ತಮ್ಮ ಗೃಹ ಕಚೇರಿ “ಕೃಷ್ಣಾ’ದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲಿಸಿದ ಮುಖ್ಯಮಂತ್ರಿಗಳು ಈ ಸೂಚನೆ ನೀಡಿದ್ದಾರೆ.
Advertisement
ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಕಾರ್ಯಚಟುವಟಿಕೆಗಳು ಬೇರೆ ಬೇರೆ ಅವಧಿಯಲ್ಲಿ ನಡೆಯುವುದರಿಂದ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ. ಇದರಿಂದಾಗಿ ರಾಜ್ಯದ ಎಲ್ಲ ವಿವಿಗಳಲ್ಲಿ ಏಕರೂಪದ ಕ್ಯಾಲೆಂಡರ್ ಆಫ್ ಇವೆಂಟ್ಸ್ ಜಾರಿಗೊಳಿಸುವುದು ಸೂಕ್ತ ಎಂದು ಸಿಎಂ ಸೂಚಿಸಿದ್ದಾರೆ.
Related Articles
Advertisement
ರಾಜ್ಯದ 16 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳ ಸುಧಾರಣೆಗೆ ಒತ್ತು ನೀಡಬೇಕು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಲ್.ಎಂ.ಎಸ್. ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಲ್ಯಾಪ್‌ಟಾಪ್, ಪಿ.ಎಚ್.ಡಿ. ವಿದ್ಯಾರ್ಥಿಗಳಿಗೆ ಭತ್ತೆ ನೀಡುವ ಬಗ್ಗೆ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹಣಕಾಸು ಶಿಸ್ತು, ನೇಮಕಾತಿಯಲ್ಲಿ ಪಾರದರ್ಶಕತೆ ತರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ಪಡೆಯುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
ಮೈಸೂರು ಮಹಾರಾಣಿ ಆರ್ಟ್ಸ್ ಕಾಲೇಜು ಹಾಸ್ಟೆಲ್ ಆವರಣದಲ್ಲಿ 99 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆರ್ಟ್ಸ್ ಮತ್ತು ವಿಜ್ಞಾನ ಕಾಲೇಜಿನ ತಲಾ ಸಾವಿರ ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸುವ ಹಾಸ್ಟೆಲ್ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು. ಶಿಥಿಲಾವಸ್ಥೆಯಲ್ಲಿರುವ ಮೈಸೂರು ಮಹಾರಾಣಿ ವಿಜ್ಞಾನ ಕಾಲೇಜಿನ ನವೀಕರಣ/ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು. ದಸರಾ ಸಂದರ್ಭದಲ್ಲಿ ತಾವು ಸ್ವತಃ ಮಹಾರಾಣಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ವಿಶ್ವಬ್ಯಾಂಕ್ ಸಾಲದಿಂದ ಕಾಲೇಜುಗಳ ಅಭಿವೃದ್ಧಿಸಭೆಯ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ| ಎಂ. ಸಿ. ಸುಧಾಕರ್, ಉತ್ಕೃಷ್ಟ ಶಿಕ್ಷಣ ಕೇಂದ್ರಗಳೆಂದು ಪ್ರತಿ ಜಿಲ್ಲೆಯಲ್ಲಿ ಒಂದು ಪ್ರಥಮ ದರ್ಜೆ ಕಾಲೇಜು ಮತ್ತು ತಲಾ ಒಂದು ಪಾಲಿಟೆಕ್ನಿಕ್ ಕಾಲೇಜು, ಒಟ್ಟು ಹತ್ತು ಎಂಜಿನಿಯರಿಂಗ್ ಕಾಲೇಜನ್ನು ಉನ್ನತೀಕರಿಸುವ ಯೋಜನೆ ಹೊಂದಿದ್ದೇವೆ. ಇದಕ್ಕಾಗಿ ವರ್ಲ್ಡ್ ಬ್ಯಾಂಕ್‌ನಿಂದ 15ರಿಂದ 20 ವರ್ಷಕ್ಕೆ 1,750 ಕೋಟಿ ರೂ ಸಾಲ ಪಡೆಯುವ ಚಿಂತನೆ ನಡೆಸಿದ್ದೇವೆ. ಈ ಪ್ರಸ್ತಾವನೆಗೆ ಒಪ್ಪಿಗೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಕೋರಿದ್ದೇವೆ ಎಂದು ತಿಳಿಸಿದರು. ಅತಿಥಿ ಉಪನ್ಯಾಸಕರಿಗೆ ಈ ಹಿಂದೆ ಕಾಲೇಜು ಆರಂಭ ತಡವಾಗುತ್ತಿರುವ ಕಾರಣವೊಡ್ಡಿ 7-8 ತಿಂಗಳ ಸಂಬಳ ನೀಡಲಾಗುತ್ತಿತ್ತು. ಇನ್ನೀಗ ಹತ್ತು ತಿಂಗಳು ಸಂಬಳ ನೀಡುವ ಬಗ್ಗೆ ಚರ್ಚೆ ನಡೆದಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ 16 ಸಾವಿರಕ್ಕೂ ಹೆಚ್ಚು ಹುದ್ದೆಗಳಿದ್ದು, ಈ ಪೈಕಿ ಸುಮಾರು ಆರು ಸಾವಿರ ಹುದ್ದೆಗಳು ಖಾಲಿ ಇವೆ. ಜತೆಗೆ ಬೋಧಕೇತರ ಹುದ್ದೆಗಳನ್ನು ತುಂಬುವ ಬಗ್ಗೆ ಸಿಎಂ ಜತೆ ಚರ್ಚೆ ನಡೆಸಿದ್ದೇವೆ ಎಂದರು.