Advertisement

23 ಸಾವಿರ ರೈತರ ಮಕ್ಕಳಿಗೆ ಸಿಎಂ ವಿದ್ಯಾನಿಧಿ…ಏನಿದು ಯೋಜನೆ?

04:49 PM Feb 12, 2022 | Team Udayavani |

ಬಾಗಲಕೋಟೆ: ರೈತರ ಮಕ್ಕಳು ರೈತರಾಗದೇ ಅವರೂ ಉನ್ನತ ಶಿಕ್ಷಣ ಪಡೆಯಲಿ ಎಂಬ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ, ಜಿಲ್ಲೆಯಲ್ಲಿ ಬಹುತೇಕ ಯಶಸ್ವಿಯಾಗಿದೆ. ಹೌದು, ಈ ಯೋಜನೆಯಡಿ ಜಿಲ್ಲೆಯ 9 ತಾಲೂಕು ವ್ಯಾಪ್ತಿಯಲ್ಲಿ 23,690 ಜನ ರೈತ ಮಕ್ಕಳಿಗೆ ತಲುಪಿದೆ. ಅಷ್ಟೂ ಮಕ್ಕಳ ಪಾಲಕ ರೈತರ ಖಾತೆಗೆ ರಾಜ್ಯ ಸರ್ಕಾರ ಬರೋಬ್ಬರಿ 5.849 ಕೋಟಿ ಶಿಷ್ಯ ವೇತನ ಹಣವನ್ನು ಪಾವತಿಸಲಾಗಿದೆ.

Advertisement

ಏನಿದು ಯೋಜನೆ?: ರೈತರ ಮಕ್ಕಳು ಬಹುತೇಕ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವರೆಗೆ ಮಾತ್ರ ಶಿಕ್ಷಣ ಪಡೆದು, ಮುಂದೆ ಒಕ್ಕಲುತನದ ಜವಾಬ್ದಾರಿವೊಡ್ಡುವುದು ಸಾಮಾನ್ಯ. ಆರ್ಥಿಕ ಸಮಸ್ಯೆ, ಕಲಿಕೆಗೆ ಪ್ರೋತ್ಸಾಹ ಇಲ್ಲದೇ ರೈತರ ಮಕ್ಕಳು ರೈತರೇ ಆಗುವುದು ಬಹುತೇಕ ಪರಂಪರೆ. ಇದನ್ನು ಗಮನಿಸಿದ ಸರ್ಕಾರ, ರೈತರ ಮಕ್ಕಳೂ ಉನ್ನತ ಶಿಕ್ಷಣ ಕಲಿಯಲಿ ಎಂಬ ಸದುದ್ದೇಶದಿಂದ ಹೊಸ ಯೋಜನೆ ರೂಪಿಸಿ ಜಾರಿಗೊಳಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೊಸದಾಗಿ ಜಾರಿಗೊಳಿಸಿದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಗೆ ವಿಶೇಷ ಆಸಕ್ತಿ ಹಾಗೂ ಒತ್ತು ಕೂಡ ನೀಡಿದ್ದಾರೆ. ಈ ಯೋಜನೆಯಡಿ 2021-22ನೇ ಸಾಲಿನಲ್ಲಿ ಜಿಲ್ಲೆಯ 23,690 ಜನ ವಿದ್ಯಾರ್ಥಿಗಳಿಗೆ ತಲುಪಬೇಕಿದ್ದ 5.849 ಕೋಟಿ ಅನುದಾನ ಒದಗಿಸಿದ್ದು, ಅದು ರೈತರ ಖಾತೆಗೆ ನೇರವಾಗಿ ಜಮೆ ಕೂಡ ಆಗಿದೆ.

ಮೊದಲನೆಯ ಹಂತದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಕಲ್ಪಿಸಲಾಗಿದೆ. ಈ ಶಿಷ್ಯ ವೇತನ 8ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೂ ಕೂಡ ತಲಾ 2 ಸಾವಿರದಂತೆ ದೊರೆಯಲಿದೆ.

