Advertisement

ಜೆಡಿಎಸ್‌ ಶಾಸಕರನ್ನು ಭೇಟಿಯಾದ ಸಿಎಂ

06:49 AM Jul 10, 2019 | Lakshmi GovindaRaj |

ದೇವನಹಳ್ಳಿ: ದೇವನಹಳ್ಳಿ ತಾಲೂಕಿನ ನಂದಿಬೆಟ್ಟದ ರಸ್ತೆಯ ಕೋಡಗುರ್ಕಿ ಗ್ರಾಮದ ಸಮೀಪವಿರುವ ಪ್ರಸ್ಟೀಜ್‌ ಗಾಲ್ಫ್ ರೇಸಾರ್ಟ್‌ನಲ್ಲಿ ತಂಗಿರುವ ಜೆಡಿಎಸ್‌ ಶಾಸಕರನ್ನು ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದರು. ಆದರೆ ಭೇಟಿಯಾದ ಬಳಿಕ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡದೆ ತೆರಳಿದರು.

Advertisement

ಸೋಮವಾರ ರಾತ್ರಿ 23 ಶಾಸಕರ ತಂಡ ಬಸ್ಸಿನಲ್ಲಿ ನಂದಿಬೆಟ್ಟದ ಮಾರ್ಗ ಮಧ್ಯದಲ್ಲಿರುವ ರೇಸಾರ್ಟ್‌ಗೆ ಬಂದಿತ್ತು. ರೇಸಾರ್ಟ್‌ ಸುತ್ತಲು ಮತ್ತು ಮುಂಭಾಗದಲ್ಲಿ ಪೊಲೀಸ್‌ ಬಿಗಿ ಭದ್ರತೆ ವ್ಯವಸ್ಥೆಗೊಳಿಸಲಾಗಿದೆ. ಮಂಗಳವಾರ ಮಧ್ಯಾಹ್ನ 2.15ರ ಸಮಯದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭೇಟಿ ನೀಡಿ, ಶಾಸಕರೊಂದಿಗೆ ಚರ್ಚಿಸಿದರು. ಆದರೆ ಏನು ಚರ್ಚೆ ನಡೆಯಿತು ಎಂಬುದರ ಕುರಿತು ಸಿಎಂ ಮಾಧ್ಯಮದವರಿಗೆ ಪ್ರತಿಕ್ರಿಯಿಸಲಿಲ್ಲ.

ಈಗಾಗಲೇ ಜೆಡಿಎಸ್‌ನ 3 ಶಾಸಕರು ರಾಜೀನಾಮೆ ನೀಡಿದ್ದು, ಆಪರೇಷನ್‌ ಕಮಲಕ್ಕೆ ಒಳಗಾಗಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಇದೀಗ ಉಳಿದಂತಹ ಶಾಸಕರುಗಳು ತಮ್ಮ ಸ್ವಕ್ಷೇತ್ರ ಅಥವಾ ಬೆಂಗಳೂರಿನಲ್ಲಿಯೇ ನೆಲೆಸಿದ್ದರೆ, ಅವರಿಗೂ ಆಮಿಷವೊಡ್ಡಿ ಕೇಸರಿ ಪಾಳೆಯ ಸೇರುವ ಆತಂಕದಲ್ಲಿ ರೇಸಾರ್ಟ್‌ಗೆ ತಂದಿರಿಸಲಾಗಿದೆ.

ಸಚಿವ ಬಂಡೆಪ್ಪ ಕಾಶೆಂಪೂರ್‌ ಮಾತನಾಡಿ, ಎಲ್ಲ ಶಾಸಕರು ಒಗ್ಗಟ್ಟಿನಿಂದ ಇರಬೇಕೆಂದು ಎಲ್ಲರೂ ಇಲ್ಲಿ ಸೇರಿದ್ದೇವೆ. ವರಿಷ್ಠರಿಂದ ಬುಲಾವ್‌ ಬರುತ್ತದೆಯೋ, ಆಗ ಹೊರಗೆ ಬರುತ್ತೇವೆ. ಪ್ರತಿ ಮಂಗಳವಾರ ದೇವಿ ಮಾರಮ್ಮ ಗುಡಿಗೆ ಹೋಗುವ ಪದ್ಧತಿ ಇದೆ. ಅದರಂತೆ ದೇವನಹಳ್ಳಿಯಲ್ಲಿರುವ ಮಾರಮ್ಮದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿ ಬಂದಿದ್ದೇನೆ ಎಂದು ಹೇಳಿದರು.
ಜೆಡಿಎಸ್‌ ಶಾಸಕರು, ಭೇಟಿ, ಸಿಎಂ, JDS legislators, meet, CM
ರೇಸಾರ್ಟ್‌ನಲ್ಲಿ ಜೆಡಿಎಸ್‌ ಶಾಸಕರು ವಾಸ್ತವ ಹೂಡುತ್ತಿರುವುದು ಮೊದಲೇನಲ್ಲ. ಈ ಹಿಂದೆಯೂ ಮೈತ್ರಿ ಸರ್ಕಾರ ಗದ್ದುಗೆಗೆ ಏರುವ ಹಾಗೂ ವಿಶ್ವಾಸ ಮತಯಾಚನೆ ಮಾಡುವ ಮುನ್ನಾ ಕೂಡ ಇದೇ ರೇಸಾರ್ಟ್‌ನಲ್ಲಿ ತಂಗಿದ್ದರು. ಯಡಿಯೂರಪ್ಪ ಬಹುಮತ ಸಾಬೀತು ಪಡಿಸುವ ವೇಳೆ ಆಪರೇಷನ್‌ ಕಮಲಕ್ಕೆ ಒಳಗಾಗುವ ಬೀತಿಯಲ್ಲಿ ಎಲ್ಲಾ ಶಾಸಕರುಗಳನ್ನು ಇಲ್ಲಿಗೆ ತರಲಾಗಿತ್ತು. ಶಾಸಕರ ವಾಸ್ತವ್ಯ ಶುಕ್ರವಾರದವರೆಗೂ ಇಲ್ಲಿಯೇ ಇರಲಿದೆ ಎಂದು ತಿಳಿದಿದ್ದು, ಬಳಿಕ ಹೊಸ ಬೆಳವಣಿಗೆಗಳು ಕಾಣುವ ಸಾಧ್ಯತೆಗಳಿವೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next