Advertisement

ಕರಾವಳಿಯಲ್ಲಿ ಸಹಕಾರಿ ಬ್ಯಾಂಕ್‌ಗಳು ಬಲಿಷ್ಠ

10:37 AM Sep 05, 2023 | Team Udayavani |

ಸಿದ್ದಾಪುರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರೈತರು ನಿಷ್ಠೆ ಹಾಗೂ ಪ್ರಮಾಣಿಕ ವ್ಯವಹಾರಕ್ಕೆ ಹೆಸರು. ಸಹಕಾರಿ ಸಂಘಗಳಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸುತ್ತಿರುವುದು ಕರಾವಳಿ ಯಲ್ಲಿ ಸಹಕಾರಿ ಬ್ಯಾಂಕ್‌ಗಳು ಬಲಿಷ್ಠವಾಗಿರಲು ಕಾರಣ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ (ಎಸ್‌ಸಿಡಿಸಿಸಿ) ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು.

Advertisement

ಅವರು ಎಸ್‌ಸಿಡಿಸಿಸಿ ಬ್ಯಾಂಕಿನ ಗೋಳಿಯಂಗಡಿ ಶಾಖಾ ಕಟ್ಟಡದಲ್ಲಿ ಸೋಮವಾರ ನಡೆದ ಬ್ಯಾಂಕಿನ 12ನೇ ಎಟಿಎಂ ಉದ್ಘಾಟನೆ ಸಮಾರಂಭದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಜನರಿಗೆ ಹೆಚ್ಚಿನ ಪ್ರಯೋಜನವಾಗುವಂತೆ ಗೋಳಿಯಂ ಗಡಿಯಲ್ಲಿ 2007ರಲ್ಲಿ ಬ್ಯಾಂಕಿನ ಶಾಖೆಯನ್ನು ತೆರೆಯಲಾಗಿತ್ತು. ಗ್ರಾಹಕರ ಉತ್ತಮ ವ್ಯವಹಾರದಿಂದ ಶಾಖೆಯು ಪ್ರಗತಿಯೊಂದಿಗೆ ಗುರುತಿಸಿಕೊಂಡಿದೆ. ಬ್ಯಾಂಕ್‌ ರೈತರಿಗೆ ಕೃಷಿ ಸಾಲಗಳನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಮಹಿಳೆಯರು ನವೋದಯ ಸ್ವಸಹಾಯ ಸಂಘಗಳ ಬಗ್ಗೆ ಅಪಾರ ವಿಶ್ವಾಸದಿಂದ ವ್ಯವಹಾರ ನಡೆಸುತ್ತ ಸ್ವಾಲಂಬಿ ಬದುಕನ್ನು ಕಾಣುತ್ತಿದ್ದಾರೆ ಎಂದರು.

ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌

ಶಾಸಕ ಕಿರಣ್‌ ಕುಮಾರ ಕೊಡ್ಗಿ ಎಟಿಎಂ ಉದ್ಘಾಟಿಸಿ ಮಾತನಾಡಿ, ಎಸ್‌ಸಿಡಿಸಿಸಿ ಬ್ಯಾಂಕ್‌ ಉತ್ತಮ ವ್ಯವಹಾರದೊಂದಿಗೆ ರಾಜ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ ಪ್ರಶಸ್ತಿಗಳನ್ನು ಪ್ರತೀ ವರ್ಷ ಪಡೆದುಕೊಳ್ಳುತ್ತಿರುವುದು ಪ್ರಾಮಾಣಿಕ ವ್ಯವಹಾರಕ್ಕೆ ಸಂದ ಗೌರವವಾಗಿದೆ. ಸಹಕಾರಿ ಸಂಘ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆ ಅರಿತ ಉದ್ಯೋಗಿಗಳಿರುವುದರಿಂದ ಉತ್ತಮ ರೀತಿಯಲ್ಲಿ ವ್ಯವಹಾರ ನಡೆಯುತ್ತಿದೆ ಎಂದರು.

Advertisement

ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್‌. ಜಯರಾಮ ಶೆಟ್ಟಿ ಸೂರ್ಗೊಳಿ, ಬೆಳ್ವೆ ಗ್ರಾ.ಪಂ. ಅಧ್ಯಕ್ಷೆ ರಾಧಾ, ಬ್ಯಾಂಕಿನ ನಿರ್ದೇಶಕ ಎಂ. ಮಹೇಶ ಹೆಗ್ಡೆ ಮೊಳಹಳ್ಳಿ, ಪ್ರಭಾರ ಸಿಇಒ ಗೋಪಾಲಕೃಷ್ಣ ಭಟ್‌, ಕಟ್ಟಡ ಮಾಲಕ ನಾಗರಾಜ ಭಟ್‌ ಗೋಳಿಯಂಗಡಿ ಉಪಸ್ಥಿತರಿದ್ದರು.

ಪರಮೇಶ್ವರ ಭಟ್‌, ಶಾರದಾ ಅವರಿಗೆ ಠೇವಣಿ ಪತ್ರ, ಬಸವರಾಜ್‌, ಶಾರದಾ, ಸಿದ್ದಮ್ಮ ಶೆಟ್ಟಿ ಅವರಿಗೆ ಗೃಹಸಾಲ ಪತ್ರ, ಪರುಶುರಾಮ ಎಚ್‌. ಅವರಿಗೆ ವಾಹನ ಸಾಲ ವಿತರಿಸಲಾಯಿತು. 10 ಸ್ವಸಹಾಯ ಗುಂಪುಗಳ ಉದ್ಘಾಟನೆ, ದಾಖಲೆ ಪತ್ರ ಹಸ್ತಾಂತರ, 32 ಸ್ವ ಸಹಾಯ ಸಂಘಗಳ ಗುಂಪುಗಳಿಗೆ 1 ಕೋಟಿ 25 ಲಕ್ಷ ರೂ. ಸಾಲಪತ್ರ ವಿತರಣೆ, 12 ನವೋದಯ ಸ್ವ ಸಹಾಯ ಸಂಘಗಳ ಗುಂಪುಗಳಿಗೆ 71 ಸಾವಿರ ರೂ. ಚೈತನ್ಯ ವಿಮಾ ಪರಿಹಾರ ಚೆಕ್‌ ವಿತರಣೆ ನಡೆಯಿತು.

ಸಮ್ಮಾನ

ಕಟ್ಟಡದ ಮಾಲಕ ನಾಗರಾಜ ಭಟ್‌ ಗೋಳಿಯಂಗಡಿ ಹಾಗೂ ಶಾಸಕ ಕಿರಣ್‌ ಕುಮಾರ ಕೊಡ್ಗಿ ಅವರನ್ನು ಸಮ್ಮಾನಿಸಲಾಯಿತು. ಕುಂದಾಪುರ ತಾಲೂಕು ಸಹಕಾರಿ ಸಂಘಗಳಿಂದ ಡಾ| ರಾಜೇಂದ್ರಕುಮಾರ್‌ ಅವರನ್ನು ಸಮ್ಮಾನಿಸಲಾಯಿತು. ನಿರ್ದೇಶಕ ಎಂ. ಮಹೇಶ ಹೆಗ್ಡೆ ಮೊಳಹಳ್ಳಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಗೋಪಾಲಕೃಷ್ಣ ಭಟ್‌ ವಂದಿಸಿದರು. ಸುಬ್ರಹ್ಮಣ್ಯ ಪಡುಕೋಣೆ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next