Advertisement
ರಾಜ್ಯದ ಉಷ್ಣ ಸ್ಥಾವರಗಳಿಗೆ ಪ್ರಧಾನವಾಗಿ ಕಲ್ಲಿದ್ದಲು ಪೂರೈಸುತ್ತಿರುವ ಮಹಾರಾಷ್ಟ್ರದ ವೆಸ್ಟ್ರನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಡಬ್ಲೂಸಿಎಲ್) ನಿಗದಿತ ಪ್ರಮಾಣಕ್ಕಿಂತ ಶೇ.55ರಷ್ಟು ಕಡಿಮೆ ಕಲ್ಲಿದ್ದಲು ಪೂರೈಸುತ್ತಿರುವುದರಿಂದ ತೀವ್ರ ಅಭಾವ ತಲೆದೋರಿದೆ. ಜತೆಗೆ ತೆಲಂಗಾಣದ ಸಿಂಗರೇಣಿ ಕೊಲಿರೀಸ್ ಕಂಪನಿ ಲಿಮಿಟೆಡ್ (ಎಸ್‌ಸಿಸಿಎಲ್) ಕೂಡ ನಿಗದಿಗಿಂತ ಶೇ.20ರಷ್ಟು ಕಡಿಮೆ ಪ್ರಮಾಣದಲ್ಲಿ ಕಲ್ಲಿದ್ದಲು ವಿತರಿಸುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ರಾಜ್ಯದಲ್ಲಿ ಮುಂಗಾರು ಮುಗಿದು ಮಳೆ ಪ್ರಮಾಣ ತಗ್ಗುತ್ತಿದ್ದಂತೆ ವಿದ್ಯುತ್ ಬೇಡಿಕೆ ಏರುಮುಖವಾಗಿದೆ. ಸದ್ಯ ಸರಾಸರಿ 10,000ದಿಂದ 10,500 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯಿದ್ದು, ಉಷ್ಣ ವಿದ್ಯುತ್ ಉತ್ಪಾದನೆ ಮೇಲೆ ಹೆಚ್ಚಿನ ಒತ್ತಡವಿದೆ. ಆದರೆ ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆಯಲ್ಲಿ ಕೊರೆಯಾಗಿ ಕ್ಷಾಮ ತಲೆದೋರುವ ಆತಂಕವಿದೆ.
Related Articles
ಡಬ್ಲೂಸಿಎಲ್ ಸಂಸ್ಥೆ ನಿತ್ಯ ಗಣಿಗಾರಿಕೆಯಿಂದ ಹೊರತೆಗೆಯುವ ಕಲ್ಲಿದ್ದಲು ಪ್ರಮಾಣದಲ್ಲಿ ಸಿಂಹಪಾಲು ಮಹಾರಾಷ್ಟ್ರ,, ಗುಜರಾತ್ ರಾಜ್ಯಗಳಿಗೆ ಪೂರೈಕೆಯಾಗುತ್ತಿದೆ. ಆದರೆ ಕರ್ನಾಟಕಕ್ಕೆ ಹಂಚಿಕೆಯಾದಷ್ಟು ಕಲ್ಲಿದ್ದಲು ಪೂರೈಸದೆ ತಾರತಮ್ಯ ತೋರುತ್ತಿದೆ. ಇದರಿಂದಾಗಿ ಕಲ್ಲಿದ್ದಲು ಅಭಾವ ಸೃಷ್ಟಿಯಾಗಿದೆ. ಆಯಾ ದಿನ ಪೂರೈಕೆಯಾಗುವ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸುವ ಸ್ಥಿತಿ ಗಂಭೀರವಾದುದು. ಹಾಗಾಗಿ ಗಣಿ ಸಂಸ್ಥೆಗಳು ಒಪ್ಪಂದದನ್ವಯ ನಿಗದಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಸುವಂತೆ ಮನವಿ ಮಾಡಲಾಗುತ್ತಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.
Advertisement
ಕಲ್ಲಿದ್ದಲು ಪೂರೈಕೆಗೆ ಕೇಂದ್ರಕ್ಕೆ ಸಿಎಂ ಮನವಿಬೆಂಗಳೂರು: ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ತೀವ್ರ ಕಲ್ಲಿದ್ದಲು ಕೊರತೆ ತಲೆದೋರಿದ್ದು, ಕೇಂದ್ರ ಸರ್ಕಾರಿ ಸ್ವಾಮ್ಯದ ಡಬ್ಲೂಸಿಎಲ್ ಸಂಸ್ಥೆಯು ಒಪ್ಪಂದದ ಪ್ರಕಾರ ಕಲ್ಲಿದ್ದಲು ಪೂರೈಸದಿರುವುದೇ ಇದಕ್ಕೆ ಕಾರಣ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ದೂರಿದ್ದಾರೆ. ನಿತ್ಯ 1,720 ಮೆ.ವ್ಯಾ.ವಿದ್ಯುತ್ ಉತ್ಪಾದನೆ ಸಾಮರ್ಥಯವಿರುವ ರಾಯಚೂರಿನ ಆರ್‌ಟಿಪಿಎಸ್ ಘಟಕದಲ್ಲಿ ಕಲ್ಲಿದ್ದಲು ದಾಸ್ತಾನು ಶೂನ್ಯಕ್ಕೆ ತಲುಪಿದೆ. ಡಬ್ಲೂಸಿಎಲ್ ಸಂಸ್ಥೆಯು ಈವರೆಗೆ ಪೂರೈಸಬೇಕಾದ ಕಲ್ಲಿದ್ದಲು ಪ್ರಮಾಣದಲ್ಲಿ 6 ಲಕ್ಷ ಟನ್ ಕಲ್ಲಿದ್ದಲು ಪೂರೈಸಿಲ್ಲ. ಈ ಕೊರತೆ ನೀಗಿಸಲು ಎಂಸಿಎಲ್ ಸಂಸ್ಥೆ ಮೂಲಕ ಕಲ್ಲಿದ್ದಲು ಪೂರೈಸುವಂತೆ ಕೇಂದ್ರ ಕಲ್ಲಿದ್ದಲು ಸಚಿವರಾದ ಪಿಯೂಷ್ ಗೋಯೆಲ್ ಅವರಿಗೆ ಪತ್ರದ ಮುಖೇನ ಮನವಿ ಮಾಡಲಾಗಿದೆ. ಹಾಗೆಯೇ ಡಬ್ಲೂಸಿಎಲ್ ಸಂಸ್ಥೆಗೆ ಒಪ್ಪಂದದ ಪ್ರಕಾರ ಪೂರ್ಣ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆ ವ್ಯವಸ್ಥೆ ಕಲ್ಪಿಸುವ ಮೂಲಕ ರಾಜ್ಯದಲ್ಲಿ ವಿದ್ಯುತ್ ಪೂರೈಕೆಗೆ ಸಹಕರಿಸು ವಂತೆಯೂ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಎಂ. ಕೀರ್ತಿಪ್ರಸಾದ್