ಬೆಂಗಳೂರು: ನಗರದಲ್ಲಿ ಕಗ್ಗಂಟಾಗಿರುವ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಕಾರ ನೀಡುವುದಾಗಿ ಯಲಹಂಕದ ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿದರು. ಮಂಗಳವಾರ ಪಾಲಿಕೆ ಸಭೆಯಲ್ಲಿ ಮಾತನಾಡಿದ ಅವರು, ಮಾವಳ್ಳಿಪುರದಲ್ಲಿ ತ್ಯಾಜ್ಯ ರವಾನೆ ಮಾಡುವ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೂ ಈ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.
“ಬೆಂಗಳೂರಿನ ತ್ಯಾಜ್ಯ ಸಮಸ್ಯೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದೆಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಿಂದೆ ಬಿಜೆಪಿ ಆಡಳಿತದಲ್ಲಿದ್ದಾಗ ನಗರದ ತ್ಯಾಜ್ಯ ಸಮಸ್ಯೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಆ ಸ್ಥಿತಿ ಮತ್ತೂಮ್ಮೆ ಬರುವುದು ಬೇಡ’ ಎಂದು ಹೇಳಿದರು.
ಪಾಲಿಕೆಯ ವಿರೋಧ ಪಕ್ಷದನಾಯಕ ಪದ್ಮನಾಭ ರೆಡ್ಡಿ, “ತ್ಯಾಜ್ಯ ಕ್ವಾರಿಗೆ ಟೆಂಡರ್ ಕರೆದರೂ, ಅದನ್ನು ವೆಬ್‌ಸೈಟ್‌ನಲ್ಲಿ ಅಧಿಕಾರಿಗಳು ಅಪ್‌ಲೋಡ್ ಮಾಡಿಲ್ಲ ಕೆಆರ್‌ಐಡಿಎಲ್‌ಗೆ ಹಾಕಲು ಮುಂದಾಗಿದ್ದು, ಕ್ವಾರಿಗೆ ತ್ಯಾಜ್ಯ ಸಾಗಿಸಲು ಪ್ರತಿ ತಿಂಗಳು ಪಾಲಿಕೆ ಹದಿನೈದು ಕೋಟಿ ರೂ.ಖರ್ಚು ಮಾಡುತ್ತಿದೆ. ಇದು ಹಣ ಮಾಡಲು ಅಧಿಕಾರಿಗಳು ಕಂಡುಕೊಂಡಿರುವ ಮಾರ್ಗ’ ಎಂದು ಆರೋಪಿಸಿದರು.
“ಬೆಳ್ಳಳ್ಳಿ ಕ್ವಾರಿ ಸಂಪೂರ್ಣ ಭರ್ತಿಯಾಗಿರುವುದರಿಂದ ನಗರದಲ್ಲಿ ಕಸದ ಸಮಸ್ಯೆಯಾಗುತ್ತಿದೆ. ವೇಸ್ಟ್ ಟು ಎನರ್ಜಿ ಪ್ಲಾಂಟ್ ನಿರ್ಮಾಣಕ್ಕೆ ಸತಾರಾಂ ಸಂಸ್ಥೆ ಹಾಗೂ ಫರ್ಮ್ ಗ್ರೀನ್ ಸಂಸ್ಥೆ ಮುಂದೆ ಬಂದಿದ್ದು, ಸರ್ಕಾರ ಮುಂದಿನ ಸಂಪುಟದಲ್ಲಿ ಅನುಮೋದನೆ ನೀಡುವ ಸಾಧ್ಯತೆ ಇದೆ’ ಎಂದರು.
“ಬೆಳ್ಳಳ್ಳಿ, ಬಾಗಲೂರು, ಮಿಟಗಾನಹಳ್ಳಿ ಕ್ವಾರಿಯಲ್ಲಿ ಕಸ ಹಾಕಲು ನೂರು ಕೋಟಿ ರೂ.ಅನುದಾನ ಸರ್ಕಾರ ಒದಗಿಸಿತ್ತು. ಆದರೆ,ಚುನಾವಣೆ ಬಂದಿದ್ದರಿಂದ ಅನುಮೋದನೆ ಸಿಕ್ಕಿರಲಿಲ್ಲ. ಮಿಟಗಾನಹಳ್ಳಿ ಕ್ವಾರಿಗೆ ಟೆಂಡರ್ ಮಾಡಲು ಕಡೆಕ್ಷಣದಲ್ಲಿ ಅನುಮತಿ ಸಿಕ್ಕಿತ್ತು. ಈಗ ಟೆಂಡರ್ ಹಾಕಲು ಆ.7 ಕಡೆಯ ದಿನವಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಹೇಳಿದರು.
ಶಾಸಕರು ಯೂಟರ್ನ್: ಈ ಹಿಂದೆ ನಗರದಲ್ಲಿ ತ್ಯಾಜ್ಯ ಸಮಸ್ಯೆ ಕಗ್ಗಂಟಾದರೂ, ಬೆಂಗಳೂರಿನ ಹೊರವಲಯದಲ್ಲಿ ತ್ಯಾಜ್ಯ ಸುರಿಯುವುದಕ್ಕೆ ಯಲಹಂಕದ ಶಾಸಕ ಎಸ್.ಆರ್ ವಿಶ್ವನಾಥ್ ವಿರೋಧ ವ್ಯಕ್ತಪಡಿಸಿದ್ದರು. ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುತ್ತಿದ್ದಂತೆ ಶಾಸಕರು ಯೂಟರ್ನ್ ತೆಗೆದುಕೊಂಡಿದ್ದಾರೆ.