Advertisement

CM Siddaramaiah: ನಗರ ಸುತ್ತಿ ಆಡಳಿತ ವ್ಯವಸ್ಥೆಗೆ ಬಿಸಿ ಮುಟ್ಟಿಸಿದ ಸಿಎಂ

10:04 AM Sep 13, 2024 | Team Udayavani |

ಬೆಂಗಳೂರು: ರಾಜಧಾನಿಯ ರಸ್ತೆಗುಂಡಿಗಳ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಸಚಿವ ಸಂಪುಟದ ಸಹೋದ್ಯೋಗಿಗಳ ಜತೆಗೂಡಿ ನಗರಪ್ರದಕ್ಷಿಣೆ ಹಾಕಿದರು. ಆ ಮೂಲಕ ಜಡ್ಡು ಹಿಡಿದು ಕುಳಿತಿರುವ ಆಡಳಿತ ಯಂತ್ರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದರು. ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಬಿಡಿಎ, ಮೆಟ್ರೋ, ಕೆಪಿಟಿಸಿಎಲ್‌, ನಗರಾಭಿವೃದ್ಧಿ ಇಲಾಖೆಗಳ ಕಾಮಗಾರಿಗಳ ಪರಿವೀಕ್ಷಣೆ ನಡೆಸಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.

Advertisement

ಹವಾನಿಯಂತ್ರಿತ ಬಸ್‌ನಲ್ಲಿ ವಿಧಾನಸೌಧದ ಮೂಲಕ ನಗರ ಪರಿವೀಕ್ಷಣೆ ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜಭವನ ರಸ್ತೆ ಮೂಲಕ ಸಾಗಿದರು. ಚಾಲುಕ್ಯ ವೃತ್ತ, ಹೈಗ್ರೌಂಡ್‌ ಸರ್ಕಲ್‌ ಮೂಲಕ ಬಳ್ಳಾರಿ ರಸ್ತೆಯತ್ತ ಮುಖ ಮಾಡಿದರು. ಅಲ್ಲಿಂದ ಮೇಖ್ರೀ ಸರ್ಕಲ್‌ ಮೂಲಕ ಸಾಗಿ ಸರ್ವೀಸ್‌ ರಸ್ತೆಯತ್ತ ಸಾಗಿದರು. ಹೆಬ್ಟಾಳ ಕೆಳಸೇತುವೆ ಬಳಿ ಸೇತುವೆ ಕಾಮಗಾರಿಯ ಪರಿವೀಕ್ಷಣೆ ನಡೆಸಿದರು. ಹೆಣ್ಣೂರು ಜಂಕ್ಷನ್‌ ಬಳಿ ರಸ್ತೆ ಡಾಂಬರೀಕರಣದ ಬಗ್ಗೆ ಮಾಹಿತಿ ಕಲೆಹಾಕಿದರು. ಹೊರವರ್ತುಲ ರಸ್ತೆಯ ಕರಿಯಣ್ಣನ ಪಾಳ್ಯದ ಬಳಿಯ ಸರ್ವೀಸ್‌ ರಸ್ತೆಯಲ್ಲಿ ಡಾಂಬರೀಕರಣ ಕೆಲಸದ ಪ್ರಗತಿ ವೀಕ್ಷಣೆ ಮಾಡಿದರು. ನಂತರ ಕೆ.ಆರ್‌.ಪುರಂ ನತ್ತ ಸಾಗಿ ಮೆಟ್ರೋ ಕಾಮಗಾರಿಗಳ ಪ್ರಗತಿ ಬಗ್ಗೆ ವೀಕ್ಷಣೆ ಮಾಡಿದರು.

ಸಚಿವರು, ಶಾಸಕರು, ಅಧಿಕಾರಿಗಳ ದಂಡು: ಮುಖ್ಯಮಂತ್ರಿಗಳ ನಗರ ಪ್ರದಕ್ಷಿಣೆ ವೇಳೆ ಸಚಿವರ, ಶಾಸಕರ ಮತ್ತು ಅಧಿಕಾರಿಗಳ ದಂಡಿತ್ತು. ಸಚಿವರಾದ ಕೆ.ಜೆ ಜಾರ್ಜ್‌, ಬೈರತಿ ಸುರೇಶ್‌, ಶಾಸಕರಾದ ರಿಜ್ವಾನ್‌ ಅರ್ಷದ್‌, ಬೈರತಿ ಬಸವರಾಜು, ಎ.ಸಿ ಶ್ರೀನಿವಾಸ್‌, ಬಿಡಿಎ ಅಧ್ಯಕ್ಷ ಎನ್‌.ಎ.ಹ್ಯಾರೀಸ್‌, ಪರಿಷತ್‌ ಸದಸ್ಯ ನಾಗರಾಜ್‌ ಯಾದವ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಸೇರಿದಂತೆ ಸ್ಥಳೀಯ ಕಾಂಗ್ರೆಸ್‌ ಮುಖಂಡರು, ಪಾಲಿಕೆ ಮಾಜಿ ಸದಸ್ಯರು ಮುಖ್ಯಮಂತ್ರಿಗಳಿಗೆ ಸಾಥ್‌ ನೀಡಿದರು.

