ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ನಾಯಕ ಪ್ರಕಾಶರನ್ನು ಹತ್ಯೆ ಮಾಡಿದ ಹಂತಕರನ್ನು ಶೂಟ್ ಔಟ್ ಮಾಡುವಂತೆ ಸಿಎಂ ಕುಮಾರಸ್ವಾಮಿ ಸೂಚಿಸಿರುವುದಕ್ಕೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಕಿಡಿ ಕಾರಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ ಮುಖ್ಯಮಂತ್ರಿಗಳು ಬೇಜವಾಬ್ಧಾರಿ ಹೇಳಿಕೆ ನೀಡಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆಗೆ ಏನಾಗಬೇಕು . ಜೆಡಿಎಸ್ ಕಾರ್ಯಕರ್ತ ಎನ್ನುವ ವ್ಯಾಮೋಹದಲ್ಲಿ ಮುಖ್ಯಮಂತ್ರಿ ಅನ್ನುವುದನ್ನು ಮರೆತು ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕುಮಾರಸ್ವಾಮಿ ಅವರು ಈ ಹಿಂದೆಯೂ ಹಲವು ಬಾರಿ ಬೇಜವಾಬ್ಧಾರಿ ಹೇಳಿಕೆಗಳನ್ನು ನೀಡಿ ಗೊಂದಲ ಉಂಟು ಮಾಡಿದ್ದಾರೆ. ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ನೀಡುವ ಹಾಗೆ ಮಾತನಾಡಿದ್ದಾರೆ.ತಕ್ಷಣ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಯಾವುದೇ ಪಕ್ಷದ ಕಾರ್ಯಕರ್ತರ ಕೊಲೆಗಳು ಆಗಬಾರದು, ಕೊಲೆ ಅಕ್ಷಮ್ಯ ಅಪರಾಧ. ಕೊಲೆ ಮಾಡಿದವರಿಗೆ ಜೀವಾವಧಿ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಹಾಡಹಗಲೇ ಕೊಲೆ
ಬೆಂಗಳೂರು-ಮೈಸೂರು ಹೆದ್ದಾರಿಯ ಮದ್ದೂರಿನ ಟಿ.ಬಿ. ಸರ್ಕಲ್ ಬಳಿಯ ತಗ್ಗ ಹಳ್ಳಿ ಚಂದ್ರು ಹೀರೋ ಹೋಂಡಾ ಶೋರೂಂ ಎದುರು ಜೆಡಿಎಸ್ ಮುಖಂಡ ಪ್ರಕಾಶ್ ಅವರನ್ನು ದುಷ್ಕರ್ಮಿಗಳು ಹಾಡಹಗಲೇ ಹತ್ಯೆ ಮಾಡಿದ್ದಾರೆ.
ಜೆಡಿಎಸ್ ಮುಖಂಡ ಹಾಗೂ ಜಿಪಂ ಮಾಜಿ ಅಧ್ಯಕ್ಷೆ ಲಲಿತಾ ಅವರ ಪತಿ ಪ್ರಕಾಶ್ (50)ಕೊಲೆಯಾದವರು. 2016ರ ಡಿಸೆಂಬರ್ 25ರಂದು ತೊಪ್ಪನಹಳ್ಳಿ ಗ್ರಾಮದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಜೋಡಿ ಕೊಲೆ ಪ್ರಕರಣಕ್ಕೆ ಪ್ರಕಾಶ್ ಪ್ರಮುಖ ಸಾಕ್ಷಿದಾರರಾಗಿದ್ದರು.