Advertisement

ಸಿಎಂ, ಸಚಿವರ ನಡುವೆ ಹಗ್ಗಜಗ್ಗಾಟ

07:24 AM Nov 17, 2017 | Team Udayavani |

ಬೆಳಗಾವಿ: ವೈದ್ಯರ ಒತ್ತಾಯದಂತೆ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮೇಲೆ ಸರ್ಕಾರದ ನಿಯಂತ್ರಣ ಹೇರುವ ಕೆಪಿಎಂಇ ವಿಧೇಯಕದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲು ಆರೋಗ್ಯ ಸಚಿವ ರಮೇಶ್‌ಕುಮಾರ್‌ ಒಪ್ಪಿಕೊಂಡಿದ್ದಾರೆ. ಆದರೆ, ಜೈಲುಶಿಕ್ಷೆ ಹಾಗೂ ದಂಡನೆ ವಿಧಿಸುವ ಪ್ರಸ್ತಾಪಗಳನ್ನು ಕೈ ಬಿಡಲು ನಿರಾಕರಿಸಿದ್ದಾರೆ. ವೈದ್ಯರಿಂದ ತೀವ್ರ ಒತ್ತಡ ಉಂಟಾದರೆ ಜೈಲು ಶಿಕ್ಷೆಯನ್ನು ಸ್ವಲ್ಪ ಸಡಿಲಗೊಳಿಸಲು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆಯೆಂದು ಹೇಳಲಾಗಿದೆ.

Advertisement

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ವಿವಾದಿತ ವಿಧೇಯಕ ಕುರಿತ ಚರ್ಚೆಯ ಸಭೆಯಲ್ಲಿ ತಮಗೆ ಇಷ್ಟವಿಲ್ಲದಿದ್ದರೂ ಸಿಎಂ ಹಾಗೂ ಹಿರಿಯ ಸಚಿವರ ಸಲಹೆ ಮೇರೆಗೆ ಆಸ್ಪತ್ರೆಗಳಲ್ಲಿ ದರಪಟ್ಟಿ ನಿಗದಿಪಡಿಸುವಾಗ ವೈದ್ಯರ ಶುಲ್ಕವನ್ನು ಕೈಬಿಡುವುದು ಮತ್ತು ಕುಂದುಕೊರತೆಗಳ ಸಮಿತಿಗೆ ಯಾರನ್ನು ನೇಮಕ ಮಾಡಬೇಕು ಎಂಬ ಬಗ್ಗೆ ವೈದ್ಯರ ಸಲಹೆ ಪಡೆದು ನಿರ್ಧರಿಸಲು ಸಚಿವ ರಮೇಶ್‌ಕುಮಾರ್‌ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಕೆಪಿಎಂಇ ವಿಧೇಯಕಕ್ಕೆ ಖಾಸಗಿ ವೈದ್ಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಅದರಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ಮಾಡುವ ಕುರಿತಂತೆ ಚರ್ಚಿಸಲು ಮುಖ್ಯಮಂತ್ರಿ
ಗುರುವಾರ ಹಿರಿಯ ಸಚಿವರ ಸಭೆ ಕರೆದಿದ್ದರು. ಈ ಸಭೆಯಲ್ಲಿ ವಿಧೇಯಕದಲ್ಲಿ ತಿದ್ದುಪಡಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಪಟ್ಟಿಯೊಂದನ್ನು ಮುಂದಿಟ್ಟಿದ್ದು, ಅದಕ್ಕೆ ಇತರ ಕೆಲವು ಸಚಿವರು ಬೆಂಬಲ ವ್ಯಕ್ತಪಡಿಸಿದರು ಎನ್ನಲಾಗಿದೆ.
ಪ್ರಸ್ತುತ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಕಠಿಣ ನಿರ್ಧಾರ ಕೈಗೊಂಡರೆ ಸಮಸ್ಯೆ ಎದುರಾಗಬಹುದು ಎಂದು ಮುಖ್ಯಮಂತ್ರಿಗಳು ಹೇಳಿದಾಗ ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ ಮತ್ತು ಟಿ.ಬಿ.ಜಯಚಂದ್ರ ಅವರು ದನಿಗೂಡಿಸಿದರು ಎಂದು ಹೇಳಲಾಗಿದೆ.

ಇದಕ್ಕೆ ಒಪ್ಪದ ರಮೇಶ್‌ಕುಮಾರ್‌, ವಿಧೇಯಕವನ್ನು ಯಥಾಸ್ಥಿತಿ ಸದನದಲ್ಲಿ ಮಂಡಿಸೋಣ. ಆ ಸಂದರ್ಭದಲ್ಲಿ ಸದಸ್ಯರಿಂದ ಬರುವ ಅಭಿಪ್ರಾಯ ಪರಿಗಣಿಸಿ ಬೇಕಿದ್ದರೆ ಬದಲಾವಣೆ ಮಾಡೋಣ ಎಂದು ಪಟ್ಟು ಹಿಡಿದರು ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ನಡೆಯುವ ಖಾಸಗಿ ವೈದ್ಯರ ಪ್ರತಿನಿಧಿಗಳ ಸಭೆಯಲ್ಲಿ ವೈದ್ಯರ ಸಲಹೆ ಪಡೆಯುವ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳೋಣ ಎಂದು ಸಲಹೆ ನೀಡಿದರು ಎಂದು ತಿಳಿದು ಬಂದಿದೆ. ಈ ಮಧ್ಯೆ ಸೋಮವಾರ  ವಿಧೇಯಕ ಮಂಡಿಸುವ ಇಂಗಿತ ವ್ಯಕ್ತಪಡಿಸಿದ ರಮೇಶ್‌ಕುಮಾರ್‌, ಈ ಬಗ್ಗೆ ಸದನದ ಅಭಿಪ್ರಾಯ ಪಡೆಯಲು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next