ಯಾದಗಿರಿ: ತುರ್ತು ಪರಿಸ್ಥಿತಿ ನಿಭಾಯಿಸಲು ಸರ್ಕಾರದ ಜತೆಗೆ ಎನ್‌ಜಿಒ, ಸಂಘ-ಸಂಸ್ಥೆಗಳ ಸಹಕಾರ ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಂಘ-ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ 19 ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದ್ದು, ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ವೈರಸ್ ಪ್ರಕರಣ ಕಂಡು ಬರದಿರುವುದು ಸಮಾಧಾನಕರ ಸಂಗತಿಯಾಗಿದೆ ಎಂದರು.
ಮೇ 3ರವರೆಗೆ ಈಗಾಗಲೇ ಲಾಕ್‌ಡೌನ್ ಜಾರಿಯಲ್ಲಿದೆ. ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಇದುವರೆಗೆ ಔಷಧ ಕಂಡು ಹಿಡಿದಿಲ್ಲ. ಆದ್ದರಿಂದ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಜವಾಬ್ದಾರಿ. ಲಾಕ್‌ಡೌನ್ ಸಡಿಲಿಕೆ ಅಥವಾ ಮುಂದಿನ ಯಾವುದೇ ಬದಲಾವಣೆಗಳಿಗೆ ನಾವು ಸಿದ್ಧರಾಗಬೇಕಿದೆ. ಈ ನಿಟ್ಟಿನಲ್ಲಿ ಎನ್‌ಜಿಒ, ಸಂಘ-ಸಂಸ್ಥೆಗಳ ಪ್ರತಿನಿಧಿ ಗಳೊಂದಿಗೆ ಸಭೆ ಕರೆಯಲಾಗಿದೆ ಎಂದು ಹೇಳಿದರು.
ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರು ಸ್ವ-ಇಚ್ಛೆಯಿಂದ ದಾನ ಮಾಡುತ್ತಿರುವುದು, ರೈತರಿಗೆ ನೆರವಾಗುತ್ತಿರುವುದು ಶ್ಲಾಘನೀಯ. ದಾನಿಗಳು ಹೊಲಗಳಿಗೆ ಹೋಗಿ ಹಣ್ಣು ಖರೀದಿಸುತ್ತಿರುವುದರಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ. ಮುಂದಿನ ದಿನಗಳಲ್ಲಿ ವೈದ್ಯರು ಮತ್ತು ರೋಗಿಗಳು, ರೈತರು ಮತ್ತು ಮಾರಾಟಗಾರರು, ವ್ಯಾಪಾರಿಗಳು ಮತ್ತು ಗ್ರಾಹಕರ ಮಧ್ಯೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳಿಂದ ಇನ್ನೂ ಹೆಚ್ಚಿನ ನೆರವಿನ ಹಸ್ತ ಬೇಕಿದೆ.
ಈ ನಿಟ್ಟಿನಲ್ಲಿ ವಾಹನ, ಮಾಸ್ಕ್, ಸ್ಯಾನಿಟೈಸರ್, ಮಾನವ ಸಂಪನ್ಮೂಲ ಒದಗಿಸುವುದು ಸೇರಿದಂತೆ ಇನ್ನಿತರ ನೆರವು ನೀಡಬಹುದು. ವಾಹನ ವ್ಯವಸ್ಥೆ ಮಾಡಿದರೆ ಜಿಲ್ಲೆಯ ಯಾವುದೇ ಹಳ್ಳಿಗಳಲ್ಲಿ ಜ್ವರ ಬಂದ ಅಥವಾ ಇನ್ನಿತರ ರೋಗಿಗಳನ್ನು ಪ್ರತ್ಯೇಕವಾಗಿ ಆಸ್ಪತ್ರೆಗೆ ಕರೆದೊಯ್ಯಲು, ವಸ್ತುಗಳ ಹೋಮ್ ಡೆಲಿವರಿಯಂತಹ ಕಾರ್ಯಗಳಿಗೆ ನೆರವಾಗುತ್ತದೆ ಎಂದು ತಿಳಿಸಿದರು.
ಮಾಹಿತಿಗಾಗಿ ಜಿಲ್ಲಾಡಳಿತದ ಕಂಟ್ರೋಲ್ ರೂಂ ಸಹಾಯವಾಣಿ 08473-253950 ಸಂಖ್ಯೆ ಸಂಪರ್ಕಿಸಲು ಕೋರಿದರು. ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರೆಡ್ಡಿ, ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಪ್ರತಿನಿಧಿ ಅನಿಲ, ಕಲಿಕಾ ಟಾಟಾ ಟ್ರಸ್ಟ್‌ನ ಪ್ರತಿನಿ ಧಿ ಧನರಾಜ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ತುಮಕೂರು ಸಕ್ಕರೆ ಕಾರ್ಖಾನೆಯ ಪ್ರತಿನಿಧಿಗಳು ಸೇರಿದಂತೆ ಭಾರತೀಯ ಜೈನ್ ಸಂಘಟನೆ, ರೋಟರಿ ಕ್ಲಬ್ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಯವರು ಜಿಲ್ಲಾಡಳಿತ ನಡೆಸುತ್ತಿರುವ ಈ ಮಹತ್ವದ ಕಾರ್ಯದಲ್ಲಿ ತಾವು ಕೂಡ ಭಾಗಿಯಾಗುವುದಾಗಿ ತಿಳಿಸಿದರು.
ಜಿಪಂ ಸಿಇಒ ಶಿಲ್ಪಾ ಶರ್ಮಾ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ಡಾ.ಮಲ್ಲನಗೌಡ ಎಸ್.ಪಾಟೀಲ ಇದ್ದರು.