ಬಿಬಿಎಂಪಿ ಆಡಳಿತಾಧಿಕಾರಿ ಎಸ್‌.ಆರ್‌ ಉಮಾಶಂಕರ್‌, ಮುಖ್ಯ ಆಯುಕ್ತ ತುಷಾರ್‌ ಗಿರಿ ನಾಥ್‌, ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್‌ ರಾವ್‌, ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹರ್‌, ಬಿಎಂಆಡಿಆರ್‌ಎ ಆಯುಕ್ತ ರಾಜೇಂದ್ರ ಚೋಳನ್‌, ಬಿಬಿಎಂಪಿ ವಿಶೇಷ ಆಯುಕ್ತ ಡಾ. ಕೆ. ಹರೀಶ್‌ ಕುಮಾರ್‌, ವಲಯ ಆಯುಕ್ತರಾದ ಸ್ನೇಹಲ್‌, ಅರ್ಚನಾ, ಕರೀಗೌಡ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದು, ನಗರದ ರಸ್ತೆ ಗುಂಡಿಗಳ ದುರಸ್ತಿ, ರಸ್ತೆ ಅಭಿವೃದ್ಧಿ ಮತ್ತು ಇಲಾಖೆಗಳಿಂದ ಕೈಗೊಳ್ಳಲಾಗಿರುವ ಮೂಲಭೂತ ಸೌಕರ್ಯ ಕಾಮಗಾರಿಗಳ ಕಾರ್ಯ ಪ್ರಗತಿಯ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದರು.

ಕಾಲಮಿತಿಯೊಳಗೆ ಕಾಮಗಾರಿ ಮುಗಿಸಿ: ವಿವಿಧ ಕಾಮಗಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಸಿಎಂ ನಿಗದಿತ ಕಾಲ ಮಿತಿಯ ಒಳಗೆ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ಕೊಟ್ಟರು.

Advertisement

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೊಂಡಿರುವ ಹೆಬ್ಟಾಳದ ಅಂಡರ್‌ಪಾಸ್‌ ಹಾಗೂ ಫ್ಲೈಓವರ್‌ ಕಾಮಗಾರಿ ಸಂಪೂರ್ಣ ವೀಕ್ಷಿಸಿದರು. ಕಾಲಮಿತಿಯಲ್ಲಿ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವಂತೆ ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಿಎಂ ಸಿದ್ದರಾಮಯ್ಯ ಕಣ್ಣಿಗೆ ಬಿದ್ದ ಕಳಪೆ ಕಾಮಗಾರಿ ನಗರ ಪ್ರದಕ್ಷಿಣ ವೇಳೆ ಹಲವು ಕಡೆಗಳಲ್ಲಿ ಕಳಪೆ ಕಾಮಗಾರಿ ನಡೆದಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಣ್ಣಿಗೆ ಬಿತ್ತು. ಹೆಣ್ಣೂರು ಜಂಕ್ಷನ್‌ ಬಳಿ ರಸ್ತೆ ಡಾಂಬರೀಕರಣದ ಬಗ್ಗೆ ಮಾಹಿತಿ ಕಲೆಹಾಕಿ ಗುಣಮಟ್ಟ ಕಾಯ್ದುಕೊಳ್ಳದಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಸಿಡಿಮಿಡಿಯಾದರು. ಇದೇನ್ರಿ ಗುಣಮಟ್ಟ ಎಂದು ಅಧಿಕಾರಿಗಳನ್ನ ಪ್ರಶ್ನೆ ಮಾಡಿದರು.

ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜೀ ಮಾಡಿಕೊಳ್ಳದೆ ಕೆಲಸ ಮಾಡಬೇಕು. ಕಳಪೆ ಕಾಮಗಾರಿಗಳನ್ನು ಸರಿಪಡಿಸಿ, ಮತ್ತೆ ಇಂತಹ ತಪ್ಪು ಮರುಕಳಿಸದಂತೆ ನೋಡಿಕೊಳ್ಳಬೇಕು. ಇಲ್ಲದೆ ಹೋದರೆ ಸಂಬಂಧ ಪಟ್ಟ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು. ರಸ್ತೆ ಗುಂಡಿ ಮುಚ್ಚುವ ಕಾರ್ಯದ ಬಗ್ಗೆ ಪಾಲಿಕೆ ಆಡಳಿತಾಧಿಕಾರಿ ಎಸ್‌.ಆರ್‌ ಉಮಾಶಂಕರ್‌ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸಿಎಂ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next