ಮೈಸೂರು: ವಿಪಕ್ಷಗಳ ಬಾಯಿಗೆ ಆಹಾರವಾಗಿರುವ ಮುಡಾ ಬಹುಕೋಟಿ ರೂಪಾಯಿ ಹಗರಣದಿಂದ ವಿಚಲಿತರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ಶನಿವಾರ ಬೆಳಗ್ಗೆ ಮುಡಾ ಅಧ್ಯಕ್ಷ ಕೆ. ಮರೀಗೌಡರ ಜತೆ 15 ನಿಮಿಷ ಕಾಲ ಗುಪ್ತ ಮಾತುಕತೆ ನಡೆಸಿದರು.
ಶುಕ್ರವಾರವಷ್ಟೇ ವಿಪಕ್ಷಗಳ ಆರೋಪಕ್ಕೆ ಪ್ರತಿಯಾಗಿ ವಿಧಾನಸೌಧದಲ್ಲಿ ದಾಖಲೆ ಬಿಡುಗಡೆ ಮಾಡಿದ್ದ ಸಿದ್ದರಾಮಯ್ಯ ಸಂಜೆ ಮೈಸೂ ರಿಗೆ ಆಗ ಮಿಸಿದ್ದರು. ಶನಿವಾರ ಬೆಳಗ್ಗೆ ಮುಡಾ ಅಧ್ಯಕ್ಷರನ್ನು ಮನೆಗೆ ಕರೆಸಿಕೊಂಡು ಎಲ್ಲರನ್ನೂ ಹೊರಗೆ ಕಳಿಸಿ ಚರ್ಚಿಸಿದರು.
ಮುಡಾ ನಿವೇಶನ ಹಂಚಿಕೆ, ಶೇ. 50:50 ಅನುಪಾತದಲ್ಲಿ ಆಗಿರುವ ನಿವೇಶನ ಹಂಚಿಕೆಯಲ್ಲಿ ವಿಪಕ್ಷಗಳ ಯಾವ್ಯಾವ ನಾಯಕರು ನಿಯಮ ಬಾಹಿರವಾಗಿ ನಿವೇಶನ ಪಡೆದಿದ್ದಾರೆ ಎಂಬೆಲ್ಲ ಮಾಹಿತಿಯನ್ನು ಪಡೆದಿದ್ದಾರೆ ಎನ್ನಲಾಗಿದೆ. ಜತೆಗೆ ತನ್ನ ಪತ್ನಿಗೆ ಹಂಚಿಕೆಯಾಗಿರುವ ನಿವೇಶನ ಸಂಬಂಧ ಯಾರೂ ಅನಗತ್ಯವಾಗಿ ಮಾಧ್ಯಮದವರ ಮುಂದೆ ಹೇಳಿಕೆ ನೀಡ ದಂತೆ ಸೂಚಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಮಾಧ್ಯಮಗಳಿಂದ ದೂರ
ಸಿದ್ದರಾಮಯ್ಯ ಶನಿವಾರ ಬೆಳಗ್ಗೆ 11ಕ್ಕೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಬೇಕಿತ್ತಾದರೂ ಅವಧಿಗೂ ಮುನ್ನವೇ ನಿರ್ಗಮಿಸಿದರು. ಮಾತನಾಡಿಸಲು ಕಾಯುತ್ತಿದ್ದ ಸುದ್ದಿಗಾರರನ್ನು ನೋಡಿಯೂ ನೋಡದಂತೆ ಹೋದರು.