ಲಕ್ನೋ: ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಮತ್ತು ಆತನ ಸಹೋದರನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ತನಿಖೆಗೆ ಆದೇಶಿಸಿದ್ದಾರೆ.
ಶನಿವಾರ ದರೋಡೆಕೋರ ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅವರ ಹತ್ಯೆಯ ಬಳಿಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಸೇರಿದಂತೆ ಯುಪಿ ಪೊಲೀಸ್‌ನ ಹಿರಿಯ ಅಧಿಕಾರಿಗಳ ಸಭೆಯನ್ನು ಕರೆದಿದ್ದಾರೆ.
ಲಕ್ನೋದಲ್ಲಿರುವ ಸಿಎಂ ಯೋಗಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಪೊಲೀಸ್ ಭದ್ರತೆಯ ನಡುವೆಯೇ ಈ ರೀತಿಯ ದುಷ್ಕೃತ್ಯ ನಡೆದಿರುವ ಬಗ್ಗೆ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಇಡೀ ಘಟನೆಯ ಬಗ್ಗೆ ಸಿಎಂಗೆ ಜಿಡಿಪಿ ಆರ್‌ಕೆ ವಿಶ್ವಕರ್ಮ ಮಾಹಿತಿ ನೀಡಿದ್ದಾರೆ. ಮಾಹಿತಿಯನ್ನು ಕೇಳಿದ ಬಳಿಕ ಸಿಎಂ ಯೋಗಿ ಆದಿತ್ಯನಾಥ್ ಘಟನೆಯ ಕುರಿತ ಸೂಕ್ತ ತನಿಖೆಗೆ ತ್ರಿಸದಸ್ಯ ನ್ಯಾಯಾಂಗ ಆಯೋಗವನ್ನು ರಚಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗುವ ವೇಳೆ ಮಾಧ್ಯಮದವರ ಸೋಗಿನಲ್ಲಿ ಬಂದ ಮೂವರು ಗುಂಡಿನ ದಾಳಿ ನಡೆಸಿ ಪೊಲೀಸರ ಸಮ್ಮುಖದಲ್ಲೇ ಹತ್ಯೆಗೈದಿದ್ದಾರೆ. ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಪ್ರಯೋಗ್ ರಾಜ್ ನಲ್ಲಿ ಮುಂಜಾಗ್ರತ ಕ್ರಮವಾಗಿ ಪೊಲೀಸರ ಬಿಗಿ ಭದ್ರತೆಯನ್ನು ಹೆಚ್ಚಸಲಾಗಿದ್ದು, ಯುಪಿಯ ಎಲ್ಲಾ ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.