ಬೆಂಗಳೂರು: ಕೇಂದ್ರ ಸರಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡುವಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಫೆಬ್ರವರಿ 7 ರಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಶುಕ್ರವಾರ ಹೇಳಿದ್ದಾರೆ.
‘ಅನ್ಯಾಯ’ದ ವಿರುದ್ಧ ದೆಹಲಿಯಲ್ಲಿ ಕಾಂಗ್ರೆಸ್ ಧರಣಿಯ ನೇತೃತ್ವವನ್ನು ಸಿಎಂ ಸಿದ್ದರಾಮಯ್ಯ ವಹಿಸಲಿದ್ದಾರೆ. 138 ಶಾಸಕರು, ರಾಜ್ಯದ ಕಾಂಗ್ರೆಸ್ ಸಂಸದರು, ವಿಧಾನ ಪರಿಷತ್ ಸದಸ್ಯರು ಧರಣಿಯಲ್ಲಿ ಭಾಗಿಯಾಗಲಿದ್ದಾರೆ.
“ನಾವೆಲ್ಲರೂ ಫೆಬ್ರವರಿ 6 ರಂದು ದೆಹಲಿ ತಲುಪಲಿದ್ದು, ಫೆ.7 ರಂದು ಪ್ರತಿಭಟನೆ ನಡೆಸಲಿದ್ದೇವೆ. ಕೇಂದ್ರ ಸರಕಾರ ನಮ್ಮ ಧ್ವನಿಯನ್ನು ಕೇಳಬೇಕೆಂದು ನಾವು ಬಯಸುತ್ತೇವೆ” ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜಕೀಯ ಭಿನ್ನಾಭಿಪ್ರಾಯ ಹಾಗೂ ಪಕ್ಷ ಭೇದ ಬದಿಗಿಟ್ಟು ಎಲ್ಲ ಸಂಸದರು ಧರಣಿಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಧರಣಿ ನಡೆಸಲು ಅನುಮತಿ ಕೋರಿ ದೆಹಲಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ಧರಣಿಗೆ ಕಾರಣ ವಿವರಿಸಿದ ಡಿ.ಕೆ.ಶಿವಕುಮಾರ್ , ಕಳೆದ ಐದು ವರ್ಷಗಳಲ್ಲಿ ನಮ್ಮ ಪಾಲಿನ 62,000 ಕೋಟಿ ರೂಪಾಯಿ ಹಣ ನಮಗೆ ತಲುಪಿಲ್ಲ. ಕೇಂದ್ರದ ಅನುದಾನದಲ್ಲಿ ಕರ್ನಾಟಕದ ಪಾಲಿನ ಈ ಕಡಿತವು ‘ಡಬಲ್ ಇಂಜಿನ್’ ಸರ್ಕಾರದ ಅವಧಿಯಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ನಡೆದಿದೆ. ಕರ್ನಾಟಕದ 236 ತಾಲೂಕುಗಳಲ್ಲಿ 200 ಕ್ಕೂ ಹೆಚ್ಚು ತಾಲೂಕುಗಳು ತೀವ್ರ ಬರಗಾಲದಿಂದ ತತ್ತರಿಸುತ್ತಿವೆ ಆದರೆ ಕೇಂದ್ರವು ರಾಜ್ಯಕ್ಕೆ ಯಾವುದೇ ಪರಿಹಾರವನ್ನು ಮಂಜೂರು ಮಾಡಿಲ್ಲ.ಈ ಸಂದರ್ಭದಲ್ಲಿ ರಾಜ್ಯದ ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದರು.