ಕೊಲ್ಲೂರು: ಕೊಲ್ಲೂರಿನಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಟ್ಟಡಕ್ಕೆ ಕೂಲ್ಲೂರು ಗ್ರಾಮ ಪಂಚಾಯತ್ ನ ಸ್ಥಳಾಂತರ ಕಾರ್ಯಕ್ರಮ ಮೇ 20 ರಂದು ನಡೆಯಿತು.
ಸರಳವಾಗಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ಬೈಂದೂರು ಕ್ಷೇತ್ರ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿಯವರು ಮಾತನಾಡಿ ಕೊಲ್ಲೂರಿನ ಸಮಗ್ರ ಅಭಿವೃದ್ಧಿಗೆ ಪೂರಕವಾದ ಅನೇಕ ವ್ಯವಸ್ಥೆ ಇನ್ನೂ ಆಗಬೇಕಾಗಿದೆ.
ತಿರುಪತಿ ಕ್ಷೇತ್ರದ ಮಟ್ಟದಲ್ಲಿ ಬೆಳಸಬೇಕೆಂಬ ಉದ್ದೇಶವಿದೆ ಇಲ್ಲಿನ ಪ್ರಮುಖ ಅಗತ್ಯಗಳಾದ ಒಳ ಚರಂಡಿ ವ್ಯವಸ್ಥೆ ಸಮರ್ಪಕವಾಗಿರಬೇಕು ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಲೋಪವಾಗಬಾರದು ದೇಗುಲದ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಅಗತ್ಯವಾಗಿದೆ, ನಿಷ್ಕಳಂಕ, ನಿಸ್ವಾರ್ಥ ಸೇವೆಯ ಮನೋಭಾವ ಹೊಂದಿರುವ ಸಮರ್ಥರನ್ನು ಕೊಲ್ಲೂರು ಕ್ಷೇತ್ರದ ಆಡಳಿತ ಮಂಡಳಿಗೆ ಆಯ್ಕೆ ಮಾಡಬೇಕು, ಕೊಡಚಾದ್ರಿ ಬೆಟ್ಟಕ್ಕೆ ಸಾಗಲು ಕೊಲ್ಲೂರಿನಿಂದ ರೋಪ್-ವೇ ನಿರ್ಮಾಣದ ಕನಸು ಹೊತ್ತಿದ್ದು ಆ ಮೂಲಕ ಪ್ರವಾಸೋದ್ಯಮ ಕೇಂದ್ರವಾಗಿ ಈ ಭಾಗವನ್ನು ಪರಿವರ್ತಿಸಿ ಉತ್ತಮ ಆದಾಯದೊಡನೆ ಉದ್ಯೋಗ ಸೃಷ್ಟಿ ಮಾಡುವುದರ ಮೂಲಕ ಮಾದರಿಯ ಕೊಲ್ಲೂರು ಆಗಿ ಬೆಳಸುವ ಸಲುವಾಗಿ ಅನೇಕ ಹೊಸ ಯೋಜನೆಯ ರೂಪ ರೇಷೆ ಹೊಂದಿರುತ್ತೇನೆ ಎಂದರಲ್ಲದೇ, ಕೊಲ್ಲೂರಿನ ನೂತನ ಕಟ್ಟಡದಲ್ಲಿ ಆರಂಭಗೊಂಡಿರುವ ಗ್ರಾ.ಪಂ.ಆಡಳಿತ ವ್ಯವಸ್ಥೆ ಜನಪರ ಕಾಳಜಿಯಿಂದ ಕೂಡಿರಲಿ ಎಂದರು.
ಕೊಲ್ಲೂರು ಗ್ರಾ.ಪಂ.ಅಧ್ಯಕ್ಷ ಪ್ರಕಾಶ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್, ತಾ.ಪಂ.ಸದಸ್ಯೆ ಗ್ರೀಷ್ಮಾ ಭಿಡೆ, ಗ್ರಾ.ಪಂ.ಉಪಾಧ್ಯಕ್ಷೆ, ತಾ.ಪಂ.ಮಾಜಿ ಸದಸ್ಯ ರಮೇಶ ಗಾಣಿಗ, ಗ್ರಾ.ಪಂ. ಮಾಜಿ ಅಧ್ಯಕ್ಷರು, ಸದಸ್ಯರು, ಪಂಚಾಯತ್ ಸಿಬಂದಿಗಳು, ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ಪಿಡಿಒ ರಾಜೇಶ್ ಸ್ವಾಗತಿಸಿ , ವಂದಿಸಿದರು.