ಹೊಸದಿಲ್ಲಿ : ಅತಿ ಹೆಚ್ಚು ಸಂಖ್ಯೆಯ ಅಂತರಾಷ್ಟ್ರೀಯ ಮತ್ತು ಪ್ರಥಮ ದರ್ಜೆ ಕ್ರಿಕೆಟಿಗರನ್ನು ಶಿಷ್ಯರನ್ನಾಗಿ ಹೊಂದಿರುವ ಭಾರತೀಯ ಕೋಚ್ ತಾರಕ್ ಸಿನ್ಹಾ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಶನಿವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ 71 ವರ್ಷ ಪ್ರಾಯವಾಗಿತ್ತು.
ಸಿನ್ಹಾ ಅವರು ದೇಶೀಯ ಮತ್ತು ಅಂತರಾಷ್ಟ್ರೀಯ ಅತ್ಯುತ್ತಮ ಕ್ರಿಕೆಟಿಗರನ್ನು ತಯಾರು ಮಾಡಿದ ದೆಹಲಿಯ ಪ್ರಸಿದ್ಧ ಸಾನೆಟ್ ಕ್ಲಬ್‌ನ ಪಿತಾಮಹ ಎನಿಸಿಕೊಂಡಿದ್ದರು.
ಶಿಷ್ಯರಲ್ಲಿ ಒಬ್ಬರಾದ ರಿಷಬ್ ಪಂತ್ ಅವರು ಟ್ವೀಟ್ ಮಾಡಿ, ”ಆಟಗಾರರು ಅವರಿಗೆ ಕೇವಲ ಸಂಖ್ಯೆಗಳು! ದೇಶಕ್ಕೆ ಅಸಾಧಾರಣ ಅಂತರಾಷ್ಟ್ರೀಯ ಕ್ರಿಕೆಟಿಗರನ್ನು ನೀಡಲು ಅವರು ತಮ್ಮ ಜೀವನದುದ್ದಕ್ಕೂ ಶ್ರಮಿಸಿದ್ದಾರೆ! ಅಂತಿಮವಾಗಿ, ಕಾಯುವಿಕೆ ಕೊನೆಗೊಂಡಿತು. ಅವರಿಗೆ ಅರ್ಹವಾದ ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಲಾಗಿದೆ! ಅಭಿನಂದನೆಗಳು ತಾರಕ್ ಸಿನ್ಹಾ ಸರ್! ನೀವು ಶ್ರೇಷ್ಠರು” ಎಂದು ಬರೆದಿದ್ದಾರೆ.
ಅವರ ಶಿಷ್ಯರಲ್ಲಿ ದೆಹಲಿ ಕ್ರಿಕೆಟ್‌ನ ದಿಗ್ಗಜರು ಒಳಗೊಂಡಿದ್ದು, ಸುರಿಂದರ್ ಖನ್ನಾ, ಮನೋಜ್ ಪ್ರಭಾಕರ್, ದಿವಂಗತ ರಮಣ್ ಲಂಬಾ, ಅಜಯ್ ಶರ್ಮಾ, ಅತುಲ್ ವಾಸನ್, ಸಂಜೀವ್ ಶರ್ಮಾ ಎಲ್ಲರೂ ದೆಹಲಿ ಕ್ರಿಕೆಟ್ ಅನ್ನು ಆಳಿದ್ದರು ಮತ್ತು ಭಾರತಕ್ಕಾಗಿಯೂ ಆಡಿದ್ದರು.
90 ರ ದಶಕದ ನಂತರ ಸಿನ್ಹಾ ಅವರು ಉತ್ತಮ ಅಂತರರಾಷ್ಟ್ರೀಯ ಆಟಗಾರರನ್ನು ತರಬೇತು ಗೊಳಿಸಿದ್ದರು. ಇದರಲ್ಲಿ ಆಕಾಶ್ ಚೋಪ್ರಾ, ಜೊತೆಗೆ ವೇಗಿ ಆಶಿಶ್ ನೆಹ್ರಾ, ಶಿಖರ್ ಧವನ್ , ಮಹಿಳಾ ರಾಷ್ಟ್ರೀಯ ತಂಡದ ಮಾಜಿ ನಾಯಕಿ ಅಂಜುಮ್ ಚೋಪ್ರಾ ಸೇರಿದಂತೆ ಮಹಿಳಾ ಕ್ರಿಕೆಟಿಗರು, ಆಲ್ ರೌಂಡರ್ ರುಮೇಲಿ ಧರ್ ಅವರು ಶಿಷ್ಯರಲ್ಲಿ ಪ್ರಮುಖರು.