ಶಿವಮೊಗ್ಗ: ರಾಜ್ಯದ ಅಭಿವೃದ್ಧಿಯ ಹರಿಕಾರ, ರೈತಪರ ಹೋರಾಟಗಾರ, ಕನ್ನಡದ ಕಣ್ಮಣಿ ಎಲ್ಲಾ ಸಮಾಜಗಳ ಪೋಷಕ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದ ಅಂಗವಾಗಿ ಫೆ.28 ರಂದು ಶಿವಮೊಗ್ಗದಲ್ಲಿ ನಡೆಯುತ್ತಿರುವ “ನಮ್ಮೊಲುಮೆಯ ಅಭಿನಂದನಾ ಕಾರ್ಯಕ್ರಮ’ಕ್ಕೆ ನಗರದ ವಿವಿಧ ಸಂಘಟನೆಗಳು ಜಾತಿಗಳ ಮುಖಂಡರು ತಮ್ಮ ಅಪಾರ ಅಭಿಮಾನವನ್ನು ತೋರಿದ್ದು, ಸುಮಾರು 20 ಕ್ಕೂ ಹೆಚ್ಚು ವಿವಿಧ ಜಾತಿಗಳ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅತ್ಯಂತ ಪ್ರೀತಿಯಿಂದ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಘೋಷಣೆ ಮಾಡಿದರು.
ವೀರಶೈವ ಸಮಾಜದ ಮುಖಂಡ ವಿ.ಸಿ.ಎಸ್.ಮೂರ್ತಿ ಮಾತನಾಡಿ, ನಮ್ಮ ಸಮಾಜಕ್ಕೆ ಅನೇಕ ಕೊಡುಗೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಅವರ ಜನ್ಮದಿನದ ಅಂಗವಾಗಿ ವಿಶೇಷ ಪೂಜೆ ಮತ್ತು ಪ್ರಸಾದ ಹಂಚುವ ಕಾರ್ಯಕ್ರಮವನ್ನು ನಮ್ಮ ಸಮಾಜದಿಂದ ಮಾಡುತ್ತಿದ್ದೇವೆ. ವಿಮಾನ ನಿಲ್ದಾಣದ ಹರಿಕಾರ ಮುಖ್ಯಮಂತ್ರಿಯವರ ಹೆಸರನ್ನೇ ವಿಮಾನ ನಿಲ್ದಾಣಕ್ಕೆ ಇಡಬೇಕು ಎಂದು ಸಲಹೆ ನೀಡಿದರು. ಸಮಾಜದ ಪ್ರಮುಖರಾದ ಎನ್.ಜೆ. ರಾಜಶೇಖರ್, ಮಹೇಶ್ವರಪ್ಪ, ಗಂಗಾಧರಯ್ಯ, ಜಗನ್ನಾಥ್ ಸೇರಿದಂತೆ ಹಲವರಿದ್ದರು. ಬಂಟರ ಸಮಾಜದ ಮುಖಂಡರು ಮಾತನಾಡಿ, ನಮ್ಮ ಸಮಾಜಕ್ಕೆ ಸುಮಾರು 2.5 ಕೋಟಿ ಹಣವನ್ನು ನೀಡಿದ್ದಾರೆ. ಈಗಾಗಲೇ ಸಮಾಜದ ಸಮುದಾಯ ಭವನ ನಿರ್ಮಾಣವಾಗುತ್ತಿದೆ. ಸುಮಾರು 5 ಸಾವಿರಕ್ಕೂ ಹೆಚ್ಚು ಬಂಟ ಸಮಾಜದವರುಕಾರ್ಯಕ್ರಮಕ್ಕೆ ಹೋಗುತ್ತಿದ್ದೇವೆ ಎಂದರು.
ಸತೀಶ್ ಕುಮಾರ್ ಶೆಟ್ಟಿ, ಮಹೇಶ್ ಶೆಟ್ಟಿ, ಪುಷ್ಪಶೆಟ್ಟಿ ಸೇರಿದಂತೆ ಹಲವರಿದ್ದರು. ಅಲ್ಪಸಂಖ್ಯಾತ ಮುಖಂಡರು ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದುಲ್ ಘನಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಮುಸ್ಲಿಮರಿಗೆ ಆದ್ಯತೆ ಸಿಕ್ಕಿದೆ. ಅವರ ಜನ್ಮದಿನದ ಅಂಗವಾಗಿ ಫೆ. 28ರಂದು ಬೆಳಗ್ಗೆ 10 ಗಂಟೆಗೆ ಮಸೀದಿಯಲ್ಲಿ ವಿಶೇಷ ಪೂಜೆನೆರವೇರಿಸಲಾಗುವುದು ಮತ್ತು ಜನ್ಮದಿನದ ಕಾರ್ಯಕ್ರಮಕ್ಕೆ ಅಪಾರ ಪ್ರಮಾಣದಲ್ಲಿ ಮುಸ್ಲಿಂ ಬಾಂಧವರು ಭಾಗವಹಿಸಲಿದ್ದೇವೆ ಎಂದರು.
