ಮಂಗಳೂರು: ಭಾರತೀಯ ಕೋಸ್ಟ್ ಗಾರ್ಡ್ ರಾಷ್ಟ್ರದ ಕರಾವಳಿ ಪ್ರದೇಶಗಳ ಭದ್ರತೆಯನ್ನು ಖಾತ್ರಿಪಡಿಸುವಲ್ಲಿ ಮತ್ತು ಕಡಲ್ಗಳ್ಳತನ, ಕಳ್ಳಸಾಗಣೆ, ಭಯೋತ್ಪಾದನೆ ಮತ್ತು ಕಾನೂನುಬಾಹಿರ ಚಟುವಟಿಕೆಗಳಂತಹ ವಿವಿಧ ಬೆದರಿಕೆಗಳಿಂದ ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಕರಾವಳಿ ಕಾವಲು ಪಡೆ ಕರ್ನಾಟಕದ ಕಮಾಂಡೆಂಟ್ ಡಿಐಜಿ ಪಿ. ಕೆ. ಮಿಶ್ರ ಹೇಳಿದರು.
ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಎಂಜಿನಿಯರಿಂಗ್-ಮೈಟ್ ಇದರ ಏರೋನಾಟಿಕಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾದ “ಭಾರತೀಯ ಕರಾವಳಿ ಕಾವಲು ಪಡೆ ಸವಾಲುಗಳು ಮತ್ತು ಅವಕಾಶಗಳು’ ವಿಚಾರದ ಬಗ್ಗೆ ಒಂದು ದಿನದ ವೃತ್ತಿ ಮಾರ್ಗದರ್ಶನ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೋಸ್ಟ್‌ಗಾರ್ಡ್ ಭಾರತದ ಕಡಲ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ದೇಶದ ಪ್ರಾದೇಶಿಕ ಜಲ ಮತ್ತು ವಿಶೇಷ ಆರ್ಥಿಕ ವಲಯದೊಳಗೆ ಕಡಲ ಕಾನೂನುಗಳನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ. ಸಮುದ್ರದಲ್ಲಿ ತೊಂದರೆಯಲ್ಲಿರುವ ಹಡಗುಗಳು ಮತ್ತು ವ್ಯಕ್ತಿಗಳಿಗೆ ಸಹಾಯ ಮಾಡಲು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುವ ಜವಾಬ್ದಾರಿಯನ್ನು ಹೊಂದಿದೆ. ಸಂಕಷ್ಟದ ನೆರವಿಗಾಗಿ ಕರೆಗಳಿಗೆ ಪ್ರತಿಕ್ರಿಯಿಸುವುದು, ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಅಲ್ಲದೆ ಸಮುದ್ರ ಪರಿಸರ ಮತ್ತು ಕರಾವಳಿ ಪ್ರದೇಶಗಳನ್ನು ರಕ್ಷಿಸಲು ಸಮುದ್ರ ಮಾಲಿನ್ಯದ ಘಟನೆಗಳು ಮತ್ತು ತೈಲ ಸೋರಿಕೆಗಳನ್ನು ತಡೆಗಟ್ಟುವಲ್ಲಿ ಮತ್ತು ಸ್ಪಂದಿಸುವಲ್ಲಿ ಕೋಸ್ಟ್‌ಗಾರ್ಡ್ ತೊಡಗಿಸಿಕೊಂಡಿದೆ. ಅಕ್ರಮ ಮೀನುಗಾರಿಕೆ, ಅನಧಿಕೃತ ಪ್ರವೇಶ, ಮತ್ತು ಸರಕು ಮತ್ತು ಜನರ ಕಳ್ಳಸಾಗಣೆಯನ್ನು ತಡೆಗಟ್ಟುವುದು ಸೇರಿದಂತೆ ವಿವಿಧ ಕಡಲ ಕಾನೂನುಗಳನ್ನು ಅನುಷ್ಠಾನ ಗೊಳಿಸುತ್ತದೆ. ಭಾರತದ ಕಡಲ ಗಡಿಗಳ ಮೇಲೆ ನಿರಂತರ ಕಣ್ಗಾವಲು ಇರಿಸುವ ಜತೆ ಚಂಡಮಾರುತಗಳು ಮತ್ತು ಸುನಾಮಿಯಂತಹ ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ, ಮಾನವೀಯ ನೆರವು, ವಿಪತ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಸಂಘಟಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ವಿವರಿಸಿದರು.
ಕಮಾಂಡೆಂಟ್ ಮಸೂದಿ ವೆಂಕಯ್ಯ ಮತ್ತು ಸಹಾಯಕ ಕಮಾಂಡೆಂಟ್ ದೀಪಕ್ ಚೋಪ್ರಾ ಪಾಲ್ಗೊಂಡಿದ್ದರು.
ಭಾರತೀಯ ಕೋಸ್ಟ್ ಗಾರ್ಡ್ ಪರಿಣಾಮಕಾರಿ ಕಣ್ಗಾವಲು, ಸಂವಹನ ಮತ್ತು ಕಡಲ ಘಟನೆಗಳಿಗೆ ಸ್ಪಂದಿಸುವುದಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಹಡಗುಗಳು, ವೇಗದ ದೋಣಿಗಳು, ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಹೊಂದಿದೆ ಎಂದವರು ವಿವರಿಸಿದರು.
ಕಾಲೇಜಿನ ವಿವಿಧ ಎಂಜಿನಿಯರಿಂಗ್ ವಿಭಾಗಗಳ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದರು.