರ ಸಭೆಯಲ್ಲಿ ಕಾರವಾರ-ಬೆಂಗಳೂರು ರೈಲನ್ನು  ಕುಣಿಗಲ್‌ ಮಾರ್ಗಕ್ಕೆ ಬದಲಾಯಿಸುವ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಆದರೆ ಈ ನಿರ್ಧಾರ  ಜಾರಿಗೆ ಬಾರದೇ ವಿಳಂಬ ನೀತಿಯನ್ನು ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ  ರೈಲು ಪ್ರಯಾಣಿಕರೊಬ್ಬರು ಆರ್‌.ಟಿ.ಐ. ಮೂಲಕ ಮಾಹಿತಿ ಪಡೆದಾಗ ಮೈಸೂರು ವಿಭಾಗೀಯ ಸಮಿತಿ ಆಕ್ಷೇಪಣೆ ವ್ಯಕ್ತಪಡಿಸಿದೆ ಎನ್ನುವ ಕಾರಣ ನೀಡಿ ತನ್ನ ನಿರ್ಧಾರವನ್ನು  ಹಿಂಪಡೆದಿರುವ ಬಗ್ಗೆ ಮಾಹಿತಿ ನೀಡಿದೆ. 

Advertisement

ಬೇಡಿಕೆಗೆ ಬೆಲೆಯೇ ಇಲ್ಲ
ಪ್ರಸ್ತುತ ರೈಲು ಸುಧೀರ್ಘ‌ ಸಮಯವನ್ನು ತೆಗೆದುಕೊಳ್ಳುತ್ತಿದ್ದು, ಅದನ್ನು ಕಡಿಮೆಗೊಳಿಸಲು ಕ್ರಮ ಕೈಗೊಂಡ ಬಗ್ಗೆ ಇದೇ ಮಾಹಿತಿಯಲ್ಲಿ  ಪ್ರಶ್ನಿಸಿದಾಗ  ಘಟ್ಟ ಪ್ರದೇಶ ಎನ್ನುವ ಹಿನ್ನೆಲೆಯಲ್ಲಿ  ಯಾವ ಕ್ರಮವನ್ನು ತೆಗೆದುಕೊಂಡಿಲ್ಲ ಎನ್ನುವ  ಉತ್ತರ ದೊರಕಿದೆ. ಆದ್ದರಿಂದ ಬಳಕೆದಾರರ ಸಭೆಯಲ್ಲಿ ನಿರ್ಣಯಿಸಲಾದ  ನಿರ್ಧಾರ  ಹಾಗೂ   ಕರಾವಳಿಯ ಲಕ್ಷಾಂತರ  ಜನರ ಬೇಡಿಕೆಗೆ ಬೆಲೆಯೇ ಇಲ್ಲದಂತಾಗಿದೆ.

ಜನಪ್ರತಿನಿಧಿಗಳಿಗೆ  ಕರೆಘಂಟೆ
ಕಾರವಾರ ಬೆಂಗಳೂರು ರಾತ್ರಿ ರೈಲಿನಲ್ಲಿ ಬಹುತೇಕ ಪ್ರಯಾಣಿಕರು ಬೆಂಗಳೂರು ಪ್ರಯಾಣಿಕರೇ ಹೊರತು ಮೈಸೂರಿನಿಂದ ಆಗಮಿಸುವ ಹಾಗೂ ಹೋಗುವವರ ಸಂಖ್ಯೆ ಕಡಿಮೆ. ಮೈಸೂರಿನ ಪ್ರಯಾಣಿಕರಿಗೆ  ಕರಾವಳಿ ಸಂಪರ್ಕಿಸಬೇಕಾದಲ್ಲಿ  ಪ್ರಸ್ತುತ ಗಾಡಿಯನ್ನು  ಮೈಸೂರು -ಬೆಂಗಳೂರು -ಕುಣಿಗಲ್‌ ಕಾರವಾರದ ಮೂಲಕ ಓಡಿಸ ಬಹುದಾಗಿದೆ.  ಇಲ್ಲವೇ  ಮೈಸೂರು -ಧಾರವಾಡ ರಾತ್ರಿ ರೈಲಿನ ಸಮಯ ಬದಲಾವಣೆ ಮಾಡಿದರೆ, ಮೈಸೂರು ಭಾಗದ ಪ್ರಯಾಣಿಕರು ಹಾಸನದಲ್ಲಿ ಕಾರವಾರ ರೈಲಿನಲ್ಲಿ  ಪ್ರಯಾಣಿಸ ಬಹುದಾಗಿದೆ.  ಇದರಿಂದ ಈ ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಮೈಸೂರು ವಿಭಾಗದ  ಜನರ ಬೇಡಿಕೆಗಳಿಗೆ ಸ್ಪಂದಿಸುವ ರೈಲ್ವೇ ಅಧಿಕಾರಿಗಳಿಗೆ ಕರಾವಳಿಯ ಜನರ ಬೇಡಿಕೆಯನ್ನು  ಈಡೇರಿಸುವ ಬಗ್ಗೆ  ಕರಾವಳಿ ಭಾಗದ  ಜನಪ್ರತಿನಿಧಿಗಳು ಸಂಬಂಧಪಟ್ಟ ಇಲಾಖೆ ಹಾಗೂ ಸಚಿವರಲ್ಲಿ ಒತ್ತಡ ತರಬೇಕಾಗಿದೆ.

