ಬೆಂಗಳೂರು : ಕೋವಿಡ್ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಹತ್ವದ ವಿಡಿಯೋ ಕಾನ್ಫರೆನ್ಸ್ ಸಭೆ ಹಿನ್ನೆಲೆಯಲ್ಲಿ ಬುಧವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ದಕ್ಷಿಣ ಕನ್ನಡ ಪ್ರವಾಸ ಕಾರ್ಯಕ್ರಮದಲ್ಲಿ ಮತ್ತೆ ಪರಿಷ್ಕರಣೆಯಾಗಿದೆ.
ಸಿಎಂ ಅವರು ಹೆಚ್ ಎ ಎಲ್ ವಿಮಾನ್ ನಿಲ್ದಾಣದಿಂದ ಹೊರಟು ಹೆಲಿಕ್ಯಾಪ್ಟರ್ ಮೂಲಕ ಸಂಜೆ 3 ಗಂಟೆಗೆ ಮೂಡಬಿದಿರೆಯ ಮಹಾವೀರ್ ಜೈನ ಕಾಲೇಜಿನ ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ. ಸಂಜೆ 7 ಗಂಟೆಯ ಬಳಿಕ ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಮೂಡು ಬಿದಿರೆಯ ಎಕ್ಸಲೆಂಟ್ ಪಿ.ಯೂ. ಕಾಲೇಜಿನ ನೂತನ ಅನ್ನದಾಸೋಹ ಕಟ್ಟಡ ಉದ್ಘಾಟನೆ, 3.30ಕ್ಕೆ ಜೈನ ಬಸದಿಗೆ ಭೇಟಿ, 3.50ಕ್ಕೆ ಮೂಡುಬಿದಿರೆಯ ಪ್ರಸ್ ಕ್ಲಬ್ ಆವರಣದಲ್ಲಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸುವರು. ಸಂಜೆ 4ರಿಂದ 5.30ರ ವರೆಗೆ ಮೂಡುಬಿದಿರೆಯ ಆಡಳಿತ ಸೌಧದ ಮುಂಭಾಗದಲ್ಲಿ ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರ ಕಚೇರಿಯ ಪ್ರಕಟಣೆ ತಿಳಿಸಿದೆ.
ಕೊನೆಯ ಕ್ಷಣದಲ್ಲಿ ರದ್ದು
ಮುಖ್ಯಮಂತ್ರಿಗಳು ಬೆಳಗ್ಗೆ ಮಂಗಳೂರಿಗೆ ಆಗಮಿಸಿ, ಅಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾಗುವುದು ನಿಗದಿಯಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ರದ್ದಾಗಿದೆ. ಸಿಎಂ ಮಹತ್ವದ ಸಭೆಯನ್ನು ಬೆಂಗಳೂರಿನಲ್ಲೇ ಇದ್ದು ಭಾಗಿಯಾಗಿದ್ದಾರೆ.
2021ರ ಎ. 8ರಂದು ದ.ಕ. ಜಿ.ಪಂ.ನ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಜತೆ ಕೊರೊನಾ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ಜತೆ ವೀಡಿಯೋ ಸಂವಾದ ಆಯೋಜನೆಗೊಂಡಿದ್ದರೂ ಕೊನೆಯ ಕ್ಷಣದಲ್ಲಿ ರದ್ದುಗೊಂಡಿತ್ತು.