Advertisement

ಪಡುವಾರಹಳ್ಳಿಗೆ ಭೇಟಿ ನೀಡಿ ಸಿಎಂ ಸಿದ್ದರಾಮಯ್ಯ ಪರಿಶೀಲನೆ

12:57 PM Oct 17, 2017 | Team Udayavani |

ಮೈಸೂರು: ಸ್ವಾಮಿ, ಮಳೆ, ಮೋಡ ನೋಡಿದರೆ ಭಯ ಆಗುತ್ತೆ. ದಯವಿಟ್ಟು ನಮ್ಮ ಸಮಸ್ಯೆಗೆ ಪರಿಹಾರ ಕೊಡಿ… ಹೀಗೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ಅಳಲು ತೋಡಿಕೊಂಡಿದ್ದು, ನಗರದ ಪಡುವಾರಹಳ್ಳಿ ನಿವಾಸಿಗಳು.

Advertisement

ಕಳೆದ ಕೆಲವು ದಿನಗಳ ಹಿಂದಷ್ಟೇ ಸುರಿದ ಭಾರೀ ಮಳೆಯಿಂದಾಗಿ ಹಾನಿಗೊಳಗಾಗಿದ್ದ ಹಿನ್ನೆಲೆಯಲ್ಲಿ ಸೋಮವಾರ ಪಡುವಾರಹಳ್ಳಿಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ, ಅಲ್ಲಿನ ಪರಿಸ್ಥಿತಿಯ ಅವಲೋಕನ ನಡೆಸಿದರು. ಪ್ರಮುಖವಾಗಿ ಮಳೆ ನೀರಿನಿಂದ ಸಂಪೂರ್ಣವಾಗಿ ಜಲಾವೃತಗೊಂಡಿದ್ದ ಪ್ರದೇಶಗಳಲ್ಲಿನ ಮನೆಗಳಿಗೆ ತೆರಳಿದ ಸಿಎಂ, ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.  

ಪರಿಸ್ಥಿತಿ ಕಂಡು ಕಳವಳ: ಪಡುವಾರಹಳ್ಳಿಯ ಮಹದೇಶ್ವರ ದೇವಸ್ಥಾನ ರಸ್ತೆಯಲ್ಲಿನ ಸ್ಥಳೀಯರಾದ ನಂಜುಂಡ, ಶಕುಂತಲಾ, ಗೌರಮ್ಮ ಬಸವರಾಜು, ಛಾಯಾರತಿ ಹಾಗೂ ಜಯಮ್ಮ ಅವರ ಮನೆಗಳಿಗೆ ತೆರಳಿದ ಸಿದ್ದರಾಮಯ್ಯ, ಪರಿಸ್ಥಿತಿ ಕಂಡು ಕಳವಳ ವ್ಯಕ್ತಪಡಿಸಿದರು. ಮಳೆಯಿಂದಾಗಿ ದಿನನಿತ್ಯದ ವಸ್ತುಗಳು ಹಾನಿ ಕುರಿತು ಸಾರ್ವಜನಿಕರು ಅಳಲು ತೋಡಿಕೊಂಡರು.    

ಮೋಡ ಬಿತ್ತನೆಗೆ ಸಂಬಂಧವಿಲ್ಲ: ಬೆಂಗಳೂರಿನಲ್ಲಿ ಕಳೆದ 110 ವರ್ಷದಲ್ಲಿ ಈ ಪ್ರಮಾಣದ ಮಳೆ ಸುರಿದಿರಲಿಲ್ಲ.  ರಾಜ್ಯದಲ್ಲಿ ಸುರಿಯುತ್ತಿರುವ ಮಳೆಗೂ ಮೋಡಬಿತ್ತನೆಗೂ ಸಂಬಂಧವಿಲ್ಲ. ಬೆಂಗಳೂರಿನ ಕೆಲವೆಡೆ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ನೀರು ಮನೆಗಳಿಗೆ ನುಗ್ಗಿ ಸಮಸ್ಯೆಯಾಗುತ್ತಿದೆ ಎಂದು ಯುವಕನೊಬ್ಬ ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಅತ್ಯಂತ ಖಾರವಾಗಿ ಪ್ರತಿಕ್ರಿಯಿಸಿದರು.

ವಾಸನೆಯೆಂದು ಹೊರ ಬಂದರು: ಪಡುವಾರಹಳ್ಳಿಯಲ್ಲಿ  ಪರಿಶೀಲನೆಗೆಂದು ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ, ಸ್ಥಳೀಯ ನಿವಾಸಿ ಶಕುಂತಲಾ ಎಂಬುವವರ ಮನೆಗೆ ತೆರಳಿದ್ದ ವೇಳೆ ಕೆಟ್ಟವಾಸನೆ ತಾಳಲಾರದೆ ಮನೆಯಿಂದ ಹೊರಬಂದರು.  

Advertisement

ಕನಕಗಿರಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು, ಬಾಕ್ಸ್‌ ಚರಂಡಿ ನಿರ್ಮಾಣ ಮಾಡುವ ಸಂಬಂಧ 2.5 ಕೋಟಿ ಅನುದಾನ ನೀಡಲಿದ್ದು, ಮಂಗಳವಾರದಿಂದಲೇ ಕಾಮಗಾರಿ ಆರಂಭಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಶಾಸಕ ವಾಸು, ಎಂ.ಕೆ.ಸೋಮಶೇಖರ್‌, ಜಿಪಂ ಸದಸ್ಯ ರಾಕೇಶ್‌ ಪಾಪಣ್ಣ, ಜಿಲ್ಲಾಧಿಕಾರಿ ರಂದೀಪ್‌ ಡಿ., ಪಾಲಿಕೆ ಆಯುಕ್ತ ಜಿ.ಜಗದೀಶ್‌, ಪಾಲಿಕೆ ಅಧೀಕ್ಷಕ ಎಂಜಿನಿಯರ್‌ ಸುರೇಶ್‌ಬಾಬು ಮತ್ತಿತರರಿದ್ದರು.  

3800 ರೂ., ಪರಿಹಾರಕ್ಕೆ ಸೂಚನೆ: ಭಾರೀ ಮಳೆಯಿಂದ ಮನೆಗೆ ನೀರು ನುಗ್ಗಿ ದವಸ-ಧಾನ್ಯಗಳು ಹಾಳಾಗಿರುವ ಕುಟುಂಬದವರಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿ ಅನ್ವಯ ತಲಾ 3800 ರೂ. ಪರಿಹಾರ ನೀಡಿ. ಭಾರೀ ಮಳೆಯಿಂದ ಕನಕಗಿರಿ 119 ಮನೆ, ಪಡುವಾರಹಳ್ಳಿ 28 ಮನೆಗಳಲ್ಲಿ 5 ಅಡಿಗೂ ಹೆಚ್ಚು ನೀರು ತುಂಬಿ ಹಾನಿಗೊಳಗಾಗಿತ್ತು. ಈ ಸಂಬಂಧ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ನೀಡಿ. ಹೆಚ್ಚಿನ ಪರಿಹಾರದ ಅವಶ್ಯಕತೆ ಬಿದ್ದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next