ಬೆಂಗಳೂರು ರೈಲು ಪ್ರಸ್ತುತ  ಮೈಸೂರು ಮಾರ್ಗದಲ್ಲಿಯೇ ಸಂಚರಿಸುವುದರಿಂದ ಕರಾವಳಿಯ ಪ್ರಯಾಣಿಕರ ಬೇಡಿಕೆಗಳು ಈಡೇರಿಲ್ಲ.  ಈ ರೈಲು ಕುಣಿಗಲ್‌ ಮಾರ್ಗದ  ಮೂಲಕ ಸಂಚರಿಸುವ ಬಗ್ಗೆ  ಸಾಧಕ -ಬಾಧಕಗಳ ಕುರಿತು ಮೈಸೂರು ಹಾಗೂ ಹುಬ್ಬಳ್ಳಿ ವಿಭಾಗದ ಅಧಿಕಾರಿಗಳೊಂದಿಗೆ  ಚರ್ಚಿಸಲಾಗುವುದು ಮತ್ತು ಈ ಮಾರ್ಗದಲ್ಲಿ ರೈಲು ಸಂಚರಿಸುವ ಬಗ್ಗೆ  ಹಂತ ಹಂತವಾಗಿ ಒತ್ತಡ ಹೇರಲಾಗುವುದು. 
– ಕೆ.ಜಯಪ್ರಕಾಶ್‌ ಹೆಗ್ಡೆ, ಮಾಜಿ ಸಂಸದರು

ಕಾರವಾರ -ಬೆಂಗಳೂರು ರಾತ್ರಿ ರೈಲು ಅಸ್ತಿತ್ವಕ್ಕೆ ಬಂದಿರುವುದೇ ಬೆಂಗಳೂರು  ಹಾಗೂ  ಕರಾವಳಿ ಸಂಪರ್ಕಕ್ಕಾಗಿ. ಒಂದು ವೇಳೆ ಸರಿಯಾದ ಮಾರ್ಗದಲ್ಲಿ ಓಡಿದರೆ ಈ ರೈಲಿನ  ಆದಾಯ ದ್ವಿಗುಣವಾಗಲಿದೆ.  ಸಾಕಷ್ಟು  ವಿಳಂಬದ  ಹೊರತಾಗಿಯೂ ಇಂದಿಗೂ ರೈಲು ತುಂಬಿ ಸಾಗುತ್ತಿರುವುದು ಕರಾವಳಿ ಕನ್ನಡಿಗನ ಅಸಹಾಯಕ ಸಮಸ್ಯೆಗಳಿಗೆ ಸಾಕ್ಷಿಯಾಗಿದೆ. ಕುಣಿಗಲ್‌ ನೇರ ಮಾರ್ಗ ಕರ್ನಾಟಕ ಕರಾವಳಿಯ ಜನರಿಗೆ ಸಿಕ್ಕಾಗ ಮಾತ್ರ ರೈಲು ನಿಜ ಅರ್ಥದಲ್ಲಿ ಜನ ಸೇವೆಗೆ ಸಿಗುವುದು. ಆಗ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ದೊರಕಬೇಕಾಗಿದೆ.
– ಗೌತಮ್‌ ಶೆಟ್ಟಿ, ರೈಲು ಪ್ರಯಾಣಿಕ

– ಉದಯ ಆಚಾರ್‌ ಸಾಸ್ತಾನ

Advertisement

Udayavani is now on Telegram. Click here to join our channel and stay updated with the latest news.

Next