ಶಿವಮೊಗ್ಗ: ಮುಖ್ಯಮಂತ್ರಿಯಾದ ನಂತರ ಜಿಲ್ಲೆಗೆ ಅಪಾರ ಕೊಡುಗೆ ನೀಡಿರುವ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಶೇಷ ಅಭಿನಂದನಾ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ. ಫೆ
.27ರಂದು ಯಡಿಯೂರಪ್ಪ ಅವರ ಜನ್ಮದಿನವಾಗಿದ್ದು, ಫೆ.28ರಂದು ಶಿವಮೊಗ್ಗದಲ್ಲಿ ಪಕ್ಷಾತೀತವಾಗಿ ಈ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆದಿದೆ. ಹಳೇ ಜೈಲು ಆವರಣದ ಪ್ರೀಡಂ ಪಾರ್ಕ್ ನಲ್ಲಿ ಇದಕ್ಕಾಗಿ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೆಲ್ಲ ಶಿವಮೊಗ್ಗ ಜಿಲ್ಲೆಯಲ್ಲಿ ಅಪಾರ ಅಭಿವೃದ್ಧಿ ಕಾರ್ಯಗಳು ಆಗಿವೆ. ವಿಮಾನ ನಿಲ್ದಾಣ, ಹೊಸ ರೈಲುಗಳು, ರಸ್ತೆ, ನೀರಾವರಿ, ಸಂಪರ್ಕ ಸೇರಿದಂತೆ ಹಲವು ಯೋಜನೆಗಳು ಅನುಷ್ಠಾನಗೊಂಡಿವೆ. ಅಲ್ಲದೇ ಅವರು ಈ ಬಾರಿ ಮುಖ್ಯಮಂತ್ರಿಯಾಗಿ ಒಂದೂವರೆ ವರ್ಷವಾಗುತ್ತಿದೆ. ಹಾಗಾಗಿ ವಿಶೇಷ ಅಭಿನಂದನಾ ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ.ಎಸ್. ಅರುಣ್, ರಾಜ್ಯ ಸರ್ಕಾರಿ ನೌಕರರ ರಾಜ್ಯ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಎಸ್. ದತ್ತಾತ್ರಿ ಪ್ರವಾಸೋದ್ಯಮ ಟಾಸ್ಕ್ ಫೋರ್ಸ್ ಸದಸ್ಯ ಲಕ್ಷ್ಮೀ ನಾರಾಯಣ ಕಾಶಿ, ಶಿಕ್ಷಣ ತಜ್ಞ ಎ.ಜೆ. ರಾಮಚಂದ್ರ ಸೇರಿದಂತೆ ಹಲವರನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದಿವೆ.
ಗಾಯಕರಾದ ವಿಜಯಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಅರ್ಜುನ್ ಜನ್ಯ ನೇತೃತ್ವದ ತಂಡದಿಂದ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಸಾಹಿತಿ ಯೋಗರಾಜ ಭಟ್ ಅವರು ತಮ್ಮ ಸಾಹಿತ್ಯದ ಮೂಲಕ ಅಭಿನಂದಿಸಲಿದ್ದಾರೆ. ಗಾಯಕ ವಿಜಯ ಪ್ರಕಾಶ್ ಅವರು ಅಭಿನಂದನಾ ಗೀತೆಯನ್ನೂ ಸಹ ಹಾಡಲಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರು ಯಡಿಯೂರಪ್ಪ ಅವರ ಜೀವನ ಸಾಧನೆ ಬಗ್ಗೆ ಸಾಕ್ಷಚಿತ್ರವೊಂದನ್ನು ಸಿದ್ಧಪಡಿಸಿದ್ದು ಅದೂ ಸಹ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ. 50 ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಇದನ್ನೂ ಓದಿ :ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಕಾರ್ಯಕ್ರಮ ಸ್ಥಳಕ್ಕೆ ಇಂದು ಹಲವು ಗಣ್ಯರು ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು. ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸರಣಿ ಸಭೆಗಳನ್ನು ಆಯೋಜಕರು ನಡೆಸುತ್ತಿದ್ದು, ಈ ಕಾರ್ಯಕ್ರಮವು ಅಂತಾರಾಷ್ಟ್ರೀಯ ಗುಣಮಟ್ಟದೊಂದಿಗೆ ನಡೆಯುವಂತೆ ಆಗಬೇಕೆಂಬ ದಿಸೆಯಲ್ಲಿ ಪ್ರಯತ್ನ ನಡೆಸಲಾಗಿದೆ.