ವಿಜಯಪುರ: ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್, ಜಮೀರ್ ಅಹ್ಮದ್ ಸೇರಿದಂತೆ ಕಾಂಗ್ರೇಸ್ ನಾಯಕರ ವಿರುದ್ಧ ಮಾತನಾಡುವವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಿ.ಎಂ. ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೇಲಿಂದ ಮೇಲೆ ಸಚಿವರ ಖಾತೆ ಬದಲಾವಣೆ ಮಾಡುತ್ತಿರುವುದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಎಂದರು, ಅಲ್ಲದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ವೇಳೆ ವಿಧಾನಸಭೆಯಲ್ಲಿ ಸಮರ್ಥವಾಗಿ ವಾದ ಮಂಡಿಸಿದವರು ಮಾಧುಸ್ವಾಮಿ, ಅಧಿವೇಶನದ ವೇಳೆ ವಿರೋಧ ಪಕ್ಷದವರನ್ನು ಹಾಗೂ ಡಿಕೆ ಶಿವಕುಮಾರ್ ಮಾತನಾಡದಂತೆ ಬಾಯಿ ಕಟ್ಟಿ ಹಾಕಿದ್ದರು. ಆದರೆ ಡಿಕೆ ಶಿವಕುಮಾರ್, ಜಮೀರ್ ಅಹ್ಮದ್ ಖಾನ್, ಸಿದ್ದರಾಮಯ್ಯ, ಜಾರ್ಜ್ ವಿರುದ್ಧ ಮಾತನಾಡಿದವರನ್ನು ಸಿಎಂ ಮುಗಿಸಲು ಮುಂದಾಗಿರುವುದು ದುರ್ದೈವದ ಸಂಗತಿ ಎಂದರು.
ಸಿಎಂ ಹಾಗೂ ವಿರೋಧ ಪಕ್ಷದವರು ಪಾರ್ಟ್ನರ್ಸ್, ಈ ಬಗ್ಗೆ ಎಲ್ಲರಿಗೂ ಅಸಮಾಧಾನವಿದೆ. ಕಾಲ ಬದಲಾಗುತ್ತದೆ ನೋಡ್ತಾ ಇರಿ. ಇದೆಲ್ಲ ಬೆಳವಣಿಗೆ ಉತ್ತರಾಯಣದಿಂದಲೇ ಆರಂಭವಾಗಿದೆ. ಯುಗಾದಿಗೆ ಕೊನೆಗೊಳ್ಳುತ್ತದೆ ಎಂದು ಭವಿಷ್ಯ ನುಡಿದರು.
ಇದನ್ನೂ ಓದಿ:ಕೊಲಂಬಿಯಾದ ರಕ್ಷಣಾ ಸಚಿವ ಕಾರ್ಲೋಸ್ ಕೋವಿಡ್ 19ಗೆ ಬಲಿ
ನನ್ನ ಮೇಲಿನ ದ್ವೇಷದಿಂದ ಸಿಎಂ ಯಾವುದೇ ಅಧಿಕಾರಿಗಳನ್ನು ಬದಲಾವಣೆ ಮಾಡಿದರೂ ಚಿಂತೆಯಿಲ್ಲ. ನನ್ನ ಮೇಲೆ ಯಾವುದೇ ಭ್ರಷ್ಟಾಚಾರವಿಲ್ಲ ಭ್ರಷ್ಟಾಚಾರ ಇದ್ದರೆ ಮಾತ್ರ ನಾನು ಭಯ ಪಡಬೇಕಾಗಿತ್ತು. ನೂರು ಇಂಟಲಿಜನ್ಸ್ ಗಳನ್ನು ಬಿಟ್ಟರೂ ನನಗೆ ಏನೂ ಆಗುವುದಿಲ್ಲ. ತಪ್ಪು ಮಾಡದ ವ್ಯಕ್ತಿಗೆ ಭಯವೇ ಇರುವುದಿಲ್ಲ ಎಂದು ಸಿಎಂ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಜಿಲ್ಲಾ ಉಸ್ತುವಾರಿ ಸಚಿವರನ್ನು ಪದೇಪದೆ ಬದಲಾವಣೆ ಮಾಡುವುದು ಸರಿಯಲ್ಲ. ಯಾರನ್ನ ಬೇಕಾದರೂ ಬದಲಾವಣೆ ಮಾಡಿಕೊಳ್ಳಲು ಕಡೆಯ ಜಾತ್ರೆ ಇದೆ ಪಡೆಯಲಿ ಎಂದು ಉತ್ತರ ಕರ್ನಾಟಕ ಶೈಲಿಯಲ್ಲಿ ಹೇಳಿದರು.