ಷರತ್ತು ಏನು: ರೈತರ ಮಕ್ಕಳು ಈ ಶಿಷ್ಯ ವೇತನ ಪಡೆಯಲು ದೊಡ್ಡ ಷರತ್ತುಗಳೇನೂ ಇಲ್ಲ. ವಿದ್ಯಾರ್ಥಿಗಳ ತಂದೆ-ತಾಯಿ ಹೆಸರಿನಲ್ಲಿ ಭೂಮಿ ಹೊಂದಿರಬೇಕು. ತಂದೆ ಅಥವಾ ತಾಯಿ ರೈತರ ಗುರುತಿನ ಸಂಖ್ಯೆ (ಎಫ್‌ ಐಡಿ) ಹೊಂದಿದ್ದರೆ ಸಾಕು. ಈ ಎರಡು ಷರತ್ತು ಬಿಟ್ಟರೆ, ಯೋಜನೆಯ ಲಾಭ ಪಡೆಯಲು ಬೇರೇನೂ ಷರತ್ತು ಸರ್ಕಾರ ಹಾಕಿಲ್ಲ. ಹೀಗಾಗಿ ಭೂಮಿ ಮತ್ತು ಗುರುತಿನ ಚೀಟಿ ಹೊಂದಿದ ಬಹುತೇಕ ರೈತರ ಮಕ್ಕಳಿಗೆ ಈ
ಯೋಜನೆಯ ಲಾಭ ದೊರೆಯುತ್ತದೆ. ರಾಜ್ಯ ಸರ್ಕಾರ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ವಿವಿಧ ಹಂತದ ಶಿಷ್ಯ ವೇತನ ನೀಡುತ್ತಿದೆ. ಪಿಯುಸಿ, ಐಟಿಐ, ಡಿಪ್ಲೋಮಾದ ವಿದ್ಯಾರ್ಥಿಗಳಿಗೆ ತಲಾ 2500 ಹಾಗೂ ವಿದ್ಯಾರ್ಥಿನಿಯರಿಗೆ 3 ಸಾವಿರ, ಬಿಎ, ಬಿಎಸ್ಸಿ, ಬಿ.ಕಾಂ ಇನ್ನಿತರೆ ಪದವಿ ವಿದ್ಯಾರ್ಥಿಗಳಿಗೆ ತಲಾ 5 ಸಾವಿರ, ವಿದ್ಯಾರ್ಥಿನಿಯರಿಗೆ ತಲಾ 5500, ಎಲ್‌ಎಲ್‌ಬಿ, ಪ್ಯಾರಾ ಮೆಡಿಕಲ್‌, ಬಿ.ಫಾ ರ್ಮ್, ನರ್ಸಿಂಗ್‌ ಇನ್ನಿತರೆ ವೃತ್ತಿಪರ ಕೋಸ್‌ಗಳ ವಿದ್ಯಾರ್ಥಿಗಳಿಗೆ ತಲಾ 7500, ವಿದ್ಯಾರ್ಥಿನಿಯರಿಗೆ ತಲಾ 8 ಸಾವಿರ, ಎಂಬಿಬಿಎಸ್‌, ಬಿ.ಇ, ಬಿ.ಟೆಕ್‌ ಮತ್ತು ಎಲ್ಲ ಸ್ನಾತಕೋತ್ತರ ಕೋರ್ಸ್‌ ಗಳ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ, ವಿದ್ಯಾರ್ಥಿನಿಯರಿಗೆ ತಲಾ 11 ಸಾವಿರ ಶಿಷ್ಯ ವೇತನ ನೀಡಲಾಗುತ್ತದೆ.

Advertisement

ಯಾವ ತಾಲೂಕಿಗೆ ಎಷ್ಟು ವಿದ್ಯಾರ್ಥಿಗಳು?:
ಹೊಸದಾಗಿ ರಚನೆಗೊಂಡ ಇಳಕಲ್ಲ (ಹುನಗುಂದ), ಗುಳೇದಗುಡ್ಡ (ಬಾದಾಮಿ), ರಬಕವಿ-ಬನಹಟ್ಟಿ (ಜಮಖಂಡಿ) ತಾಲೂಕುಗಳೂ ಸೇರಿ ಒಟ್ಟು 6 (ಹಳೆಯ ತಾಲೂಕಿನಡಿ ವಿವರ ನೀಡಲಾಗಿದೆ) ತಾಲೂಕಿನ ವಿದ್ಯಾರ್ಥಿಗಳೂ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಅದರಲ್ಲಿ ಬಾದಾಮಿ-3364 ವಿದ್ಯಾರ್ಥಿಗಳು (ರೂ.79,77,000), ಬಾಗಲಕೋಟೆ-4019 ವಿದ್ಯಾರ್ಥಿಗಳು (ರೂ.1,01,36,500), ಹುನಗುಂದ-3767 ವಿದ್ಯಾರ್ಥಿಗಳು (ರೂ.91,85,500), ಬೀಳಗಿ-1937 (ರೂ.47,14,500), ಜಮಖಂಡಿ-6766 (ರೂ.1,72,07,500) ಹಾಗೂ ಮುಧೋಳ-3837 (ರೂ.92,48,000) ಸೇರಿ ಒಟ್ಟು 23,690 ವಿದ್ಯಾರ್ಥಿಗಳಿಗೆ ಒಟ್ಟು 5,84,69,000 ರೂ. ವಿದ್ಯಾರ್ಥಿಗಳು ಶಿಷ್ಯವೇತನ ಪಡೆದಿದ್ದಾರೆ.

ಮುಖ್ಯಮಂತ್ರಿ ವಿದ್ಯಾನಿಧಿ
ಯೋಜನೆಯಡಿ ರೈತ ಮಕ್ಕಳ ಶಿಷ್ಯ ವೇತನ ಯೋಜನೆಯಡಿ ಜಿಲ್ಲೆಯ 23690 ವಿದ್ಯಾರ್ಥಿಗಳಿಗೆ 5.849 ಕೋಟಿ ಜಮೆ ಆಗಿದೆ. ಮೊದಲ ಹಂತದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಕಲ್ಪಿಸಲಾಗಿದೆ. 8ರಿಂದ 10ನೇ ತರಗತಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರಿಗೆ ಕೂಡ ತಲಾ ರೂ. 2 ಸಾವಿರ ಶಿಷ್ಯ ವೇತನ ದೊರೆಯಲಿದೆ. ಜಿಲ್ಲೆಯ ವಿದ್ಯಾರ್ಥಿಗಳು ಇದರ ಲಾಭ ಪಡೆಯಬೇಕು.
ಡಾ|ಚೇತನಾ ಪಾಟೀಲ,
ಜಂಟಿ ಕೃಷಿ ನಿರ್ದೇಶಕಿ, ಕೃಷಿ ಇಲಾಖೆ

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next