Advertisement

CM ಅಭಿಯೋಜನೆ: ರಾಷ್ಟ್ರಪತಿಗಳಿಗೆ ಕಾಂಗ್ರೆಸ್‌ ಮಾಡಿದ್ದ ಮನವಿಗೆ ಸ್ಪಂದನೆ

02:26 AM Aug 31, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್‌ ಹಿಂಪಡೆಯುವಂತೆ ನಿರ್ದೇಶನ ನೀಡಬೇಕು ಎಂದು ರಾಷ್ಟ್ರಪತಿಗಳಿಗೆ ಕಾಂಗ್ರೆಸ್‌ ಮುಖಂಡ ರಮೇಶ್‌ಬಾಬು ಮನವಿ ಮಾಡಿದ್ದು ಸೂಕ್ತ ಕ್ರಮ ವಹಿಸುವಂತೆ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಗೆ ರಾಷ್ಟ್ರಪತಿ ಭವನ ಸೂಚಿಸಿದೆ.

Advertisement

ಗುರುವಾರ ಬೆಳಗ್ಗೆ 10.51ಕ್ಕೆ ರಮೇಶ್‌ ಬಾಬು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಅವರ ಕಾರ್ಯದರ್ಶಿ ಮೇಲ್‌ಗೆ 2 ಪುಟಗಳ ಮನವಿ ಪತ್ರ ರವಾನಿಸಿದ್ದು ಇದಕ್ಕೆ ಅದೇ ದಿನ ಮಧ್ಯಾಹ್ನ 12.09ಕ್ಕೆ ಮರು ಉತ್ತರವೂ ಬಂದಿದೆ. ಕರ್ನಾಟಕ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ನೀಡಿರುವ ಪ್ರಾಸಿಕ್ಯೂಷನ್‌ ಅನುಮತಿಯನ್ನು ಹಿಂಪಡೆಯುವ ವಿಚಾರದಲ್ಲಿ ತುರ್ತು ಮಧ್ಯಪ್ರವೇಶ ಮಾಡುವಂತೆ ಮನವಿ ಮಾಡಿರುವ ರಮೇಶ್‌ಬಾಬು, ಇದೊಂದು ರಾಜಕೀಯ ಪ್ರೇರಿತ ಹಾಗೂ ನ್ಯಾಯಸಮ್ಮತವಲ್ಲದ ತೀರ್ಮಾನ.

ಇದು ಪ್ರಜಾಪ್ರಭುತ್ವಕ್ಕೆ ಮಾರಕ ಹಾಗೂ ನಮ್ಮ ದೇಶ ನಿರ್ಮಾಣಗೊಂಡಿರುವ ಸಂವಿಧಾನದ ಮೌಲ್ಯಗಳಿಗೆ ಬೆದರಿಕೆ ಒಡ್ಡುವ ನಿರ್ಣಯ. ಇದು ಅಸಾಂವಿಧಾನಿಕ. ಸ್ವಾತಂತ್ರ್ಯ ದಿನಾಚರಣೆಯ ಮರುದಿನವೇ ಈ ಕ್ರಮ ಚುನಾಯಿತ ಸರ್ಕಾರದ ಮೇಲಿನ ದಾಳಿ ಎಂದು ಪತ್ರದಲ್ಲಿ ಉಲ್ಲೇಖೀಸಿದ್ದಾರೆ.

ಇದಕ್ಕೆ ಉತ್ತರಿಸಿರುವ ರಾಷ್ಟ್ರಪತಿಗಳ ಕಾರ್ಯದರ್ಶಿ, ಮುಂದಿನ ಕ್ರಮವಾಗಿ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ತಮ್ಮ ಮನವಿಯನ್ನು ಕಳುಹಿಸಿಕೊಡಲಾಗಿದೆ ಎಂದಿದ್ದಾರೆ. ಮುಖ್ಯ ಕಾರ್ಯದರ್ಶಿ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ನೋಡಿಕೊಂಡು ಮುಂದುವರಿಯುವುದಾಗಿ ರಮೇಶ್‌ ಬಾಬು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next