ಮನ್ಸೂರ್, ಸೈಯದ್ ಜಮೀರ್ ಅಹಮ್ಮದ್, ಪಾಷ, ನೂರ್ ಅಹಮ್ಮದ್ ಸೇರಿದಂತೆ ಹಲವರಿದ್ದರು. ಆರ್ಯವೈಶ್ಯ ಸಮಾಜದ ಮುಖಂಡ ಡಿ.ಎಸ್. ಅರುಣ್ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ಸಮಾಜಕ್ಕಾಗಿ ಪ್ರತ್ಯೇಕ ನಿಗಮವನ್ನೇ ಮಾಡಿದರು. 1 ಕೋಟಿ ರೂ. ಅನುದಾನ ನೀಡಿದ್ದಾರೆ. ಎಲ್ಲಾ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅವರ ಅಭಿನಂದನಾ ಕಾರ್ಯಕ್ರಮಕ್ಕೆ ಭಾಗವಹಿಸುವುದೇ ಒಂದು ಹೆಮ್ಮೆಯಾಗಿದೆ ಎಂದರು.
ಜಿಲ್ಲಾ ಬ್ರಾಹ್ಮಣ ಸಮಾಜದ ಮುಖಂಡ ಮ.ಸ. ನಂಜುಂಡಸ್ವಾಮಿ ಮಾತನಾಡಿ, ಜನಪ್ರಿಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಬ್ರಾಹ್ಮಣ ಸಮಾಜಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಅವರ ಜನ್ಮದಿನದ ಅಂಗವಾಗಿ ನಗರದ ಎಲ್ಲಾ ದೇವಾಲಯಗಳಲ್ಲಿ ಅವರ ಆಯಸ್ಸು ಹೆಚ್ಚಲು ಮತ್ತು ಅಡೆತಡೆಯಿಲ್ಲದೆ ಅ ಧಿಕಾರ ನಿರ್ವಹಿಸಲು ಕೋರಿ ವಿಶೇಷ ಪೂಜೆ ಸಲ್ಲಿಸಲಾಗುವುದು ಎಂದರು. ಎಸ್. ದತ್ತಾತ್ರಿ, ಮಧುಸೂದನ್, ಎಂ. ಶಂಕರ್, ವೇಣುಗೋಪಾಲ್, ಸುಮಿತ್ರಮ್ಮ ಸೇರಿದಂತೆ ಹಲವರಿದ್ದರು. ಛತ್ರಪತಿ ಶಿವಾಜಿ ಮರಾಠಾ ಸಮಾಜದ ಮುಖಂಡ ರಮೇಶ್ ಬಾಬು ಜಾದವ್ ಮಾತನಾಡಿ, ನಮ್ಮ ಸಮಾಜದಿಂದಲೂ ಕೂಡ ಅವರ ಹುಟ್ಟುಹಬ್ಬಕ್ಕೆ ಶುಭಾಷಯಗಳು. ನೂರಾರು ಸಂಖ್ಯೆಯಲ್ಲಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ ಎಂದರು. ಸುರೇಶ್, ಚಂದ್ರರಾವ್, ದಿನೇಶ್ ಚೌಹಾಣ್ ಸೇರಿದಂತೆ ಹಲವರಿದ್ದರು.
ಇನ್ನುಳಿದಂತೆ ಗೌಡ ಸಾರಸ್ವತ ಸಮಾಜದ ದೇವದಾಸ್ ನಾಯ್ಕ, ಬಾಹುಸಾರ ಕ್ಷತ್ರಿಯ ಸಮಾಜದ ಸುರೇಶ್, ಮೊಘವೀರ ಹಾಗೂ ಗಂಗಾಮತ ಸಂಘದ ಕೆ.ವಿ. ಅಣ್ಣಪ್ಪ, ದೇವಾಂಗ ಸಮಾಜದ ರಾಜೇಶ್, ಭೋವಿ ಸಮಾಜದ ವೀರಭದ್ರಪ್ಪ ಪೂಜಾರ್, ತಮಿಳು ಸಮಾಜದ ಎನ್. ಮಂಜುನಾಥ್, ಸಾಧುಶೆಟ್ಟಿ ಸಮಾಜದ ವಿ.ರಾಜು, ಈಡಿಗ ಸಮಾಜದ ದೇವಪ್ಪ, ಕ್ರಿಶ್ಚಿಯನ್ ಸಮಾಜದ ಯೇಸುದಾಸ್, ರೆಡ್ಡಿ ಸಮಾಜದ ಶ್ರೀನಿವಾಸ್ ಮತ್ತು ಮೋಹನ್ ರೆಡ್ಡಿ, ವಾಲ್ಮೀಕಿ ಸಮಾಜದ ನಾಗರಾಜ್, ಯಾದವ್ ತಮಿಳು ಸಮಾಜದ ರವಿಚಂದ್ರ, ನಾಮದೇವ ಸಮಾಜದ ಸತೀಶ್ ಸೇರಿದಂತೆ ವಿವಿಧ ಸಮಾಜದ ಮುಖಂಡರು ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದಲ್ಲದೆ ತಮ್ಮ ತಮ್ಮ ಸಮಾಜಕ್ಕೆ ನೀಡಿದ ಕೊಡುಗೆಯನ್ನು ತಿಳಿಸಿದರು ಮತ್ತು ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.